ಬರ ಘೋಷಣೆಗೆ ಸರ್ಕಾರದ ಕುಂಟು ನೆಪ ಸಹಿಸಲ್ಲ

| Published : Oct 08 2023, 12:02 AM IST

ಸಾರಾಂಶ

ಕೇಂದ್ರ ಸರ್ಕಾರದ ನಿಯಮಗಳಿಂದಾಗಿ ಬರಗಾಲ ಘೋಷಣೆ ಅಡ್ಡಿಯಾಗಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕಾಗಿತ್ತು. ಆದರೀಗ ಕುಂಟುನೆಪ ಹೇಳಿ ರೈತರಿಗೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ರಾಜ್ಯದ ತಕರಾರು ಅರ್ಥಹೀನ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ಎಚ್ಚರಿಕೆ ಕನ್ನಡಪ್ರಭ ವಾರ್ತೆ ಹಾನಗಲ್ಲ ಕೇಂದ್ರ ಸರ್ಕಾರದ ನಿಯಮಗಳಿಂದಾಗಿ ಬರಗಾಲ ಘೋಷಣೆ ಅಡ್ಡಿಯಾಗಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕಾಗಿತ್ತು. ಆದರೀಗ ಕುಂಟುನೆಪ ಹೇಳಿ ರೈತರಿಗೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ರಾಜ್ಯದ ತಕರಾರು ಅರ್ಥಹೀನ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಶುಕ್ರವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ೩ ತಾಲೂಕುಗಳನ್ನು ಬರಗಾಲ ಘೋಷಣೆಯಿಂದ ಬಿಟ್ಟಿರುವುದು ಅಪರಾಧ. ೧೩೩ ವರ್ಷಗಳ ಹಿಂದೆ ಬಂದಂತಹ ಘೋರ ಬರಗಾಲ ಮರುಕಳಿಸಿದೆ ಎಂಬುದನ್ನು ಸರ್ಕಾರ ಹಾಗೂ ಅಧಿಕಾರಿಗಳು ಮೊದಲು ಅರಿಯಬೇಕು. ಜಲಾಶಯಗಳಲ್ಲಿ ನೀರಿಲ್ಲ, ಜನ ಜಾನುವಾರಿಗೆ ಕುಡಿಯಲು ನೀರಿಲ್ಲ. ಬೆಳೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ ಅವರು, ಇವೆಲ್ಲ ಮನುಷ್ಯತ್ವ ಇರುವವರಿಗೆ ಅರ್ಥವಾಗುವ ವಿಷಯಗಳು ಎಂದರಲ್ಲದೆ, ಸರ್ಕಾರ ಸಮಿತಿ ರಚಿಸುವ ನೆಪಗಳನ್ನು ಹೇಳದೇ ಕೂಡಲೇ ಬರಪೀಡಿತ ಎಲ್ಲ ತಾಲೂಕುಗಳನ್ನು ಘೋಷಿಸಬೇಕು. ಅಲ್ಲಿಯತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರ ಮೊದಲು ರೈತರಿಗೆ ಮಧ್ಯಂತರ ಪರಿಹಾರ ನೀಡಲಿ. ನಮ್ಮದು ಶಿಸ್ತಿನ ಹೋರಾಟ. ಕಲ್ಲು ಹೊಡೆದು, ಕದಾ ಹಾಕದೆ ಅಹಿಂಸಾತ್ಮಕ ಹೋರಾಟಕ್ಕೆ ನಾವು ಮುಂದಾಗಿದ್ದೇವೆ. ಅದಕ್ಕೆ ಸರ್ಕಾರ ಬಗ್ಗದಿದ್ದರೆ ನಮ್ಮ ಹೋರಾಟ ಉಗ್ರ ಸ್ವರೂಪ ತಾಳುತ್ತದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗೊಳಗಾದ ಜಿಲ್ಲೆ ಹಾವೇರಿ ಎಂದು ಇಡೀ ರಾಜ್ಯ ಮಾತನಾಡುತ್ತಿದೆ. ರೈತ ಬಂಧುಗಳೆ, ಆತ್ಮಹತ್ಯೆ ಇದೆಲ್ಲದಕ್ಕೂ ಪರಿಹಾರ ಅಲ್ಲ. ಅನ್ನ ಹಾಕುವ ನಾವು ಜೀವ ಕಳೆದುಕೊಳ್ಳುವುದು ಬೇಡ. ಸಾವಿರಾರು ಕೋಟಿ ಲೂಟಿ ಹೊಡೆದವರು ಊರು ಬಿಟ್ಟು ಹೋಗಿ ಬದುಕುತ್ತಾರೆ. ಅವರೇ ಸಾಯೋಲ್ಲ, ನೀವೇಕೆ ಸಾಯಬೇಕು? ನಿಮ್ಮ ಕಷ್ಟಕ್ಕೆ ಸಂಘ ಇದೆ. ಹಾನಗಲ್ಲ ತಾಲೂಕು ಇಷ್ಟೆಲ್ಲ ಬರಪೀಡಿತ ಎಂದು ತಿಳಿದಿದ್ದರೂ ಘೋಷಣೆ ಮಾಡದಿರುವುದು ಸರಿಯಲ್ಲ, ರೈತರ ಉಗ್ರ ಹೋರಾಟಕ್ಕೆ ಎಡೆ ಮಾಡುವುದು ಬೇಡ ಎಂದರು ಎಚ್ಚರಿಸಿದರು. ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಅಡವೆಪ್ಪ ಆಲದಕಟ್ಟಿ, ಸೋಮಣ್ಣ ಜಡೆಗೊಂಡರ್, ರುದ್ರಪ್ಪ ಹಣ್ಣಿ, ಷಣ್ಮುಖ ಅಂದಲಗಿ, ಮಲ್ಲನಗೌಡ ಪಾಟೀಲ, ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ತಾಲೂಕು ಅಧಿಕಾರಿಗಳಾದ ತಹಸೀಲ್ದಾರ್‌ ರವಿಕುಮಾರ ಕೊರವರ, ಕೃಷಿ ಇಲಾಖೆ ಅಧಿಕಾರಿ ಮೋಹನಕುಮಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಮೊದಲಾದವರು ಈ ಸಂದರ್ಭದಲ್ಲಿದ್ದರು. ಕೋಟ್ : ಭಾರೀ ಬರ ಬಂದಿದೆ. ನೀರು, ವಿದ್ಯುತ್, ಜಾನುವಾರುಗಳ ಮೇವು ಹಿತ ಮಿತವಾಗಿ ಬಳಸಿ. ಅನಗತ್ಯವಾಗಿ ಕೆಡಿಸದಿರಿ. ಡಿಸೆಂಬರ್‌ನಿಂದ ವಿದ್ಯುತ್ ಸಿಗಲಿಕ್ಕಿಲ್ಲ, ನೀರು ಸಿಗುವುದೂ ಕಷ್ಟ. ಮೇವು ರಕ್ಷಿಸಿಕೊಳ್ಳಿ. ಆತ್ಮಹತ್ಯೆಯಂತಹ ದುರ್ಬಲಕ್ಕೆ ಕೈ ಹಾಕದಿರಿ. ಒಟ್ಟಾಗಿ ಹೋರಾಡಿ, ಒಟ್ಟಾಗಿ ಬದುಕೋಣ, ಸಂಘ ನಿಮ್ಮೊಂದಿಗಿದೆ. ಕೆ.ಟಿ. ಗಂಗಾಧರ, ರಾಜ್ಯಾಧ್ಯಕ್ಷ ೬ಎಚ್‌ಎನ್‌ಎಲ್೧ ಹಾನಗಲ್ಲಿನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ರೈತರ ಅಹೋರಾತ್ರಿ ಧರಣಿಗೆ ಭೇಟಿ ನೀಡಿ ಮಾತನಾಡಿದರು. ೬ಎಚ್‌ಎನ್‌ಎಲ್೧ ಹಾನಗಲ್ಲಿನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ರೈತರ ಅಹೋರಾತ್ರಿ ಧರಣಿಗೆ ಭೇಟಿ ನೀಡಿ ಮಾತನಾಡಿದರು.