ವಿಶ್ವವಿದ್ಯಾಲಯಗಳನ್ನು ಮುಚ್ಚುವ ಯಾವುದೇ ನಿರ್ಧಾರ ಆಗಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

| N/A | Published : Mar 15 2025, 01:03 AM IST / Updated: Mar 15 2025, 08:08 AM IST

Karnataka Chief Minister Siddaramaiah (File Photo/ANI)
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಯಾವುದೇ ನಿರ್ಧಾರ ಆಗಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಅದರ ಕುರಿತು ಸದನದಲ್ಲಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ವಿಧಾನಸಭೆ : ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಅದರ ಕುರಿತು ಸದನದಲ್ಲಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಸರ್ಕಾರ ಆರಂಭಿಸಿದ 9 ವಿಶ್ವವಿದ್ಯಾಲಯಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಸದನದಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಬಿಜೆಪಿ ಶಾಸಕ ಡಾ। ಸಿ.ಎನ್‌.ಆಶ್ವತ್ಥನಾರಾಯಣ ಅವರ ನಿಲುವಳಿ ಸೂಚನೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು.

ಕಳೆದ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಆ ವಿಶ್ವವಿದ್ಯಾಲಯಗಳನ್ನು ಮುಚ್ಚಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಇನ್ನೂ ಸಂಪುಟ ಉಪ ಸಮಿತಿ ವರದಿ ನೀಡಿಲ್ಲ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಈ ವಿಚಾರದ ಕುರಿತು ಸದನದಲ್ಲಿ ಚರ್ಚಿಸುವ ಅವಶ್ಯಕತೆಯಿಲ್ಲ ಎಂದರು. 

ಬಾಗಿಲು ಹಾಕ್ತೀವಿ, ಬೀಗ ಹಾಕಲ್ಲ: ಅಶೋಕ್‌ ಟೀಕೆ

ಅದಕ್ಕೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ನೂತನ ವಿಶ್ವವಿದ್ಯಾಲಯಗಳ ವಿಚಾರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತೇವೆಂದರೆ, ಮುಖ್ಯಮಂತ್ರಿಗಳು ಮುಚ್ಚುವ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುತ್ತಿದ್ದಾರೆ. ಇದು ಬಾಗಿಲು ಹಾಕ್ತೀವಿ, ಆದರೆ ಬೀಗ ಹಾಕುವುದಿಲ್ಲ ಎನ್ನುವಂತಿದೆ. ಈ ಗೊಂದಲಕ್ಕೆ ಪರಿಹಾರ ಸಿಗಬೇಕೆಂದರೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.ಅದಕ್ಕೊಪ್ಪದ ಸಿದ್ದರಾಮಯ್ಯ, ನೂತನ ವಿಶ್ವವಿದ್ಯಾಲಯ ವಿಚಾರ ಚರ್ಚೆ ಮಾಡಲೇಬೇಕಾದ ವಿಚಾರವಲ್ಲ. ಸಚಿವ ಸಂಪುಟ ಉಪಸಮಿತಿ ವರದಿ ನೀಡಿ, ಅದನ್ನು ಪರಿಶೀಲಿಸಿದ ನಂತರ ವಿಶ್ವವಿದ್ಯಾಲಯಗಳ ಕುರಿತು ಚರ್ಚೆ ನಡೆಸುವುದು ಉತ್ತಮ ಎಂದರು.

ಅಂತಿಮವಾಗಿ ಸ್ಪೀಕರ್‌ ಯು.ಟಿ.ಖಾದರ್‌, ನೂತನ ವಿಶ್ವವಿದ್ಯಾಲಯ ಕುರಿತ ವಿಚಾರವನ್ನು ಮುಂದಿನ ವಾರ ಚರ್ಚೆಗೆ ನೀಡುವುದಾಗಿ ತಿಳಿಸಿ ವಾದಕ್ಕೆ ಅಂತ್ಯ ಹಾಡಿದರು.