ನಿಟ್ಟೆ ಡಾ.ವಿನಯ ಹೆಗ್ಡೆ ಅವರು ಹೆಸರಿಗೆ ತಕ್ಕಂತೆ ವಿನಯವಂತಿಕೆ, ಬದ್ಧತೆ, ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡು ಅನುಷ್ಠಾನಿಸಿದ ಸರಳ ಜೀವಿ. ಆಗರ್ಭ ಶ್ರೀಮಂತರಾದರೂ ಅದೇ ಸಾಂಪ್ರದಾಯಿಕ ಜೀವನಕ್ಕೆ ಒಗ್ಗಿ ಹೋದವರು. ಎಲ್ಲರಂತೆ ಸಾಮಾನ್ಯ ಬದುಕನ್ನು ಇಷ್ಟಪಟ್ಟ ವಿನಯ ಹೆಗ್ಡೆ ಅವರು, ನುಡಿದಂತೆ ನಡೆದವರು, ಯಾರಿಗೂ ನೋವಾಗದಂತೆ ನೋಡಿಕೊಂಡವರು.

ಮಂಗಳೂರು: ನಿಟ್ಟೆ ಡಾ.ವಿನಯ ಹೆಗ್ಡೆ ಅವರು ಹೆಸರಿಗೆ ತಕ್ಕಂತೆ ವಿನಯವಂತಿಕೆ, ಬದ್ಧತೆ, ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡು ಅನುಷ್ಠಾನಿಸಿದ ಸರಳ ಜೀವಿ. ಆಗರ್ಭ ಶ್ರೀಮಂತರಾದರೂ ಅದೇ ಸಾಂಪ್ರದಾಯಿಕ ಜೀವನಕ್ಕೆ ಒಗ್ಗಿ ಹೋದವರು. ಎಲ್ಲರಂತೆ ಸಾಮಾನ್ಯ ಬದುಕನ್ನು ಇಷ್ಟಪಟ್ಟ ವಿನಯ ಹೆಗ್ಡೆ ಅವರು, ನುಡಿದಂತೆ ನಡೆದವರು, ಯಾರಿಗೂ ನೋವಾಗದಂತೆ ನೋಡಿಕೊಂಡವರು. ಅದೇ ನಯ, ವಿನಯ, ಸಹನಶೀಲತೆ, ಹೃದಯವಂತಿಕೆ. ಸರ್ವಧರ್ಮದಲ್ಲಿ ಸಮಾನತೆ ಕಂಡ ವಿನಯ ಹೆಗ್ಡೆ ಅವರು ಸರ್ವರ ಆಚರಣೆಗೂ ಬದ್ಧರಾಗಿದ್ದವರು. ಆರಂಭದಿಂದ ಕೊನೆ ವರೆಗೂ ಒಂದೇ ರೀತಿಯ ಜೀವನ ಶೈಲಿಯನ್ನು ರೂಢಿಸಿಕೊಂಡವರು. 3-4 ಗಂಟೆಗೇ ಎದ್ದು, 8 ಗಂಟೆಗೆ ಕಚೇರಿಗೆ ಹಾಜರ್‌!

ನಿಟ್ಟೆ ಡಾ. ವಿನಯ ಹೆಗ್ಡೆ ಅವರು ಮಂಗಳೂರಿನ ಕದ್ರಿಯಲ್ಲಿ ಪತ್ನಿ, ಪುತ್ರನ ಜೊತೆ ವಾಸ. ಬಹಳ ವರ್ಷಗಳಿಂದಲೂ ಮುಂಜಾನೆ 3-4 ಗಂಟೆಗೆ ಏಳುತ್ತಿದ್ದರು. ನಿತ್ಯಕರ್ಮ ಮುಗಿಸಿ ವಾಕಿಂಗ್‌ ಹೋಗಿ, ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದರು. ಬೆಳಗ್ಗೆ 7 ಗಂಟೆ ವೇಳೆಗೆ ಹೊರಡಲು ಸಿದ್ಧವಾಗುತ್ತಿದ್ದರು. ಕಚೇರಿಗೆ ದಿನನಿತ್ಯವೂ 8 ಗಂಟೆಗೆ ತಪ್ಪದೇ ಹಾಜರ್‌!

ಡಾ. ವಿನಯ ಹೆಗ್ಡೆ ಅವರಿಗೆ ಮೂರು ಕಡೆ ಕಚೇರಿ ಇದೆ. ಮಂಗಳೂರಿನ ರಾಮಭವನ ಕಾಂಪ್ಲೆಕ್‌, ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಹಾಗೂ ಕಾರ್ಕಳ ನಿಟ್ಟೆಯ ಕ್ಯಾಂಪಸ್‌. ವಿನಯ ಹೆಗ್ಡೆ ಮಂಗಳೂರಲ್ಲಿ ಇದ್ದಾಗ ಈ ಮೂರು ಕಡೆಯ ಪೈಕಿ ಒಂದು ಕಡೆ ಇದ್ದೇ ಇರುತ್ತಿದ್ದರು. ಯಾರು ಬರಲಿ, ಬಾರದೇ ಇರಲಿ, ನಿಟ್ಟೆ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ವಿನಯ ಹೆಗ್ಡೆ ಅವರು ಬೆಳಗ್ಗೆ 8 ಗಂಟೆಗೆ ಕಚೇರಿಯಲ್ಲಿ ಹಾಜರ್‌ ಇರುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ಸಮಯ ಪಾಲನೆ, ಜೀವನವನ್ನು ಒಗ್ಗಿಸಿಕೊಂಡಿದ್ದರು. ಕೊರೋನಾ ಬಳಿಕ ಶ್ವಾಸಕೋಶದಲ್ಲಿನ ಸಮಸ್ಯೆಯಿಂದ ಸಾರ್ವಜನಿಕ ಓಡಾಟದಿಂದ ಸ್ವಲ್ಪ ದೂರವೇ ಉಳಿಯುತ್ತಿದ್ದರು.

