ಸಾರಾಂಶ
ಯಲಬುರ್ಗಾ:
ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಣಯ ಹಾಗೂ ವಾರ್ಡ್‌ಗಳಿಗೆ ಸಮರ್ಪಕ ಅನುದಾನ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿರುವ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಸ್ವಪಕ್ಷದ ಅಧ್ಯಕ್ಷ ಅಂದಯ್ಯ ಕಳ್ಳಿಮಠ ವಿರುದ್ಧವೇ ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿ ಮಾ. 11ರಂದು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.15 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ 11 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದರಲ್ಲಿ ನಾಲ್ವರು ಕಾಂಗ್ರೆಸ್ ಸದಸ್ಯರಿದ್ದು ಮಾ. 11ರಂದು ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿರುವ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಅಂಗಳಕ್ಕೆ ಚೆಂಡು ಬಿದ್ದಿದೆ ಎನ್ನಲಾಗುತ್ತಿದೆ. ಈಗಾಗಲೇ ಎಲ್ಲ ಸದಸ್ಯರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಹಾಲಪ್ಪ ಆಚಾರ ಅವರು ಯಾವ ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.
ಪಕ್ಷಪಾತ ಮಾಡಿಲ್ಲ:ನಾನು ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದ ಈ ವರೆಗೆ ಪಟ್ಟಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಕಾರ್ಯಪ್ರವೃತ್ತನಾಗಿದ್ದಾನೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹೇಳಿದ್ದಾರೆ. ಪಕ್ಷಪಾತ ಮಾಡದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್‌ಗಳ ಸಮಸ್ಯೆ ಕುರಿತು ಚರ್ಚಿಸಲು ಸಭೆ ಆಯೋಜಿಸಿದರೆ ಯಾವ ಸದಸ್ಯರು ಸಭೆಗೆ ಹಾಜರಾಗದೆ ಸಭೆಯು ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಅನುದಾನದ ಲಭ್ಯತೆಯ ಅನುಗುಣವಾಗಿ ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಆದರಿಂದ ನನ್ನ ವಿರುದ್ಧ ಇದೀಗ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವುದು ಬೇಸರ ತರಿಸಿದೆ. ಈ ವಿಷಯದಲ್ಲಿ ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷದ ವೇದಿಕೆಯಲ್ಲಿ ಚರ್ಚೆ:ಪಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವ ಕುರಿತು ಮಾಜಿ ಸಚಿವ ಹಾಲಪ್ಪ ಆಚಾರ ಹಾಗೂ ಪಕ್ಷದ ಮುಖಂಡರ ತರಲಾಗಿದೆ. ಅವರು ಪಕ್ಷದ ಸದಸ್ಯರೊಂದಿಗೆ ಚರ್ಚಿಸಿದ್ದು ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದುನೋಡಬೇಕಿದೆ. ಸದಸ್ಯರೊಂದಿಗೆ ನಾನು ಮಾತನಾಡಿದ್ದು ಯಾವುದೇ ಸಮಸ್ಯೆಗಳು ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಯಲಬುರ್ಗಾ ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ ಹೇಳಿದ್ದಾರೆ.
ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇರುವ ಅನುದಾನದಲ್ಲಿಯೇ ಎಲ್ಲ ವಾರ್ಡ್‌ಗಳಿಗೂ ನೀಡಲಾಗುತ್ತಿದೆ. ಆದರೂ ನನ್ನ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ ಎಂದು ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹೇಳಿದ್ದಾರೆ.