ಸಾರಾಂಶ
ಇದೇ ತಿಂಗಳ 22 ರಿಂದ ದೇಶದಲ್ಲಿ ನವರಾತ್ರಿ ಆರಂಭಗೊಳ್ಳಲಿದೆ. ಇದೇ ವೇಳೆ ರಾಜ್ಯದಲ್ಲಿ ಜಾತಿಗಣತಿಯ ಸಮೀಕ್ಷೆಯೂ ಪ್ರಾರಂಭವಾಗಲಿದೆ. ಈ ಸಮೀಕ್ಷೆಗೆ ರಾಜ್ಯ ಸರ್ಕಾರ ಶಾಲಾ ಶಿಕ್ಷಕರನ್ನು ನೆಚ್ಚಿಕೊಂಡಿದೆ.
ಹೊನ್ನಾವರ: ಇದೇ ತಿಂಗಳ 22 ರಿಂದ ದೇಶದಲ್ಲಿ ನವರಾತ್ರಿ ಆರಂಭಗೊಳ್ಳಲಿದೆ. ಇದೇ ವೇಳೆ ರಾಜ್ಯದಲ್ಲಿ ಜಾತಿಗಣತಿಯ ಸಮೀಕ್ಷೆಯೂ ಪ್ರಾರಂಭವಾಗಲಿದೆ. ಈ ಸಮೀಕ್ಷೆಗೆ ರಾಜ್ಯ ಸರ್ಕಾರ ಶಾಲಾ ಶಿಕ್ಷಕರನ್ನು ನೆಚ್ಚಿಕೊಂಡಿದೆ. ರಾಜ್ಯದಲ್ಲಿ 1,75,000ಶಿಕ್ಷಕರನ್ನು ಈ ಗಣತಿಗಾಗಿ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ದಸರಾ ರಜೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಜೆಯನ್ನು ನೀಡದೆ ಸರ್ಕಾರ ಸಜೆ ನೀಡಿದಂತಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ಕೆಲಸ ಮಾಡುವುದಾಗಿದ್ದರೂ ಇಂತಹ ಕೆಲಸಗಳಿಗೆ ತಮ್ಮನ್ನು ಏಕೆ ಬಳಸಿಕೊಳ್ಳುತ್ತಾರೆ ಎಂದೇ ಅರ್ಥವಾಗುತ್ತಿಲ್ಲ. ನವರಾತ್ರಿ ಮುಖ್ಯವಾಗಿ ಮಹಿಳೆಯರಿಗೆ ವಿಶೇಷ ಹಬ್ಬ ಎನಿಸಿಕೊಂಡಿದೆ. ಆದರೆ ಈ ಗಣತಿಯಲ್ಲಿ ಬಹುತೇಕ ಕಾರ್ಯವನ್ನು ನಿರ್ವಹಿಸಲು ಹೋಗುವವರು ಶಿಕ್ಷಕಿಯರೇ ಆಗಿದ್ದಾರೆ. ಹೀಗಾಗಿ ನವರಾತ್ರಿ ಹಬ್ಬದ ತಯಾರಿಯನ್ನು ನಡೆಸಲು ಆಗುವುದಿಲ್ಲ ಎಂಬ ಕೊರಗು ಶಿಕ್ಷಕಿಯರಲ್ಲಿದೆ.
ಗಣತಿಯ ವಿಚಾರವಾಗಿ ಹೊನ್ನಾವರ ತಾಲೂಕಿನಲ್ಲಿ 440 ಶಿಕ್ಷಕರನ್ನು ಈ ಕೆಲಸಕ್ಕೆ ನಿಯುಕ್ತಿಗೊಳಿಸಲು ಆದೇಶಿಸಲಾಗಿದೆ. ಮುಖ್ಯವಾಗಿ ತಾಲೂಕಿನ ಶಿಕ್ಷಕರಲ್ಲಿ ಎಲ್ಲರೂ ಪ್ರಾಥಮಿಕ ಶಾಲಾ ಶಿಕ್ಷಕರೇ ಆಗಿದ್ದಾರೆ. ಕೇವಲ ಇಬ್ಬರು ಪ್ರೌಢಶಾಲೆಯ ಶಿಕ್ಷಕರಿಗೆ ಮಾತ್ರ ಗಣತಿಯ ಮೇಲುಸ್ತುವಾರಿ ಕೆಲಸಕ್ಕೆ ಮಾತ್ರ ಆದೇಶ ನೀಡಲಾಗಿದೆ.
