ಕುಷ್ಟಗಿ: ಶಾಲೆಗೆ 120 ವರ್ಷ ಗತಿಸಿದರೂ ಸಹಿತ ಶತಮಾನೋತ್ಸವ ಭಾಗ್ಯ ಕಾಣದೆ ಇರುವದು ವಿಪರ್ಯಾಸದ ಸಂಗತಿಯಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲಾ ಶತಮಾನೋತ್ಸವ ಆಚರಣೆಗೆ ಮುಂದಾಗಬೇಕು ಎಂದು ಮಾಜಿ ಎಸ್ಡಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಕಂಟ್ಲಿ ಒತ್ತಾಯಿಸಿದರು.
ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷೀಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.2018ರಲ್ಲಿ ನಾನು ಈ ಶಾಲೆಯ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ಶತಮಾನೋತ್ಸವ ದಾಟಿದ ಈ ಶಾಲೆಯನ್ನು ಅಂದಿನ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾರಂಪರಿಕ ಶಾಲೆ ಎಂದು ಘೋಷಿಸುವ ಮೂಲಕ ಅನುದಾನ ನೀಡಿದ್ದರು ಅದರೆ ಇಲ್ಲಿಯವರೆಗೆ ಶತಮಾನೋತ್ಸವ ಆಚರಣೆ ಕಂಡಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಶತಮಾನೋತ್ಸವ ಆಚರಣೆಗೆ ಮುಂದಾಗಬೇಕು ಇದರ ಜತೆಗೆ ಕಾಯಂ ದೈಹಿಕ ಶಿಕ್ಷಕರೊಬ್ಬರನ್ನು ನೇಮಕಾತಿ ಮಾಡಬೇಕು ಎಂದರು.
ಸಿಆರ್‌ಪಿ ಈರಣ್ಣ ಕರಡಕಲ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕಲಿಸುತ್ತಿದ್ದು, ಮಕ್ಕಳನ್ನು ದಾಖಲಾತಿ ಮಾಡಲು ಮುಂದಾಗಬೇಕು ಎಂದ ಅವರು, ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಎಂದು ಹೇಳಿದರು.ಕಸಾಪ ಅಧ್ಯಕ್ಷ ನಿಂಗಪ್ಪ ಸಜ್ಜನ ಮಾತನಾಡಿ, ಪಾಲಕರು ಶಿಕ್ಷಕರೊಂದಿಗೆ ಸಹಕಾರ ನೀಡುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂದ ಅವರು ಮೊಬೈಲನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಕೆ ಮಾಡಬೇಕು ಹೊರತು ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂದರು.
ಮಾಜಿ ಗ್ರಾಪಂ ಸದಸ್ಯ ರಾಜೇಸಾಬ್ ಯಲಬುರ್ಗಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಬಂದೆನವಾಜ ಬಿಜಕತ್ತಿ, ಕೆ.ವೈ.ಕಂದಕೂರು, ಬಾಳಪ್ಪ ಅರಳಿಕಟ್ಟಿ, ಬಾಲಾಜಿ ಭೋವಿ, ಮಹೇಶ ಕುಂಬಾರ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಕಿರಗಿ, ಮೌನೇಶ ಬಾದಾ, ಪರಸಪ್ಪ ಸರೂರು, ಮಂಜೂರಲಿ ಬನ್ನು, ದಾದೇಸಾಬ್ ವಾಲಿಕಾರ, ಕರಿಯಪ್ಪ ಪೂಜಾರ, ಖಾಜೇಸಾಬ್ ಗಚ್ಚಿನಮನಿ, ಅಜ್ಮೀರಸಾಬ ಯಲಬುರ್ಗಿ, ನಾಗರಾಜ ಕಾಳಗಿ ಸೇರಿದಂತೆ ಎಸ್ಡಿಎಮ್ಸಿ ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಶಿಕ್ಷಕಿಯರು, ಶಾಲಾ ಮಕ್ಕಳು ಹಾಜರಿದ್ದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.