ಸಾರಾಂಶ
ಸಂಡೂರು: ಒಳ ಮೀಸಲಾತಿ ಜಾರಿಗೆ ಸರ್ಕಾರದ ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಪರಿಶಿಷ್ಟ ಜಾತಿಯ ಎಲ್ಲ ಸಚಿವರು ಒಪ್ಪಿದ್ದಾರೆ. ಈ ಕುರಿತು ಗೊಂದಲ ಬೇಡ. ಇನ್ನು ಮೂರು ತಿಂಗಳಲ್ಲಿ ಒಳ ಮೀಸಲಾತಿ ವ್ಯವಸ್ಥೆ ಜಾರಿಯಾಗಲಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ತಾಲೂಕಿನ ಭುಜಂಗನಗರದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಪರ ಅವರು ಪ್ರಚಾರ ನಡೆಸಿ, ಮತಯಾಚಿಸಿದರು. ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವ್ಯವಸ್ಥೆ ಜಾರಿಯಾಗಲಿದೆ. ಒಳ ಮೀಸಲಾತಿ ವ್ಯವಸ್ಥೆಯಿಂದ ಜನಸಂಖ್ಯೆ ಆಧಾರದಲ್ಲಿ ಸೌಲಭ್ಯಗಳು ಹಂಚಿಕೆಯಾಗಲಿವೆ ಎಂದರು.ದೇಶದಲ್ಲಿ ಉಳುವವನೇ ಭೂ ಒಡೆಯ, ಗರೀಬಿ ಹಠಾವೊ, ಆಹಾರ ಭದ್ರತೆ, ಉದ್ಯೋಗ ಖಾತ್ರಿ ಮುಂತಾದ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಸದಾಶಿವ ಆಯೋಗ ರಚಿಸಲಾಯಿತು ಎಂದರು.
ಜನಪರ ಯೋಜನೆಗಳು, ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿವೆ. ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಮಾದಿಗ ಸಮಾಜದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆ ಮಹತ್ವದ್ದಾಗಿದೆ. ಒಳ ಮೀಸಲಾತಿ ಕುರಿತು ಗೊಂದಲ ಬೇಡ. ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಬೆಂಬಲಿಸಿ, ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಹಕರಿಸಬೇಕು ಎಂದರು.
ಮಾಜಿ ಸಂಸದ ಚಂದ್ರಪ್ಪ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಮಾಜಿ ಜಿಪಂ ಸದಸ್ಯ ಮಾನಯ್ಯ, ಮುಖಂಡರಾದ ಭೀಮಸೇನ ಶಿಂಧೆ, ವೆಂಕಟೇಶ್ ಹೆಗಡೆ, ಎಚ್. ಮರಿಸ್ವಾಮಿ, ಶ್ರೀದೇವಿ ನಾಯಕ್, ಜಿ. ಗೋವರ್ಧನ್, ಕೊಟಗಿನಹಾಳ್ ಮಲ್ಲಿಕಾರ್ಜುನ, ಸಿದ್ದೇಶ್, ಶಿವಲಿಂಗಪ್ಪ, ಸತೀಶ್, ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ಭುಜಂಗನಗರದಲ್ಲಿ ಶನಿವಾರ ಸಚಿವ ಕೆ.ಎಚ್. ಮುನಿಯಪ್ಪ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ತುಕಾರಾಂ ಪರ ಪ್ರಚಾರ ನಡೆಸಿ, ಮತಯಾಚಿಸಿದರು.