ಮೈಷುಗರ್ ಕಾರ್ಖಾನೆಯಲ್ಲಿ ಸದ್ಯಕ್ಕೆ ಎಥೆನಾಲ್ ಪ್ಲಾಂಟ್ ಸ್ಥಾಪಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಕಂಪನಿಯ ಬಾಯ್ಲಿಂಗ್ ಹೌಸ್ ದುರಸ್ತಿ, ೫ ಸಾವಿರ ಟಿಸಿಡಿ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರೋಪಕರಣಗಳ ಅಳವಡಿಕೆಗೆ ೬೦ ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಲ್ಲಿ ಸದ್ಯಕ್ಕೆ ಎಥೆನಾಲ್ ಪ್ಲಾಂಟ್ ಸ್ಥಾಪಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಕಂಪನಿಯ ಬಾಯ್ಲಿಂಗ್ ಹೌಸ್ ದುರಸ್ತಿ, ೫ ಸಾವಿರ ಟಿಸಿಡಿ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರೋಪಕರಣಗಳ ಅಳವಡಿಕೆಗೆ ೬೦ ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಕಾರ್ಖಾನೆಯನ್ನು ಸಕ್ಕರೆ ಉತ್ಪಾದನೆಗಷ್ಟೇ ಸೀಮಿತಗೊಳಿಸಿರುವುದರಿಂದ ಆರ್ಥಿಕ ಪ್ರಗತಿ ಕನಸಿನ ಮಾತಾಗಿದೆ.

ಖಾಸಗಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಗಿಂತ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಎಥೆನಾಲ್‌ಗೆ ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಪೆಟ್ರೋಲ್‌ಗೆ ಶೇ.೨೦ರಷ್ಟು ಎಥೆನಾಲ್ ಮಿಶ್ರಣ ಮಾಡುವ ನಿಯಮವೂ ಜಾರಿ ಹಂತದಲ್ಲಿರುವುದರಿಂದ ಎಥೆನಾಲ್ ಪರ್ಯಾಯ ಇಂಧನ ಮೂಲವಾಗಿ ರೂಪುಗೊಳ್ಳಲಾರಂಭಿಸಿದೆ. ಮೈಷುಗರ್ ದೂರದೃಷ್ಟಿಯಿಂದ ಎಥೆನಾಲ್ ಘಟಕ ಸ್ಥಾಪಿಸಿದ್ದರೆ ಮೈಸೂರು ಅರಸರು ಸ್ಥಾಪಿಸಿದ ಕಾರ್ಖಾನೆಗೆ ಗತವೈಭವ ಮರಳಿಸಬಹುದಿತ್ತು.

ಎಥೆನಾಲ್ ಪ್ಲಾಂಟ್ ನೆನೆಗುದಿಗೆ:

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯಲ್ಲಿ ಬಾಯ್ಲಿಂಗ್ ಹೌಸ್ ದುರಸ್ತಿ, ೫೦೦೦ ಟನ್ ಕಬ್ಬು ಅರೆಯುವ ಹೊಸ ಯಂತ್ರೋಪಕರಣಗಳ ಅಳವಡಿಕೆಗೆ ೫೯.೮೦ ಕೋಟಿ ರು., ೨೮೮.೪೯ ಕೋಟಿ ರು. ವೆಚ್ಚದಲ್ಲಿ ಮತ್ತೊಂದು ೫೦೦೦ ಟನ್ ಸಾಮರ್ಥ್ಯ ಕಬ್ಬು ನುರಿಸುವ ಹೊಸ ಷುಗರ್ ಪ್ಲಾಂಟ್ ಜೊತೆಗೆ ೧೦೦ ಟಿಪಿಎಚ್ ಸಾಮರ್ಥ್ಯದ ಬಾಯ್ಲರ್ ಹಾಗೂ ೧೧೬ ಕೋಟಿ ರು. ವೆಚ್ಚದ ೮೦ ಸಾವಿರ ಲೀಟರ್ ಸಾಮರ್ಥ್ಯದ ಎಥೆನಾಲ್ ಪ್ಲಾಂಟ್, ಬಾಯ್ಲರ್ ಅನುಷ್ಠಾನವನ್ನು ಸೇರಿಸಿತ್ತು.

ಆದರೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊಸ ಷುಗರ್ ಪ್ಲಾಂಟ್, ಎಥೆನಾಲ್ ಘಟಕ ಸ್ಥಾಪನೆಯನ್ನು ಕೈಬಿಟ್ಟು ಬಾಯ್ಲಿಂಗ್ ಹೌಸ್ ದುರಸ್ತಿ, ೫ ಸಾವಿರ ಟನ್ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರೋಪಕರಣಗಳ ಅಳವಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿ ಎಥೆನಾಲ್ ಘಟಕ ಸ್ಥಾಪನೆಯನ್ನು ನೆನೆಗುದಿಗೆ ಬೀಳುವಂತೆ ಮಾಡಿದೆ.

ಎಥೆನಾಲ್ ಘಟಕ ಸ್ಥಾಪನೆ ಅವಶ್ಯ:

ಪ್ರಸ್ತುತ ಕೇಂದ್ರ ಸರ್ಕಾರ ಪೆಟ್ರೋಲ್‌ಗೆ ಶೇ.೨೦ರಷ್ಟು ಎಥೆನಾಲ್ ಮಿಶ್ರಣ ಮಾಡುವ ಸಂಬಂಧ ಕರಡು ನಿಯಮಾವಳಿ ಜಾರಿಗೆ ತರುವ ಹಂತದಲ್ಲಿದೆ. ಪರ್ಯಾಯ ಇಂಧನ ಮೂಲವಾಗಿ ಎಥೆನಾಲ್‌ಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಮೈಷುಗರ್ ಕಾರ್ಖಾನೆಯ ಆರ್ಥಿಕತೆ ದೃಷ್ಟಿಯಿಂದಲೂ ಎಥೆನಾಲ್ ಪ್ಲಾಂಟ್ ಅವಶ್ಯವಿತ್ತು. ಇದರಿಂದ ಕಾರ್ಖಾನೆಯನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿದ್ದರೂ ಸರ್ಕಾರ ಪಸ್ತಾವಿತ ಯೋಜನೆಯನ್ನು ಪಕ್ಕಕ್ಕೆ ಸರಿಸಿ ಕೇವಲ ಬಾಯ್ಲಿಂಗ್ ಹೌಸ್ ಮತ್ತು ಹೊಸ ಯಂತ್ರೋಪಕರಣಗಳ ಅಳವಡಿಕೆಗೆ ಅನುಮತಿ ನೀಡಿರುವುದು ಕಾರ್ಖಾನೆಯ ಆರ್ಥಿಕ ಪ್ರಗತಿಗೆ ಅಡ್ಡಿಯುಂಟಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಆರ್ಥಿಕ ಬಲವರ್ಧನೆಗೆ ಅನುಕೂಲ:

ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಕಾರ್ಖಾನೆಯಲ್ಲಿದ್ದ ಡಿಸ್ಟಿಲರಿ ಘಟಕ ಕಾರ್ಖಾನೆಯ ಪ್ರಮುಖ ಆದಾಯ ಮೂಲವಾಗಿತ್ತು. ಕನಿಷ್ಠ ಪಕ್ಷ ಡಿಸ್ಟಿಲರಿ ಘಟಕವನ್ನಾದರೂ ಆಧುನೀಕರಣಗೊಳಿಸಿದ್ದರೆ ಅದರಿಂದಲೂ ಆದಾಯವನ್ನು ಪಡೆದು ಆರ್ಥಿಕ ಚೇತರಿಕೆ ಕಾಣಬಹುದಿತ್ತು. ಎಥೆನಾಲ್ ಘಟಕ ಸ್ಥಾಪನೆಗೆ ಆದ್ಯತೆ ನೀಡಿದ್ದರೂ ಕಾರ್ಖಾನೆ ನಷ್ಟದಿಂದ ಪುಟಿದೇಳಲು ಅವಕಾಶವಿತ್ತು. ಆದರೆ, ರಾಜ್ಯಸರ್ಕಾರ ಅದಕ್ಕೂ ಅನುದಾನ ಬಿಡುಗಡೆಗೊಳಿಸದೆ ಸಕ್ಕರೆ ಉತ್ಪಾದನೆಗಷ್ಟೇ ಕಾರ್ಖಾನೆಯನ್ನು ಸೀಮಿತಗೊಳಿಸಿ ನಷ್ಟದ ಪ್ರಪಾತದಲ್ಲೇ ಉಳಿಸಿದೆ.

