ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಫಾರ್ಮಾ ಕೆಮಿಕಲ್‌ ಕಂಪನಿಗಳ ಅಟ್ಟಹಾಸ ಮತ್ತೇ ಮುಂದುವರೆದಂತಿದೆ. ಕೆಲವು ತಿಂಗಳುಗಳ ಕಾಲ ನಿರುಮ್ಮಳವಾಗಿದ್ದ ಇಲ್ಲಿನ ವಾತಾವರಣ ಇದೀಗ ಮತ್ತೇ ಜನರ ಜೀವ ಹಿಂಡುತ್ತಿದೆ. ಇತ್ತೀಚೆಗೆಷ್ಟೇ, ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ರಾತ್ರಿ ಸದ್ದಿಲ್ಲದೆ ಉಸಿರು ಚೆಲ್ಲಿದ ಪ್ರಕರಣ ಇನ್ನೂ ಮಾಸುವ ಮುನ್ನವೇ ಇದೀಗ ಕೆಮಿಕಲ್‌ ಕಂಪನಿಗಳ ಅಟಾಟೋಪ ಜನರ ನಿದ್ದೆಗೆಡಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಫಾರ್ಮಾ ಕೆಮಿಕಲ್‌ ಕಂಪನಿಗಳ ಅಟ್ಟಹಾಸ ಮತ್ತೇ ಮುಂದುವರೆದಂತಿದೆ. ಕೆಲವು ತಿಂಗಳುಗಳ ಕಾಲ ನಿರುಮ್ಮಳವಾಗಿದ್ದ ಇಲ್ಲಿನ ವಾತಾವರಣ ಇದೀಗ ಮತ್ತೇ ಜನರ ಜೀವ ಹಿಂಡುತ್ತಿದೆ. ಇತ್ತೀಚೆಗೆಷ್ಟೇ, ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ರಾತ್ರಿ ಸದ್ದಿಲ್ಲದೆ ಉಸಿರು ಚೆಲ್ಲಿದ ಪ್ರಕರಣ ಇನ್ನೂ ಮಾಸುವ ಮುನ್ನವೇ ಇದೀಗ ಕೆಮಿಕಲ್‌ ಕಂಪನಿಗಳ ಅಟಾಟೋಪ ಜನರ ನಿದ್ದೆಗೆಡಿಸಿದೆ.

ಕೆಮಿಕಲ್‌ ಫಾರ್ಮಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿರುವ ಕೆಲವು ಕಂಪನಿಗಳು, ಅಡ್ಡದಾರಿ ಹಿಡಿದು ಕಳ್ಳಾಟಕ್ಕಿಳಿದಿವೆ. ಚರಂಡಿಗಳ ಮೂಲಕ ವಿಷಕಾರಿ ರಾಸಾಯನಿಕ ತ್ಯಾಜ್ಯ ನೇರವಾಗಿ ಹಳ್ಳಕೊಳ್ಳಕ್ಕೆ ಮತ್ತೇ ಹರಿಬಿಡುತ್ತಿವೆ. ಅಪಾಯಕಾರಿ ರಾಸಾಯನಿಕ ಮಿಶ್ರಣ ರಸ್ತೆ ಬದಿಗೆ ಚೆಲ್ಲುತ್ತಿರುವುದರಿಂದ ಪಶು-ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿರುವುದು ಜನರ ಆತಂಕ ಇಮ್ಮಡಿಸಿದೆ. ಕಡೇಚೂರು ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿನ ಸಾವಿರಾರು ಜನರಿಗೆ ಉಸಿರಾಡಲೂ ಕಷ್ಟಕರವಾಗಿರುವಂತಹ ಕಲುಷಿತ ವಾತಾವರಣ ಇಲ್ಲುಂಟಾಗಿದೆ.

ಸೆ.11 ರಂದು ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಕಡೇಚೂರು ಭಾಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಗ, ಸಮಜಾಯಿಷಿ ನೀಡಲೆತ್ನಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಅಲ್ಲಿ ಉತ್ತಮ ಪರಿಸರವಿದೆ ಎಂದು ಹಾರಿಕೆ ಉತ್ತರ ನೀಡುತ್ತ, ಕಂಪನಿಯ ಏಜೆಂಟರಂತೆ ವರ್ತಿಸಿದ್ದುದು ಸಚಿವರ ಕೆಂಗಣ್ಣಿಗೆ ಕಾರಣವಾಗಿತ್ತು. "ನಾಮ್‌ ಕೆ ವಾಸ್ತೆ "ಯಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿ ಕೆಲಸ ಮಾಡುತ್ತಿದ್ದು, ಫಾರ್ಮಾ ಕೆಮಿಕಲ್‌ ಕಂಪನಿಗಳು ಮಂಡಳಿಯ ಷರತ್ತುಗಳನ್ನು ಉಲ್ಲಂಘಿಸಿ, ಜನ-ಜಲ-ಜೀವ ಸಂಕುಲಕ್ಕೆ ಅಪಾಯಕಾರಿ ತರುವ ರೀತಿಯ ಚಟುವಟಿಕೆಗಳ ನಡೆಸುತ್ತಿದ್ದರೂ ಜಾಣ ಕುರುಡುನಂತೆ ವರ್ತಿಸುತ್ತಿರುವುದು ಮಂಡಳಿಯೂ ಮಲೀನವಾಯೀತೇ ಎಂಬ ಅನುಮಾನಗಳು ಮೂಡಿಸಿದೆ.