ಕೆಲವು ಇಲಾಖೆಯಲ್ಲಿ ಇಂತಹ ಹೆಚ್ಚುವರಿ ಕೆಲಸ ಮಾಡಿದರೆ ಗಳಿಕೆ ರಜೆ ನೀಡಲಾಗುತ್ತದೆ. ಆದರೆ ಶಿಕ್ಷಕರಿಗೆ ಈ ಸೌಲಭ್ಯವನ್ನು ನೀಡಿಲ್ಲ. ಇತ್ತೀಚೆಗಷ್ಟೆ ಸರ್ಕಾರ ಶಿಕ್ಷಕರಿಗೆ ಯಾವ ಪಠ್ಯೇತರ ಚಟುವಟಿಕೆ ನೀಡುವುದಿಲ್ಲ ಎಂದು ಹೇಳಿತ್ತು. ಆದರೆ ಇದೀಗ ಗಣತಿಗೆ ಬಳಸಿಕೊಳ್ಳಲಾಗಿದೆ.
ಶಿಕ್ಷಕರನ್ನು ಕಲಿಸಲು ಬಿಡದೇ ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಂಡರೆ ಅವರ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಎನ್ನುವುದು ಶಿಕ್ಷಣ ತಜ್ಙರು ಅಭಿಮತ.
ಹೊನ್ನಾವರ ತಾಲೂಕಿನಲ್ಲಿ ಶೇ.೯೦ ಪ್ರಾಥಮಿಕ ಶಾಲಾ ಶಿಕ್ಷಕರನ್ನಷ್ಟೇ ಗಣತಿ ಕಾರ್ಯಕ್ಕೆ ನಿಯೋಜಿಸಿದ್ದಾರೆ ಇದು ಯಾವ ನ್ಯಾಯ. ದಸರಾ ನಮ್ಮ ನಾಡಹಬ್ಬ ಅದರಲ್ಲೂ ಮಹಿಳೆಯರಿಗೆ ವಿಶೇಷವಾದ ಹಬ್ಬ ಇಂಥ ಸಂದರ್ಭದಲ್ಲಿ ಗಣತಿಯನ್ನು ದಸರಾ ರಜೆಯ ನಂತರ ಮುಂದೂಡುವುದು ಉತ್ತಮ ಎನ್ನುವುದು ಸಂಘಟನೆ ಅಭಿಪ್ರಾಯ.
ಈ ಕೆಲಸಕ್ಕೆ ಅನ್ಯ ಇಲಾಖೆಯ ನೌಕರರನ್ನು ಬಳಸಿಕೊಂಡು ಸಮೀಕ್ಷೆ ಮಾಡುವುದು ಉತ್ತಮ. ಸರ್ಕಾರ ಇದನ್ನು ಮನಗಂಡು ಗಣತಿ ಕಾರ‍್ಯವನ್ನು ಮಾಡುವುದು ಒಳಿತು. ಶಿಕ್ಷಕರಿಗೆ ಅವರ ಶಾಲಾ ವ್ಯಾಪ್ತಿಯಲ್ಲಿ ಮನೆ ಹಂಚಿಕೆ ಮಾಡಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ರಕ್ಷಣೆ ಒದಗಿಸಬೇಕು. ಸರ್ಕಾರ ನಮ್ಮ ಸಮಸ್ಯೆಯನ್ನು ಮನಗಂಡು ಸಮೀಕ್ಷೆ ಕಾರ್ಯವನ್ನು ಜಾರಿಗೊಳಿಸಬೇಕೆಂದು ಸಂಘ ವಿನಂತಿಸುತ್ತದೆ ಎನ್ನುತ್ತಾರೆ ಹೊನ್ನಾವರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಎಂ.ಜಿ. ನಾಯ್ಕ.
;Resize=(128,128))
;Resize=(128,128))
;Resize=(128,128))
;Resize=(128,128))