ಸಾರಾಂಶ
ಧಾರವಾಡ ಜನ್ನತ್ ನಗರ ಮತ್ತು ಆರೋಗ್ಯ ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಶಾಸಕರು ಮಾಹಿತಿ ನೀಡಿದ್ದರು. ಅದರಂತೆ ನಮ್ಮ ತಂಡ ಮಸೀದಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ. 15ರಿಂದ 56 ವಯಸ್ಸಿನ 20 ಜನ ಸೂರತ್‌ನಿಂದ ಮಸೀದಿಯಲ್ಲಿ ತರಬೇತಿ ನೀಡಲು ಬಂದಿದ್ದಾರೆ. ಅವರ ಆಧಾರ್, ಪಾಸ್‌ಪೋರ್ಟ್ ಸಹ ಪರಿಶೀಲಿಸಿದ್ದೇವೆ.
ಹುಬ್ಬಳ್ಳಿ: ಧಾರವಾಡ ಜನ್ನತ್ ನಗರ ಹಾಗೂ ಆರೋಗ್ಯ ನಗರದ ಮಸೀದಿಗಳಲ್ಲಿ ಕಂಡುಬಂದವರು ವಿದೇಶಿ ಮೂಲದವರಲ್ಲ. ಶಾಸಕ ಅರವಿಂದ ಬೆಲ್ಲದ ನೀಡಿದ ಅನುಮಾನಾಸ್ಪದ ವ್ಯಕ್ತಿಗಳ ಕುರಿತಂತೆ ಪರಿಶೀಲನೆ ಮಾಡಲಾಗಿದ್ದು, ಅವರೆಲ್ಲ ಸೂರತ್ ಮೂಲದವರು ಎನ್ನುವುದು ತಿಳಿದುಬಂದಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜನ್ನತ್ ನಗರ ಮತ್ತು ಆರೋಗ್ಯ ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಶಾಸಕರು ಮಾಹಿತಿ ನೀಡಿದ್ದರು. ಅದರಂತೆ ನಮ್ಮ ತಂಡ ಮಸೀದಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ. 15ರಿಂದ 56 ವಯಸ್ಸಿನ 20 ಜನ ಸೂರತ್‌ನಿಂದ ಮಸೀದಿಯಲ್ಲಿ ತರಬೇತಿ ನೀಡಲು ಬಂದಿದ್ದಾರೆ. ಅವರ ಆಧಾರ್, ಪಾಸ್‌ಪೋರ್ಟ್ ಸಹ ಪರಿಶೀಲಿಸಿದ್ದೇವೆ. ಪಾಲಿಕೆ ವಲಯ ಅಧಿಕಾರಿಗಳೂ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದರಂತೆ ಶಾಸಕರು ಅತಿಹೆಚ್ಚು ಸಿಮ್ ಕಾರ್ಡ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಮ್ ವಿತರಣಾ ಕಂಪನಿಗಳ ಸಭೆ ಕರೆದು ಆ ಕುರಿತು ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದರು.ಹುಬ್ಬಳ್ಳಿ-ಧಾರವಾಡದಲ್ಲಿ ಓರ್ವ ಪಾಕಿಸ್ತಾನದ ಮಹಿಳೆ ಇದ್ದು, ಅವರು ದೀರ್ಘಕಾಲದ ವೀಸಾ ಮೇಲೆ ವಾಸವಾಗಿದ್ದಾರೆ. ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ನಿರ್ದೇಶನ ಬಂದ ಮೇಲೆ ಅವರನ್ನು ವಾಪಸ್ ಕಳಿಸಬೇಕಾ? ಅಥವಾ ಏನು ಮಾಡಬೇಕು ಎಂಬುವುದರ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.
ರೌಡಿಗಳ ನಿಯಂತ್ರಣಕ್ಕೆ ವಾಟ್ಸಅಪ್: ಸಾಮಾಜಿಕ ಜಾಲತಾಣಗಳಲ್ಲಿ ರೌಡಿ ಚಟುವಟಿಕೆಗಳ ಮೇಲೆ ನಿಗಾ ಘಟಕ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. 8296813792 ವಾಟ್ಸಅಪ್ ಸಂಖ್ಯೆಗೆ ಸಾರ್ವಜನಿಕರು ಆಕ್ಷೇಪಾರ್ಹ ಪೋಸ್ಟ್, ಫೋಟೋಗಳನ್ನು ಯಾರಾದರೂ ಪೋಸ್ಟ್ ಮಾಡಿದರೆ ಅದರ ಲಿಂಕ್ ಅಥವಾ ಸ್ಕ್ರೀನ್ ಶಾಟ್ ತೆಗೆದು ಕಳುಹಿಸಿದರೆ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಈಗಾಗಲೇ ಈ ಸಂಖ್ಯೆಗೆ ಬಂದ ದೂರು ಆಧರಿಸಿ 28 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.ಇದೇ ವೇಳೆ, ಶಾಸಕ ಅರವಿಂದ ಬೆಲ್ಲದ ವಸೂಲಿ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಶಾಸಕರು ಯಾವ ಪ್ರಕರಣ ಆಧಾರದ ಮೇಲೆ ಹಾಗೇ ಹೇಳಿದ್ದಾರೋ ಗೊತ್ತಿಲ್ಲ. ಅದರ ಕುರಿತಂತೆ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ತಿಳಿಸಿದರು.