ಕಳೆದೆರಡು ದಿನಗಳಿಂದ ಕೈಗಾರಿಕಾ ಪ್ರದೇಶದ ವಿವಿಧೆಡೆ ಅಪಾಯಕಾರಿ ರಾಸಾಯನಿಕ ಮಿಶ್ರಣದ ಪುಡಿ ಹಾಗೂ ದ್ರವತ್ಯಾಜ್ಯ ರಸ್ತೆ ಬದಿ ಸೇರಿದಂತೆ ಚರಂಡಿಗಳ ಮೂಲಕ ಹಳ್ಳ ಸೇರುತ್ತಿದ್ದು, ಜನ-ಜಾನುವಾರುಗಳು ಕುಡಿಯುವ ನೀರು ವಿಷಕಾರಿಯಾಗುತ್ತಿರುವ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಮಂಡಳಿ ಗಾಢನಿದ್ರೆಗೆ ಜಾರಿದಂತಿದೆ. ಅಪಾಯಕಾರಿ ಹಾಗೂ ಷರತ್ತುಗಳ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಸಚಿವರು ಸೂಚಿಸಿದ್ದರೂ, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಮೂಡಿಸಿದೆ. ದೂರು ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರ ಆದೇಶಕ್ಕೂ ಕಿಮ್ಮತ್ತು ನೀಡದ ಪರಿಸರ ಅಧಿಕಾರಿಗಳು ಹಾಗೂ ತಮ್ಮ ಅಟಾಟೋಪ ಮುಂದುವರೆಸಿರುವ ಫಾರ್ಮಾ/ ಕೆಮಿಕಲ್‌ ಕಂಪನಿಗಳ ವಿರುದ್ಧ ಜಿಲ್ಲಾಡಳಿತ ಬಿಗಿಯಾದ ಕ್ರಮಕ್ಕೆ ಮುಂದಾಗದಿದ್ದರೆ, ಮುಗ್ಧ ಹಳ್ಳಿಗರ ಜೀವಗಳು ಬಲಿಯಾಗುವುದರಲ್ಲಿ ಸಂದೇಹವಿಲ್ಲ ಅನ್ನೋದು ಇಲ್ಲಿನವರ ಆತಂಕ.

ರ್ಬೋರ್ವೆಲ್‌ನಲ್ಲಿ ರಾಸಾಯನಿಕ ನೀರು: ಕುಡಿಯಲು ಬೋರ್ವೆಲ್‌ ನೀರನ್ನೇ ಅವಲಂಬಿಸಿರುವ ಕಡೇಚೂರು ಜನರಿಗೆ ಅಲ್ಲಿನ ಸೋಮೇಶ್ವರ ದೇವಸ್ಥಾನಹ ಹತ್ತಿರದ ರಸ್ತೆ ಜಾಮಿಯಾ ಮಸೀದಿ ಸಮೀಪದ ಬೋರ್ವೆಲ್‌ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಮಿಶ್ರಿತ ಕಪ್ಪು ದ್ರವ ಪದಾರ್ಥ ಬರುತ್ತಿರುವುದು ಆತಂಕ ಮೂಡಿಸಿದೆ. ವೈಜ್ಞಾನಿಕ ವಿಲೇವಾರಿ ಮಾಡಬೇಕಾದ ಕೆಲವು ಕಂಪನಿಗಳು ಭೂಮಿಯಾಳದಲ್ಲಿ ಅಪಾಯಕಾರಿ ಕೆಮಿಕಲ್‌ ತ್ಯಾಜ್ಯ ಬಿಡುತ್ತಿರುವದರಿಂದ, ಇಂತಹ ಸನ್ನಿವೇಶ ಎದುರಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಉಳಿದ ಬೋರ್‌ವೆಲ್‌ಗಳಲ್ಲೂ ಇಂತಹ ತ್ಯಾಜ್ಯ ಹೊರಬಂದರೆ ಅಚ್ಚರಿಪಡಬೇಕಿಲ್ಲ. ಕಂಪನಿಗಳು ಬೋರ್ವೆಲ್‌ ಕೊರೆಯಿಸಿ, ತ್ಯಾಜ್ಯ ಅದರಲ್ಲಿ ಬಿಡುತ್ತಾರೆ ಎಂದು ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ, ಸೈದಾಪುರ ನಿವಾಸಿಯೂ ಆಗಿರುವ ಶರಣಿಕ ಕುಮಾರ್ ದೋಕಾ, ಸಚಿವರೆದುರು ಆತಂಕ ವ್ಯಕ್ತಪಡಿಸಿದ್ದರು.