ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು ಕಾಮಗಾರಿಗಳಲ್ಲಿ ಯಾವುದೇ ಕೊರತೆಯಾಗಬಾರದು. ಅದೇ ರೀತಿಯಾಗಿ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಸಮಸ್ಯೆಗಳು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪುತ್ತೂರು ತ್ರೈಮಾಸಿಕ ಕೆಡಿಪಿ ಸಭೆ ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು.ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 1010 ಕೋಟಿ ರು. ಮೊತ್ತ ಪುತ್ತೂರಿಗೆ ಮಂಜೂರಾಗಿ ಟೆಂಡರ್ ಹಂತದಲ್ಲಿದೆ. ಕೆದಿಲ ಮತ್ತು ಆಲಂಕಾರಿನಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣವಾಗಲಿದೆ. ಅದು ಆರಂಭಗೊಳ್ಳುವಾಗ ಜೆಜೆಎಂ ಕಾಮಗಾರಿಗಳೆಲ್ಲ ಮುಗಿದಿರಬೇಕು. ಮುಂದಿನ 25 ವರ್ಷಗಳ ಗುರಿ ಇಟ್ಟುಕೊಂಡು ಬಹುಗ್ರಾಮ ಯೋಜನೆ ಜಾರಿಗೆ ಬರುತ್ತಿದ್ದು, ಇದರಲ್ಲಿ ಪುತ್ತೂರು, ವಿಟ್ಲ, ಸುಳ್ಯ, ಕಡಬ ಭಾಗಕ್ಕೂ ನೀರು ಸಿಗಲಿದೆ ಎಂದು ಶಾಸಕರು ಹೇಳಿದರು.
ಮೆಸ್ಕಾಂ ನಗರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಉತ್ತರಿಸಿ, ಇದರಲ್ಲಿ ಮೆಸ್ಕಾಂ ಪಾತ್ರ ತೀರಾ ಕಡಿಮೆಯಿದೆ. ಎಲ್ಲ ಕೆಲಸವನ್ನು ಜೆಜೆಎಂ ಅಡಿಯಲ್ಲೇ ಮಾಡಲಾಗುತ್ತದೆ. ಸಂಪರ್ಕ ಕೊಡುವುದು ಮಾತ್ರ ನಮ್ಮ ಕಾರ್ಯ. ಅವರ ಕೆಲಸ ಮುಗಿದ ತಕ್ಷಣ ನಾವು ವಿದ್ಯುತ್ ಸಂಪರ್ಕ ನೀಡುತ್ತೇವೆ ಎಂದರು.ಪುತ್ತೂರು ನಗರ ಉಪ ವಿಭಾಗದಲ್ಲಿ 32 ಸಾವಿರ ಮನೆಗಳಿಗೆ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. 50 ಸಾವಿರ ಮನೆಗಳಲ್ಲಿ 80 ಶೇ. ಮನೆಗಳು ಯೋಜನೆಗೆ ಅರ್ಹತೆ ಹೊಂದಿದ್ದು, 100 ಶೇ. ಸಾಧನೆಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ರಾಮಚಂದ್ರ ಹೇಳಿದರು. ಗ್ರಾಮಾಂತರ ಭಾಗದಲ್ಲಿ 20 ಸಾವಿರ ಮನೆಗಳಿಗೆ ಯೋಜನೆ ಪ್ರಾಪ್ತಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಮಾಸಿಕ 2000 ರು. ನೀಡುವ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿದ್ದರೂ ಇನ್ನೂ ಕೆಲವರ ಖಾತೆಗೆ ಹಣ ಬಿದ್ದಿಲ್ಲ. ತಾಂತ್ರಿಕ ಸಮಸ್ಯೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಶ್ರಮ ಸಾಕಷ್ಟು ಫಲ ನೀಡಿದೆ. ಆದರೆ ಇನ್ನೂ ಉಳಿದವರಿಗೆ ಹಣ ಬರುವಂತೆ ಮಾಡಿ ಎಂದು ಶಾಸಕರು ಸೂಚಸಿದರು. ಪ್ರಭಾರ ಸಿಡಿಪಿಒ ಮಂಗಳಾ ಉತ್ತರಿಸಿ ತಾಲೂಕಿನಲ್ಲಿ 560 ಕುಟುಂಬಗಳಿಗೆ ಹಣ ಸಿಕ್ಕಿಲ್ಲ ಎಂದರು. ಅಂಗನವಾಡಿ ಕಾರ್ಯಕರ್ತೆಯರ ಬಳಿ ಬಂದಾಗ ಬೇರೆಡೆಗೆ ಕಳಿಸಿಕೊಡುವ ಕೆಲಸವಾಗಬಾರದು. ಸಮಸ್ಯೆ ತುಂಬಾ ಜಟಿಲವಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಸೂಚಿಸಿದರು.ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹ್, ತಾಪಂ ಯೋಜನಾಧಿಕಾರಿ ಸುಕನ್ಯಾ, ಆಡಳಿತಾಧಿಕಾರಿ ಸಂಧ್ಯಾ, ಡಿವೈಎಸ್‌ಪಿ ಅರುಣ್ ನಾಗೇಗೌಡ, ತಹಸೀಲ್ದಾರ್ ಶಿವಶಂಕರ್ ಇದ್ದರು. ಸಭೆಯಲ್ಲಿ ಕೆಡಿಪಿ ನಾಮ ನಿರ್ದೇಶಿತ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.