ಸಾರಾಂಶ
ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಎಡಿಸಿ ಕುಮಾರಸ್ವಾಮಿ ಸ್ಪಷ್ಟನೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣಗಳು ಇದುವರೆಗೂ ವರದಿಯಾಗಿಲ್ಲ, ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಕರಣಗಳು ಇಲ್ಲವೆಂದಾಕ್ಷಣ ಸುಮ್ಮನಾಗಿಲ್ಲ, ಹಕ್ಕಿಜ್ವರ ತಡೆಗಾಗಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಅಗತ್ಯ ಸಹಕಾರ ನೀಡಲಿದ್ದು ಈಗಾಗಲೇ ರ್‍ಯಾಪಿಡ್ ರೆಸ್ಪಾನ್ಸ್ ತಂಡ ಸ್ಥಾಪಿಸಲಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇರುವುದು ಖಚಿತಪಟ್ಟಿದ್ದು, ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಚಿತ್ರದುರ್ಗಕ್ಕೆ ಕೋಳಿ ಸಾಗಾಣಿಕೆ ಇದೆ. ಗಡಿ ಪ್ರದೇಶದಲ್ಲಿ ಈಗಾಗಲೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‌ಗಳಲ್ಲಿ ಸೂಕ್ತ ನಿಗಾ ವಹಿಸಬೇಕು. ಕೋಳಿ ಫಾರಂಗಳಿಗೆ ಪಶುವೈದ್ಯಾಧಿಕಾರಿಗಳ ತಂಡ ನಿಯಮಿತವಾಗಿ ಭೇಟಿ ನೀಡಿ, ಸ್ವಚ್ಛತೆ ನಿರ್ವಹಣೆಗೆ ಸೂಚನೆ ನೀಡುವಂತೆ ತಿಳಿಸಿದರು.ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಚಿಕನ್ ಮಾರಾಟ ಮಾಡುವ ಸ್ಟಾಲ್‍ಗಳಲ್ಲಿ ಅನೈರ್ಮಲ್ಯ ಇರುವ ಬಗ್ಗೆ ಬಹಳಷ್ಟು ದೂರುಗಳಿವೆ. ಹೀಗಾಗಿ ಆಯಾ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಅಭಿಯಂತರರು ಚಿಕನ್ ಸ್ಟಾಲ್‍ಗಳಿಗೆ ಭೇಟಿ ನೀಡಿ, ಮಳಿಗೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ತಿಳುವಳಿಕೆ ನೀಡಬೇಕು.
ಸ್ವಚ್ಛತೆ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕುಮಾರ್ ಮಾತನಾಡಿ, ಹಕ್ಕಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಎವಿಯನ್ ಇನ್ ಪ್ಲೂ-ಎಂಜಾ ಎಂಬ ವೈರಾಣುವಿನಿಂದ ಬರುತ್ತದೆ. ನಾಟಿಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲು ಹಕ್ಕಿ, ಬಾತುಕೋಳಿ, ಹಂಸ ಪಕ್ಷಿ ಇತ್ಯಾದಿ ಎಲ್ಲಾ ಹಕ್ಕಿ ಪ್ರಬೇಧಗಳಲ್ಲಿ ಕಂಡುಬರುತ್ತದೆ. ಕೋಳಿ, ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾಧರಣ ಸಾವು, ಸತ್ತ ಕೋಳಿಗಳ ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು, ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುವುದು ಇದರ ರೋಗ ಲಕ್ಷಣವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ ಸಂಬಂಧಿಸಿದ ಕೋಳಿ ಸಾಕಾಣಿಕೆದಾರರು, ರೈತರು, ತಕ್ಷಣವೇ ಪಶುವೈದ್ಯರು, ಸಿಬ್ಬಂದಿಯವರ ಗಮನಕ್ಕೆ ತರಬೇಕು. ರೋಗನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆ ಹಿತದೃಷ್ಠಿಯಿಂದ ಕೋಳಿಫಾರಂಗಳಿಗೆ ಅನುಮತಿ ಇಲ್ಲದೇ ಪ್ರವೇಶಿಸಬಾರದು. ಕೆರೆ, ಕಟ್ಟೆ, ನೀರಿನ ತೊರೆ, ನದಿ ಮತ್ತು ಇತರೆ ನೀರಿನ ಜಾಗಕ್ಕೆ ವಲಸೆ ಬರುವ, ಅಲ್ಲಿಯೇ ವಾಸಿಸುವ ಹಕ್ಕಿ, ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಗಮನಕ್ಕೆ ತರಬೇಕು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದಲ್ಲಿ ಸೋಪಿನಿಂದ ಕೈ ತೊಳೆದು ಸ್ವಚ್ಛತೆ ಕಾಯ್ದುಕೊಳ್ಳಬೇಕು. ಚಿಕನ್ ಅನ್ನು 70 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ 10 ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿಯೇ ಸೇವಿಸಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ 337 ಕೋಳಿ ಫಾರಂಗಳು ಇದ್ದು, ಮಾಂಸದ ಕೋಳಿಗಳು ಮತ್ತು ಮೊಟ್ಟೆ ಕೋಳಿ ಸೇರಿದಂತೆ ಒಟ್ಟು 60.37 ಲಕ್ಷ ಕೋಳಿಗಳಿವೆ. ಸುಮಾರು 9 ಲಕ್ಷ ನಾಟಿ ಕೋಳಿಗಳು ಇವೆ. ಮೊಳಕಾಲ್ಮೂರು ತಾಲೂಕು ಒಂದರಲ್ಲೇ ಸುಮಾರು 34 ಲಕ್ಷ ಕೋಳಿಗಳು ಇವೆ. ಹಕ್ಕಿಜ್ವರ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆ ಸಂಪರ್ಕಿಸುವ ಚಳ್ಳಕೆರೆ ತಾಲ್ಲೂಕಿನ ನಾಗಪ್ಪನಹಳ್ಳಿ ಗೇಟ್, ಹಿರಿಯೂರು ತಾಲೂಕಿನ ಪಿ.ಡಿ.ಕೋಟೆ ಹಾಗೂ ಮೊಳಕಾಲ್ಮುರು ತಾಲೂಕಿನ ಎದ್ದಲ್ಲಬೋಮ್ಮನಹಟ್ಟಿಯಲ್ಲಿ ಕೋಳಿ ಶೀತಜ್ವರ ರೋಗೋದ್ರೇಕ ಚೆಕ್‍ಪೋಸ್ಟ್ ಗಳ ಸ್ಥಾಪಿಸಿ, ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ದಿನನಿತ್ಯವೂ ಕೋಳಿ, ಕೋಳಿ ಮೊಟ್ಟೆ, ಕೋಳಿ ಆಹಾರ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿಮಠ್ ಮಾತನಾಡಿ, ಹಕ್ಕಿಜ್ವರದ ಕಾರಣದಿಂದ ಸೋಂಕಿಗೆ ಒಳಗಾಗುವ ಮನುಷ್ಯರಲ್ಲಿ ನೆಗಡಿ, ಜ್ವರ, ಕೆಮ್ಮು ಹಾಗೂ ಭೇದಿ ಉಂಟಾಗುವ ರೋಗ ಲಕ್ಷಣಗಳು ಕಂಡುಬರುತ್ತವೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಈ ಕುರಿತು ಈಗಾಗಲೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರೋಗ್ಯ ಇಲಾಖೆ ಕೈಗೊಂಡಿದೆ ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಸೇರಿದಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.