ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
21ನೇ ಶತಮಾನದಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಆಚರಣೆ ಇದ್ದು, ಸಂವಿಧಾನದಡಿಯಲ್ಲಿ ಯಾರು ಕೂಡ ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡಬಾರದು ಎಂದು ವಿಚಾರವಾದಿ ಕೆ.ಎಸ್.ಮಹೇಶ್ ತಿಳಿಸಿದರು.ದಳವಾಯಿಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಹಾನಾಯಕ ಡಾ.ಭೀಮರಾವ್ ಸೋಶಿಯಲ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಸ್ಪೃಶ್ಯತೆ ಆಚರಣೆ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮನುಷ್ಯನನ್ನು ಮನುಷ್ಯನ್ನಾಗಿ ನೋಡದೆ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ನಡೆ ಅಮಾನವೀಯ ಕ್ರೌರ್ಯವಾಗಿದೆ. ಸಂವಿಧಾನದಡಿಯಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡಬಾರದು. ಎಲ್ಲರೂ ಶಿಕ್ಷಣ ಪಡೆದರೆ ಮಾತ್ರ ಇಂತಹ ಅಮಾನವೀಯ ಆಚರಣೆಯಿಂದ ಹೊರ ಬರಲು ಸಾಧ್ಯ ಎಂದರು.ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಟಿ.ವಿ.ನಾಗವೇಣಿ ಮಾತನಾಡಿ, ಅಸ್ಪೃಶ್ಯತೆ ನಿವಾರಣೆಗೆ ಹಲವು ಕಾಯ್ದೆಗಳನ್ನು ರೂಪಿಸಲಾಗಿದೆ. ಈ ಕಾಯ್ದೆಗಳು ನಿಯಮಾವಳಿಗಳ ಕುರಿತಂತೆ ಸಾಮಾನ್ಯರಿಗೆ ಸರಿಯಾದ ಮಾಹಿತಿ ಜಾಗೃತಿ ಇಲ್ಲದ ಕಾರಣ ಅಸ್ಪೃಶ್ಯತೆ ಇಂದಿಗೂ ಕಾಣಬಹುದು ಎಂದರು.
ಈ ಕಾಯ್ದೆಗಳ ಕುರಿತಂತೆ ನಾಟಕ ಒಳಗೊಂಡತೆ ವಿವಿಧ ಕಲಾ ಮಾಧ್ಯಮಗಳ ಮೂಲಕ ಸ್ಥಳೀಯ ಭಾಷೆಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ಹಾಗೂ ನಾಟಕಗಳು ಮಾದರಿಯಾಗಬೇಕು ಎಂದರು.ಇದೇ ವೇಳೆ ಸೌಹಾರ್ದ ಸಾಂಸ್ಕೃತಿಕ ಸಂಘ, ಬೆಳಕು ಕಲಾ ಪರಿವರ್ತನ ತಂಡ ಜಾಗೃತಿ ಗೀತೆಗಳನ್ನು ಹಾಡಿ ಅರಿವು ಮೂಡಿಸಿದರು.
ಕಸ್ತೂರಿ ಬಾ ಗಾಂಧಿ ಬಾಲಿಕ ವಸತಿ ಶಾಲೆ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಹಾಗೂ ಅಸ್ಪೃಶ್ಯತೆ ಆಚರಣೆ ನಿರ್ಮೂಲನೆ ಕುರಿತ ಅರಿವಿನ ಅಂಗಳ ಎಂಬ ನಾಟಕವನ್ನು ಪ್ರದರ್ಶಿಸಿದರು.ಗ್ರಾಮದ ಮಾದೇಗೌಡ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯ ಸಂಪತ್ ಕುಮಾರ್, ಮಹಾನಾಯಕ ಡಾ.ಭೀಮರಾವ್ ಸೋಶಿಯಲ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಬಾಳೆ ಹೊನ್ನಿಗ ಕುಮಾರ್, ದೈಹಿಕ ಶಿಕ್ಷಕರು ಕಸ್ತೂರಿ ಬಾ ಗಾಂಧಿ ಶಾಲೆ ಡಿ.ಕೆ.ಹಳ್ಳಿ ಎಚ್.ಎಂ.ಗಂಗಾಂಬಿಕೆ, ನಿನಗೆ ನೀನೇ ಬೆಳಕು ಟ್ರಸ್ಟ್ ಅಧ್ಯಕ್ಷ ಉಮೇಶ್ ಮೌರ್ಯ, ಮಳವಳ್ಳಿ ತಾಲೂಕು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕ ಕೆ.ಎಂ.ಮೋಹನ್ ಕುಮಾರ್, ಗಗನಚುಕ್ಕಿ ಸಾಂಸ್ಕೃತಿಕ ಕಲಾವೃಂದ ಕಾರ್ಯದರ್ಶಿ ಬಿ.ಶಿವಪ್ರಸಾದ್, ಡಿ.ಕೆ.ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಬಸವರಾಜ್, (ಪ್ರಕಾಶ್), ಕುಮಾರ್ ಎಚ್.ಡಿ ಇದ್ದರು.