ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ಪಟ್ಟಣದ ಪುರಸಭೆಯ ಅಧ್ಯಕ್ಷರ ವಿರುದ್ಧ ನಡೆಯುತ್ತಿರುವ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಕ್ರಿಯೆಗೆ ಬುಧವಾರ ಅಂತು ಇಂತೂ ತೆರೆ ಬಿದ್ದಿದೆ. ಪುರಸಭೆಯ ಹಾಲಿ ಅಧ್ಯಕ್ಷ ಶಾಂತವೀರ ಬಿರಾದಾರ ಸುಮಾರು ಆರು ತಿಂಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಮತ್ತು ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಪುರಸಭೆಯ 16 ಸದಸ್ಯರು ಅವರ ವಿರುದ್ಧ ಮಾರ್ಚ್‌ನಲ್ಲಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಪುರಸಭೆಯ ಅಧ್ಯಕ್ಷರ ವಿರುದ್ಧ ನಡೆಯುತ್ತಿರುವ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಕ್ರಿಯೆಗೆ ಬುಧವಾರ ಅಂತು ಇಂತೂ ತೆರೆ ಬಿದ್ದಿದೆ. ಪುರಸಭೆಯ ಹಾಲಿ ಅಧ್ಯಕ್ಷ ಶಾಂತವೀರ ಬಿರಾದಾರ ಸುಮಾರು ಆರು ತಿಂಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಮತ್ತು ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಪುರಸಭೆಯ 16 ಸದಸ್ಯರು ಅವರ ವಿರುದ್ಧ ಮಾರ್ಚ್‌ನಲ್ಲಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಬುಧವಾರ ಪುರಸಭೆಯ ಸಭಾಭವನದಲ್ಲಿ ಜರುಗಿತು.ಒಟ್ಟು 23 ಸದಸ್ಯರ ಪೈಕಿ ಅವಿಶ್ವಾಸ ಗೊತ್ತುವಳಿ ಸಭೆಗೆ 20 ಸದಸ್ಯರು ಹಾಜರಿದ್ದರು. ಅದರಲ್ಲಿ ಮೂವರು ಸದಸ್ಯರು ಗೈರಾಗಿದ್ದರು. ಈ ವೇಳೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಹಾಜರಿದ್ದ 20 ಸದಸ್ಯರ ಪೈಕಿ ಅವಿಶ್ವಾಸದ ಪರವಾಗಿ 15 ಮತಗಳು ಬಂದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು. ಪುರಸಭೆ ಮುಖ್ಯಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಜರುಗಿತು. ಹಂಗಾಮಿ ಅಧ್ಯಕ್ಷರಾಗಿ ಸದಸ್ಯ ಹಣಮಂತ ಸುಣಗಾರರನ್ನು ನೇಮಕ ಮಾಡಲಾಗಿದೆ.
ಮುಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಗೆ ಕೆಲವೇ ದಿನಗಳಲ್ಲಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಹಸೀಲ್ದಾರ ಪ್ರದೀಪ ಕುಮಾರ್ ಹಿರೇಮಠ ಪತ್ರಿಕೆಗೆ ತಿಳಿಸಿದರು. ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ಮತ್ತು ಪಿಎಸ್ಐ ಆರೀಫ್ ಮುಷಾಪುರಿ ಮತ್ತು ಅವರ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.