ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜು ಶುರುವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಿಲ್ಲ. ಆದ್ದರಿಂದ ದೂರ ಪ್ರದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜು ಶುರುವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಿಲ್ಲ. ಆದ್ದರಿಂದ ದೂರ ಪ್ರದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಇತ್ತೀಚೆಗೆ ಡಿಸಿಪಿ ಮಿಥುನ್ ಅಧ್ಯಕ್ಷತೆಯಲ್ಲಿ ಕಮಿಷನರ್ ಕಚೇರಿಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಈ ಆರೋಪ ವ್ಯಕ್ತವಾಗಿದೆ.
ದಲಿತ ಮುಖಂಡ ಎಸ್.ಪಿ.ಆನಂದ ಅವರು, ಶಾಲೆ ಆರಂಭದ ಸಂದರ್ಭದಲ್ಲೇ ಇಲಾಖೆಗಳು ಹಾಸ್ಟೆಲ್ ಸೌಕರ್ಯ ಕಲ್ಪಿಸುವ ಬಗ್ಗೆ ಪ್ರಯತ್ನ ಮಾಡದ ಪರಿಣಾಮ ಸಮುದಾಯದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಪಿಜಿಗಳಲ್ಲಿ ದುಬಾರಿ ದರ ತೆತ್ತು ತಂಗುವಂತಾಗಿದೆ ಎಂದರು.ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಸ್ಟೆಲ್‌ಗಳ ಕೊರತೆ ಇದೆ. ಎರಡು ಹೊಸ ಹಾಸ್ಟೆಲ್ ಬೇಕು ಎಂದು ಬೆಂಗಳೂರಿನ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಮಾಡುವ ಅವಕಾಶದ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ನಗರದ ಲೇಡಿಗೋಷನ್ ಪ್ರದೇಶ, ರಥಬೀದಿ ಸೇರಿದಂತೆ ವಿವಿಧೆಡೆ ಫುಟ್‌ಪಾತ್‌ನಲ್ಲೇ ವ್ಯಾಪಾರ ಮಾಡುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಕೆಲವು ಏಜೆಂಟ್‌ಗಳು ವ್ಯಾಪಾರಿಗಳನ್ನು ರಸ್ತೆಯಲ್ಲಿ ವ್ಯಾಪಾರ ಮಾಡಿಸುತ್ತಿದ್ದಾರೆ. ಇವರನ್ನೆಲ್ಲ ತೆರವುಗೊಳಿಸಬೇಕು ಎಂದು ಆನಂದ್ ಆಗ್ರಹಿಸಿದರು. ಉತ್ತರಿಸಿದ ಡಿಸಿಪಿ ರವಿಶಂಕರ್ ಈ ಬಗ್ಗೆ ಪಾಲಿಕೆಗೆ ಪತ್ರ ಬರೆಯಲಾಗಿದ್ದು, ತೆರವುಗೊಳಿಸಲಿದ್ದಾರೆ ಎಂದರು.ಮಂಗಳೂರು ನಗರದಲ್ಲಿ ಫ್ಲೆಕ್ಸ್ ಹಾವಳಿ ಕಡಿಮೆಯಾಗಿದೆ. ಆದರೆ ಹೊರ ವಲಯ, ಗ್ರಾಮಾಂತರ ಭಾಗದಲ್ಲಿ ಇನ್ನೂ ಇದೆ. ಹೆದ್ದಾರಿಯ ಮಧ್ಯದಲ್ಲಿ ಕಟೌಟ್ ರೀತಿ ಅಳವಡಿಸುತ್ತಾರೆ. ಇದರಿಂದ ಅಪಾಯವಾಗುವ ಸಾಧ್ಯತೆಯೂ ಇದೆ. ಫ್ಲೆಕ್ಸ್ ಅಳವಡಿಸದಂತೆ ತಡೆಯಬೇಕು ಎಂದು ದಲಿತ ಮುಖಂಡ ಗಿರೀಶ್ ಕುಮಾರ್ ಆಗ್ರಹಿಸಿದರು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ದೂರು ಕೊಡಿ, ಇಲಾಖೆಯಿಂದಲೂ ಪತ್ರ ಬರೆದು ತೆರವಿಗೆ ಸೂಚಿಸಲಾಗುವುದು ಎಂದು ಡಿಸಿಪಿ ರವಿಶಂಕರ್ ತಿಳಿಸಿದರು.
ಉಳ್ಳಾಲದಲ್ಲಿ ಸಚಿವರ ನಿರ್ದೇಶನದಂತೆ ಸಂಚಾರದಲ್ಲಿ ಕೆಲವೊಂದು ಮಾರ್ಪಾಡು ಮಾಡಿದ್ದಾರೆ. ಒಂದು ವಾರ ಎಲ್ಲ ಕಡೆ ಪೊಲೀಸ್ ಸಿಬಂದಿ ನಿಯೋಜಿಸಿದ್ದ ಕಾರಣ ಸಂಚಾರ ವ್ಯವಸ್ಥೆ ಸುಗಮವಾಗಿತ್ತು. ಆದರೆ ಕಾಪಿಕಾಡ್, ಕುಂಪಲ ಮೊದಲಾದೆಡೆಗಳಲ್ಲಿ ನೋ ಎಂಟ್ರಿ, ವನ್ ವೇ ಗಳಲ್ಲಿಯೇ ವಾಹನ ಸವಾರರು ಸಾಗುತ್ತಿದ್ದಾರೆ. ಆದ್ದರಿಂದ ಮತ್ತೆ ಪೊಲೀಸರನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಮಿಥುನ್ ಭರವಸೆ ನೀಡಿದರು.ಕರಾವಳಿ ವೃತ್ತ- ಪಂಪ್‌ವೆಲ್ ನಡುವಿನ ರಸ್ತೆ ಕಾಮಗಾರಿ ಇನ್ನೊಂದು ಭಾಗದ ಕೆಲಸ ಆರಂಭವಾಗಿದ್ದು, ರಸ್ತೆ ತಡೆ ಮಾಡಿದ್ದಾರೆ. ಇದರಿಂದ ಸಮೀಪದ ಕುದ್ಕೋರಿಗುಡ್ಡದ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಹಿರಿಯ ನಾಗರಿಕರು, ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅನಿಲ್ ಕುಮಾರ್ ಆಗ್ರಹಿಸಿದರು.
ಡಿಸಿಆರ್‌ಇ ಎಸ್ಪಿ ಸೈಮನ್, ಎಸಿಪಿ ಶ್ರೀಕಾಂತ್, ರವೀಶ್ ನಾಯಕ್, ವಿಜಯಕ್ರಾಂತಿ ಮತ್ತಿತರರು ಇದ್ದರು. ಪಣಂಬೂರು ಠಾಣಾ ನಿರೀಕ್ಷಕ ಸಲೀಂ ಅಬ್ಬಾಸ್ ವರದಿ ವಾಚಿಸಿ, ವಂದಿಸಿದರು.--------------