ಉಪಚುನಾವಣೆಯಲ್ಲಿ ಒಳಒಪ್ಪಂದಕ್ಕೆ ಅವಕಾಶವಿಲ್ಲ: ಸತೀಶ ಜಾರಕಿಹೊಳಿ

| Published : Jul 04 2024, 01:05 AM IST / Updated: Jul 04 2024, 12:07 PM IST

satish jarkiholi
ಉಪಚುನಾವಣೆಯಲ್ಲಿ ಒಳಒಪ್ಪಂದಕ್ಕೆ ಅವಕಾಶವಿಲ್ಲ: ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್ ಕೊಡುವುದನ್ನು ನಮ್ಮ ಹೈಕಮಾಂಡ್ ನಿರ್ಣಯ ಮಾಡುತ್ತದೆ. ಪಕ್ಷ ಅಂದರೆ ಶಿಸ್ತು, ನಾವೆಲ್ಲ ಅದಕ್ಕೆ ಬದ್ಧವಾಗಿರಬೇಕು ಎಂದು ಲೋಕೋಪಯೋಗಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಒಳ ಒಪ್ಪಂದ ರಾಜಕಾರಣಕ್ಕೆ ಈ ಬಾರಿ ಅವಕಾಶ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಜನ ಕಾಂಗ್ರೆಸ್ ಗೆಲುವಿಗೆ ಸಹಕರಿಸಿದ್ದಾರೆ. ಅದೇ ರೀತಿ ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರು ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನಲ್ಲಿ ಪಕ್ಷದ ಸಂಘಟನೆ ನಿಮಿತ್ತ ಆಗಮಿಸಿದ್ದ ಅವರು ಸಂಘಟನಾ ಕಾರ್ಯಕ್ರಮದ ಆನಂತರ ಮಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರದ ಸಂಪೂರ್ಣ ಮಾಹಿತಿ ಇದೆ, ಇಲ್ಲಿ ಸಂಘಟನೆ ಮಾಡುತ್ತಿದ್ದೇವೆ. ಟಿಕೆಟ್ ಕೊಡುವುದನ್ನು ನಮ್ಮ ಹೈಕಮಾಂಡ್ ನಿರ್ಣಯ ಮಾಡುತ್ತದೆ. ಪಕ್ಷ ಅಂದರೆ ಶಿಸ್ತು, ನಾವೆಲ್ಲ ಅದಕ್ಕೆ ಬದ್ಧವಾಗಿರಬೇಕು. ಇಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ ಅವರಲ್ಲಿನ ಕೆಲವು ಮಾನದಂಡಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದರು.

ಚುನಾವಣೆ ಗೆಲ್ಲಲು ನಾವೆಲ್ಲ ಸೇರಿ ಸಂಘಟನೆ ಮಾಡಿ ಎಲ್ಲರನ್ನೂ ಸೇರಿಸುವ ಕೆಲಸ ಮಾಡುತ್ತೇವೆ. ನಾವು ಕಾರ್ಯಕರ್ತರನ್ನು ಜತೆಗೂಡಿ ಕರೆದುಕೊಂಡು ಹೋಗುತ್ತೇವೆ. ಮತದಾರರು ನಮ್ಮ ಪರವಾಗಿ ಇದ್ದಾರೆ. ಪಕ್ಷದ ಸಾಮಾಜಿಕ ನ್ಯಾಯದ ಕಾರಣದಿಂದ ನಾವು ಇಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಲಿಂಗಾಯತರು, ಮುಸ್ಲಿಮರು, ಒಬಿಸಿ ಎಲ್ಲರೂ ಟಿಕೆಟ್ ಕೇಳುತ್ತಿದ್ದಾರೆ. ಈ ಬಾರಿ ಬಹಳಷ್ಟು ಮಂತ್ರಿಗಳು, ಶಾಸಕರು ಈ ಕ್ಷೇತ್ರದಲ್ಲೇ ಇರುತ್ತಾರೆ. ಎಲ್ಲ ಸಮುದಾಯಗಳು ಒಪ್ಪಬೇಕು, ಅಂಥವರಿಗೆ ಇಲ್ಲಿ ಟಿಕೆಟ್ ಕೊಡಲಾಗುತ್ತದೆ ಎಂದರು.

ತಮಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಸಿಎಂ , ಸಿಎಂ ಏನೂ ಪ್ರಶ್ನೆ ಇಲ್ಲ, ನಮ್ಮ ಅಜೆಂಡಾದಲ್ಲಿ ಈಗ ಅದು ಇಲ್ಲ. ನನ್ನ ಮೇಲೆ ಪಕ್ಷ ಇದೆ. ಬೇಕು, ಬೇಡ ಅಂತ ನಿರ್ಧಾರ ಪಕ್ಷ ತೆಗೆದುಕೊಳ್ಳುತ್ತದೆ ಎಂದರು. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಸಿಗದ ವಿಚಾರ, ಬಿಜೆಪಿಯಲ್ಲಿ ಸಿಎಂ ಆಗುವ ಅವಕಾಶ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿಗೆ ಸಿಕ್ಕಿದೆ. ಅವರಿಗೆ ಅವಕಾಶ ಇತ್ತು, ಮುಖ್ಯಮಂತ್ರಿ ಆದರು. ನಾವು ಕಾಯಬೇಕು, ಕಾದು ನೋಡೋಣ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ವಿಚಾರ, ಕಾನೂನಿನಲ್ಲಿ ತನಿಖೆ ನಡೆದು ಅಂತಿಮ ವರದಿ ಬರಲಿ, ಮೇಲ್ನೋಟಕ್ಕೆ ಇದು ಆರೋಪ ಅಷ್ಟೆ. ಈಗಾಗಲೇ ಸಂಬಂಧ ಪಟ್ಟ ಸಚಿವರು ರಾಜೀನಾಮೆ ನೀಡಿದ್ದಾರೆ. ಎಸ್‌ಐಟಿ ತನಿಖೆ ಪೂರ್ತಿ ಆಗಲಿ ಸತ್ಯಾಂಶ ಹೊರ ಬರುತ್ತೆ ಎಂದರು.

ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಪಾಟೀಲ, ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಿವಾನಂದ ರಾಮಗೇರಿ, ಪ್ರೇಮಾ ಪಾಟೀಲ, ರಾಜು ಕುನ್ನೂರ, ಮನೋಜ ಹಾದಿಮನಿ, ರವಿ ಹಾದಿಮನಿ, ಬಸವರಾಜ ಹಾದಿಮನಿ ಇದ್ದರು.

ಕಾಂಗ್ರೆಸ್ ಟಿಕೆಟ್ ಕೂಗು: ಖಾದ್ರಿ-ಪಠಾಣ ಬಣಗಳ ನಡುವೆ ಜಟಾಪಟಿ

ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಹೈಡ್ರಾಮಾ ನಡೆದಿದೆ.

ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಕಾಂಗ್ರೆಸ್ ಮುಖಂಡ ಯಾಸೀರಖಾನ್ ಪಠಾಣ ಬಣಗಳ ನಡುವೆ ಶಿಗ್ಗಾಂವಿ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರು ಅವರ ನಾಯಕರ ಪರವಾಗಿ ಜೈಘೋಷ ಕೂಗಿದ್ದಾರೆ.ಪಕ್ಷ ಸಂಘಟನೆಗಾಗಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿದ್ದರು. ಅವರು ಬರುವ ಮೊದಲೇ ಈ ಎರಡು ಬಣಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಅವರವರ ಬೆಂಬಲಿಗರನ್ನು ಎತ್ತಿ ಕುಣಿದು ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮ್ಮ ನಾಯಕರಿಗೇ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಾರಕಿಹೊಳಿ ಆಗಮನಕ್ಕೂ ಮೊದಲೆ ಆಗಮಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪ್ರವಾಸಿ ಮಂದಿರದಲ್ಲಿ ಕುಳಿತಿದ್ದರು. ಅದೇ ಕೊಠಡಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡ ಯಾಸೀರಖಾನ್‌ ಪಠಾಣ ಆಗಮಿಸಿದರು. ಗ್ರಾಮೀಣ ಭಾಗದಿಂದ ಆಗಮಿಸಿದ ಖಾದ್ರಿ ಅವರ ಬೆಂಬಲಿಗರು ಖಾದ್ರಿ ಅವರ ಪರ ಜಯಘೋಷ ಹಾಕಲು ಆರಂಭಿಸಿದರು.ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಮಾಜಿ ಶಾಸಕ ಖಾದ್ರಿ ಹಾಗೂ ಕಾರ್ಯಕರ್ತರು ಒಂದೆಡೆ, ಯಾಸೀರಖಾನ್ ಪಠಾಣ ಬೆಂಬಲಿಗರು ಇನ್ನೊಂಡೆದೆ ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾದರು. ಕಾರ್ಯಕರ್ತರು ತಮ್ಮ ನಾಯಕನನ್ನು ಹೆಗಲಮೇಲೆ ಹೊತ್ತು ಜಯಕಾರ ಹಾಕಿದರು. ಈ ವೇಳೆ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಜಾರಕಿಹೊಳಿ ಮೂಕ ಪ್ರೇಕ್ಷಕರಂತೆ ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು.

ಇದೆಲ್ಲ ಘಟನೆಗಳು ನಡುವೆ ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜೂ ಕುನ್ನೂರ, ಪ್ರೇಮಾ ಪಾಟೀಲ, ಮಾಜಿ ಶಾಸಕ ಆರ್. ಶಂಕರ ಸೇರಿದಂತೆ ಹಲವಾರು ಮುಖಂಡರು ಜಾರಕಿಹೊಳಿ ಭೇಟಿಗೆ ಆಗಮಿಸಿದ್ದರು.