ಗ್ರಾಮಾಂತರಕ್ಕೆ ಸೂಕ್ತ ಸವಲತ್ತು ನೀಡುವಂತೆ ಸರ್ಕಾರಿ ಶಾಲಾ ಮಕ್ಕಳ ಮನವಿ

| Published : Feb 01 2025, 12:46 AM IST

ಸಾರಾಂಶ

ನಾನು ಕಳೆದ ನಾಲ್ಕು ತಿಂಗಳಿಂದ ನನ್ನ ಸ್ವಂತ ಊರಾದ ಡಿ.ಬಿ. ಕುಪ್ಪೆ ಗ್ರಾಪಂಗೆ ಅಧಿಕಾರಿಯಾಗಿ ಬಂದಿದ್ದೀನಿ, ಇಲ್ಲಿನ ಸಮಸ್ಯೆ ಸಂಪೂರ್ಣವಾಗಿ ಗೊತ್ತು

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಕುಡಿಯಲು ನೀರಿಲ್ಲ, ಆಟವಾಡಲು ಮೈದಾನವಿಲ್ಲ, ಕಟ್ಟಡವಿಲ್ಲ, ಶಿಕ್ಷಕರಿಲ್ಲ, ಕಾಂಪೌಂಡ್ ಇಲ್ಲ, ಲೈಬ್ರರಿ ಇಲ್ಲ, ಅಂಗನವಾಡಿ ಕಟ್ಟಡ ಇಲ್ಲ, ಆಹಾರ ಪದಾರ್ಥ ಇಡಲು ರೂಮ್ ಇಲ್ಲ, ಇದು ಸರ್ಕಾರಿ ಶಾಲೆಯಲ್ಲಿ ಕಂಡು ಬಂದ ದೃಶ್ಯವಾಗಿದೆ ಎಂದು ಶಾಲಾ ಮಕ್ಕಳು ದೂರಿದರು.

ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಪಂನಿಂದ ಡಿ.ಬಿ. ಕುಪ್ಪೆ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಂದ ಕೇಳಿ ಬಂದ ಕೂಗು.

ಸಭೆಯ ಉದ್ದೇಶಿಸಿ ಪಿಡಿಒ ಸ್ವಾಮಿ ಭೋಗೇಶ್ವರ ಮಾತನಾಡಿ, ನಾನು ಕಳೆದ ನಾಲ್ಕು ತಿಂಗಳಿಂದ ನನ್ನ ಸ್ವಂತ ಊರಾದ ಡಿ.ಬಿ. ಕುಪ್ಪೆ ಗ್ರಾಪಂಗೆ ಅಧಿಕಾರಿಯಾಗಿ ಬಂದಿದ್ದೀನಿ, ಇಲ್ಲಿನ ಸಮಸ್ಯೆ ಸಂಪೂರ್ಣವಾಗಿ ಗೊತ್ತು ಎಂದರು.

ನಾನು ಕೂಡ ಊಟ, ಬಟ್ಟೆ ಸಮಸ್ಯೆಯಿಂದ ಸೀಮೆಎಣ್ಣೆ ದೀಪದಲ್ಲಿ ಓದಿ ಕಷ್ಟಪಟ್ಟು ಶಿಕ್ಷಣ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದೇನೆ, ನಮ್ಮ ಭಾಗದಲ್ಲಿ ರಿಸರ್ವ್ ಫಾರೆಸ್ಟ್ ಎಂದು ಯಾವ ಅಭಿವೃದ್ಧಿ ಕೆಲಸವನ್ನು ಮಾಡಲಾಗುತ್ತಿಲ್ಲ, ಆದರೂ ನಮ್ಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಶಾಸಕರ ಮತ್ತು ಸರ್ಕಾರದ ಗಮನಕ್ಕೆ ತಂದು ಹಂತ ಹಂತವಾಗಿ ಬದಲಾವಣೆ ಮಾಡುವ ಆಸೆ ಇಟ್ಟುಕೊಂಡು ಬಂದಿದ್ದೇನೆ ಎಂದು ತಮ್ಮ ಬಾಲ್ಯ ಜೀವನವನ್ನ ಮಕ್ಕಳ ಮುಂದೆ ಬಿಚ್ಚಿಟ್ಟರು.

ವಿದ್ಯಾರ್ಥಿನಿ ಮಂಜುಳ, ನಮ್ಮ ಶಾಲೆಗೆ ಶೌಚಾಲಯ ಕಟ್ಟಿಸಿಕೊಡಿ, ಜಯಶೀಲ ಪ್ರಾಣಿಗಳ ಭಯವಿದೆ ಕಾಂಪೌಂಡ್ ಹಾಕಿಸಿ, ಪ್ರತಿದಿನ ಆಟ ಆಡಲು ಜಾಗವು ಇಲ್ಲ, ಮೈದಾನವು ಇಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ ನಮ್ಮ ಪಂಚಾಯಿತಿ ವತಿಯಿಂದ ಯಾವ ಕಾಮಗಾರಿ ಮಾಡಲು ಹೋದರು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಎಲ್ಲದಕ್ಕೂ ಅನುಮತಿ ಕೇಳುತ್ತಾರೆ, ಪಂಚಾಯ್ತಿ ಯಿಂದ ಸರಿಯಾಗಿ ನೀರು, ಚರಂಡಿ, ರಸ್ತೆ, ಮನೆ, ಶಾಲೆ ಮತ್ತು ಅಂಗವಾಡಿಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ, ಇದರಿಂದ ನಮಗೆ ತುಂಬಾ ಬೇಸರವಾಗಿ ಶಾಸಕರು ಮತ್ತು ಜಿಲ್ಲಾ ಮಂತ್ರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ, ಸದಸ್ಯರಾದ ಶಿವಲಿಂಗ, ಜಯ, ಶಾರದ, ಪಿಡಿಒ ಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ರಾಮು, ಸಿಆರ್.ಪಿ. ನಂಜಯ್ಯ, ಮುಖ್ಯಶಿಕ್ಷಕ ನಾರಾಯಣ ಸ್ವಾಮಿ, ಶಶಿಕಲಾ, ಸುರೇಶ್, ರಾಮಕೃಷ್ಣಯ್ಯ, ರತ್ನಯ್ಯ, ಪುಟ್ಟಸ್ವಾಮಿ, ವೇಣುಗೋಪಾಲ, ನಾಗನಾಯ್ಕ್, ಕಾರ್ತಿಕ್ ಕುಮಾರ್, ಎಸ್.ವಿ.ಎಂ. ಶಿವಲಿಂಗ, ಪೀಪಲ್ ಟ್ರೀ ಜವರೇಗೌಡ, ಚನ್ನಬಸಪ್ಪ ಮತ್ತು ಸುಮಾರು 11 ಶಾಲಾ ಮಂತ್ರಿಮಂಡಲದ ಮಕ್ಕಳು ಹಾಗೂ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಭಾಗವಹಿಸಿದ್ದರು.