ಪೇಜಾವರ ವಿಶ್ವೇಶತೀರ್ಥರ ಪರಮ ಭಕ್ತ:

ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಪರ ಭಕ್ತರಾಗಿದ್ದ ವಿನಯ ಹೆಗ್ಡೆ, ಅವರಿಂದ ಅನುಗ್ರಹಿತರಾಗಿದ್ದರು. ವಿಶ್ವೇಶತೀರ್ಥರ ಜೊತೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದರು. ಪೇಜಾವರಶ್ರೀಗಳನ್ನು ಸಾಕ್ಷಾತ್‌ ದೇವರಂದೇ ಭಾವಿಸಿ ಎಲ್ಲರಲ್ಲೂ ನನಗೆ ‘ಅವರೇ ದೇವರು’ ಎಂದು ಅಭಿಮಾನ ಪೂರ್ವಕ ಹೇಳುತ್ತಿದ್ದರು.

ಆಡ್ವಾಣಿಯ ಪರಮಾಪ್ತ:

ರಾಷ್ಟ್ರೀಯವಾದಿಯಾಗಿದ್ದ ವಿನಯ ಹೆಗ್ಡೆ ಅವರು ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ, ಉತ್ತಮ ಬಾಂಧವ್ಯ ಹೊಂದಿದ್ದರು. ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿಯ ಪರಮಾಪ್ತರಾಗಿ ಗುರುತಿಸಿಕೊಂಡಿದ್ದ ವಿನಯ ಹೆಗ್ಡೆ ಅವರು, ದೆಹಲಿಗೆ ತೆರಳಿದಾಗಲೆಲ್ಲ ಆಡ್ವಾಣಿ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ಮಾತನಾಡದೆ ವಾಪಸ್‌ ಬರುತ್ತಿರಲಿಲ್ಲ. ಮೂರ್ನಾಲ್ಕು ಬಾರಿ ಮಂಗಳೂರಿಗೆ ಭೇಟಿ ನೀಡಿದಾಗಲೂ ಆಡ್ವಾಣಿ ಅ‍ವರು ವಿನಯ ಹೆಗ್ಡೆ ಮನೆಗೆ ಭೇಟಿ ಕೊಡುವುದನ್ನು ಮರೆಯುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅವರೊಳಗೆ ಬಾಂಧವ್ಯ ಬೆಳೆದಿತ್ತು.

ಆಗಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ ಸೇರಿದಂತೆ ಬಿಜೆಪಿ ನಾಯಕರು, ಹಿಂದು ಸಂಘಟನೆಗಳು ಮುಖಂಡರು ಹಾಗೂ ಅನೇಕ ಮಂದಿ ಗಣ್ಯರೊಂದಿಗೆ ವಿನಯ ಹೆಗ್ಡೆ ಒಡನಾಟ ಹೊಂದಿದ್ದರು.

2 ದಿನ ಹಿಂದೆ ಅಯೋಧ್ಯೆಗೆ ಭೇಟಿ ನೀಡಿ ಕೊನೆ ಇಚ್ಛೆ ಪೂರೈಸಿದ್ದರು!

ಡಾ. ವಿನಯ ಹೆಗ್ಡೆ ಅವರಿಗೆ ಅಯೋಧ್ಯೆಯಲ್ಲಿ ಪ್ರತಿಷ್ಠಾನ ಬ್ರಹ್ಮಕಲಶೋತ್ಸವಕ್ಕೆ ವಿಐಪಿ ಆಮಂತ್ರಣ ಬಂದಿತ್ತು. ಕೊರೋನಾ ಬಳಿಕ ಚೇತರಿಸುತ್ತಿದ್ದುದರಿಂದ ತೆರಳಿರಲಿಲ್ಲ. ಇತ್ತೀಚಿನ ಕೆಲವು ದಿನಗಳಿಂದ ಡಾ.ವಿನಯ ಹೆಗ್ಡೆ ಅವರು ತನ್ನ ಆಪ್ತರಾಗಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌ ಅವರಲ್ಲಿ ಮನದ ಇಂಗಿತ ವ್ಯಕ್ತಪಡಿಸಿದ್ದರು. ಒಮ್ಮೆ ಅಯೋಧ್ಯೆಗೆ ಹೋಗಿ ಶ್ರೀರಾಮಚಂದ್ರನ ದರ್ಶನ ಪಡೆದು ಪುನೀತನಾಗಬೇಕು ಎಂಬ ಅಪೇಕ್ಷೆಯನ್ನು ಮುಂದಿಟ್ಟಿದ್ದರು. ಅದರಂತೆ ಅಯೋಧ್ಯೆಗೆ ಕುಟುಂಬ ಸಮೇತರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌ ಜೊತೆ ಪ್ರತಿಷ್ಠಾ ವರ್ಧಂತಿಯ ದಿನ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದರು. ಅಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಷ್ಠಾ ವರ್ಧಂತಿ ಉತ್ಸವದಲ್ಲಿ ಸಕ್ರಿಯ ಭಾಗವಹಿಸಿದ್ದರು. ಮನದ ಇಚ್ಛೆಯಂತೆ ಮರ್ಯಾದಾ ಪುರುಷೋತ್ತಮನ ದರುಶನ ಮುಗಿಸಿ ಮಂಗಳವಾರವಷ್ಟೆ ಮಂಗಳೂರಿಗೆ ಮರಳಿದ್ದರು. ಗುರುವಾರ ನಸುಕಿನ ಜಾವ ಇನ್ನಿಲ್ಲವಾದರು.