೩೨ರಲ್ಲಿ ಉತ್ಪಾದನೆ, ೩೩ಕ್ಕೆ ಅನುಮತಿ:

ಖಾಸಗಿ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯನ್ನು ಮಿತಿಯಲ್ಲಿಟ್ಟುಕೊಂಡು ಎಥೆನಾಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾರಂಭಿಸಿವೆ. ರಾಜ್ಯದಲ್ಲಿರುವ ೬೫ ಸಕ್ಕರೆ ಕಾರ್ಖಾನೆಗಳ ಪೈಕಿ ೩೨ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಮಾಡುತ್ತಿದ್ದರೆ ಉಳಿದ ೩೩ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಹೊಸ ಘಟಕ ಸ್ಥಾಪನೆಗೆ ಕೇಂದ್ರದಿಂದ ಅನುಮತಿಯನ್ನು ಪಡೆದುಕೊಂಡಿವೆ. ಆದರೆ, ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ಮೈಷುಗರ್ ಕಂಪನಿಯನ್ನು ಸಕ್ಕರೆ ಉತ್ಪಾದನೆಗಷ್ಟೇ ಸರ್ಕಾರ ಸೀಮಿತಗೊಳಿಸಿದೆ. ಡಿಸ್ಟಿಲರಿ ಘಟಕ, ಎಥೆನಾಲ್ ಉತ್ಪಾದನೆಗೆ ಅವಕಾಶವನ್ನೇ ನೀಡದಿರುವುದು ಈ ಭಾಗದ ರೈತರು ಮತ್ತು ಕಾರ್ಖಾನೆಯ ದೌರ್ಭಾಗ್ಯವಾಗಿದೆ.ಎಥೆನಾಲ್ ಉತ್ಪಾದಿಸಿದರೆ ಕೇಂದ್ರ ಸರ್ಕಾರದಿಂದ ಸಾಲ ಸೇರಿದಂತೆ ವಿವಿಧ ಸೌಲಭ್ಯವೂ ಸಿಗುತ್ತದೆ. ಎಥೆನಾಲ್‌ಗೆ ಮಾರುಕಟ್ಟೆ ಸಮಸ್ಯೆಯಾಗುವುದಿಲ್ಲ. ಎಥೆನಾಲ್ ಪರ್ಯಾಯ ಇಂಧನವಾಗಿ ಬಳಕೆಯಾಗುವುದರಿಂದ ನಷ್ಟವಾಗುವುದಿಲ್ಲ. ರೈತರಿಗೂ ಸಕಾಲದಲ್ಲಿ ಹಣ ಪಾವತಿ ಮಾಡಲು ಅನುಕೂಲವಾಗಲಿದೆ. ಮೈಷುಗರ್ ಪ್ರಗತಿ ಬಗ್ಗೆ ಸರ್ಕಾರಕ್ಕೆ ನಿಜವಾದ ಇಚ್ಛಾಶಕ್ತಿ ಇದ್ದರೆ ಎಥೆನಾಲ್ ಪ್ಲಾಂಟ್ ಸ್ಥಾಪಿಸಬೇಕು.

- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