ಮಂಗಳೂರು: ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಪುರಸ್ಕೃತ ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬರ ಕನಸಿನ ಕೂಸಾದ ಪಿಯು ಕಾಲೇಜು ಮಂಜೂರಾಗಿ ತರಗತಿ ನಡೆಯುತ್ತಿದ್ದರೂ ಇನ್ನೂ ಕಟ್ಟಡ ಭಾಗ್ಯ ದೊರೆತಿಲ್ಲ.

ಆತ್ಮಭೂಷಣ್‌

ಮಂಗಳೂರು: ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಪುರಸ್ಕೃತ ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬರ ಕನಸಿನ ಕೂಸಾದ ಪಿಯು ಕಾಲೇಜು ಮಂಜೂರಾಗಿ ತರಗತಿ ನಡೆಯುತ್ತಿದ್ದರೂ ಇನ್ನೂ ಕಟ್ಟಡ ಭಾಗ್ಯ ದೊರೆತಿಲ್ಲ. ಮಂಗಳೂರು ಹೊರವಲಯದ ಕುಗ್ರಾಮ ಹರೇಕಳದ ನ್ಯೂಪಡ್ಪುವಿನಲ್ಲಿ ಕಿತ್ತಳೆ ಮಾರಿ ಹಳ್ಳಿ ಮಕ್ಕಳಿಗೆ ಪ್ರಾಥಮಿಕ ಶಾಲೆ ತೆರೆದ ಹಾಜಬ್ಬರ ಪ್ರಯತ್ನದಿಂದ ಹೈಸ್ಕೂಲ್‌, 2024ರಲ್ಲಿ ಪಿಯು ಕಾಲೇಜು ಕೂಡ ಸ್ಥಾಪನೆಗೊಂಡಿತು. ಅದೇ ವರ್ಷದಿಂದ ಕಲೆ ಹಾಗೂ ವಾಣಿಜ್ಯ ವಿಭಾಗಗಳು ಆರಂಭಗೊಂಡಿತು. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಅದೇ ಹಳೆ ಶಾಲಾ ಕಟ್ಟಡದಲ್ಲೇ ದ್ವಿತೀಯ ಪಿಯು ತರಗತಿ ನಡೆಸಬೇಕಾಗಿದೆ. ದಶಕಗಳ ಹಿಂದೆ ಶಾಲೆಗಾಗಿ ಹೋರಾಟ ಆರಂಭಿಸಿದ ಹಾಜಬ್ಬ ಈಗ ಇಳಿ ವಯಸ್ಸಿನಲ್ಲೂ ಪಿಯು ಕಾಲೇಜು ಕಟ್ಟಡಕ್ಕಾಗಿ ಮತ್ತದೇ ಹೋರಾಟ ಮುಂದುವರಿಸಬೇಕಾಗಿದೆ. ಜಾಗ ಇದೆ, ಕಟ್ಟಡಕ್ಕೆ ಅನುದಾನ ಇಲ್ಲ:

ಹಾಜಬ್ಬರ ಪ್ರಯತ್ನದಿಂದ ಅಲ್ಲೇ ಗ್ರಾಮ ಚಾವಡಿ ಬಳಿ 1.30 ಎಕರೆ ಜಾಗವನ್ನು ಪಿಯು ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾದಿರಿಸಲಾಗಿದೆ. 2022ರಲ್ಲೇ ಜಾಗ ಕಾದಿರಿಸಿದ್ದರೂ ಅನುದಾನ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯು ತರಗತಿ ಎಲ್ಲಿ ನಡೆಸುವುದು ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಹಾಜಬ್ಬ ಅವರು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಭರವಸೆಯಾಗಿಯೇ ಉಳಿದಿದೆ.

ಕುಸಿದ ಕಂಪೌಂಡ್‌ ಮರು ನಿರ್ಮಾಣ

ಪಿಯು ಕಾಲೇಜು ಕಟ್ಟಡಕ್ಕೆ ಮೀಸಲಿರಿಸಿದ 1.30 ಎಕರೆ ಜಾಗದಲ್ಲಿ ಕಳೆದ ಬಾರಿ ನಿರ್ಮಿಸಿದ ಕಂಪೌಂಡ್‌, ಮಳೆಗೆ ಕುಸಿದು ಬಿದ್ದಿತ್ತು. ಬಳಿಕ ಮತ್ತೆ ಕಂಪೌಂಡ್‌ ನಿರ್ಮಿಸಲಾಗಿದೆ. ಕಂಪೌಂಡ್‌ ಒಳಗೆ ಕೊಳವೆ ಬಾವಿ ಕೊರೆಯಲಾಗಿದೆ. ಸಂಸದರು, ಶಾಸಕರು ಹಾಗೂ ವಿವಿಧ ಕಂಪನಿಗಳಿಂದ ನೆರವು ಪಡೆಯಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 5.30 ಕೋಟಿ ರು.ಗಳ ಅಂದಾಜುಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಪಿಯು ಶಿಕ್ಷಣ ಇಲಾಖೆಯಲ್ಲಿ ಕಡತ ಮಂಜೂರುಗೊಳ್ಳದೆ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಇಲ್ಲಿ ವರೆಗೆ ಯಾವುದೇ ಅನುದಾನ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸ್ಪೀಕರ್‌, ಸಂಸದರು, ಸಚಿವರನ್ನು ಸಂಪರ್ಕಿಸಿ ಹಾಜಬ್ಬ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಯು ಕಟ್ಟಡವನ್ನು ಉದ್ದೇಶಿತ ಕಾರ್ಯಕ್ಕೆ ಎರಡು ವರ್ಷದೊಳಗೆ ನಿರ್ಮಿಸುವಂತೆ ಆಗಿನ ಸಹಾಯಕ ಕಮಿಷನರ್‌ರು ಮಂಜೂರಾತಿ ಪತ್ರ(21-11-2022)ದಲ್ಲಿ ಉಲ್ಲೇಖಿಸಿದ್ದರು. ಜಾಗ ಮಂಜೂರಾದರೂ ಅನುದಾನ ಸಿಗದೆ ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನಿದು ಹಾಜಬ್ಬರ ಶಾಲೆ?

ಕಿತ್ತಳೆ ವ್ಯಾಪಾರಿಯಾದ ಹರೇಕಳ ಹಾಜಬ್ಬರು ಕಿತ್ತಳೆ ಮಾರಾಟದಿಂದ ಬಂದ ಹಣದಲ್ಲಿ ಹಳ್ಳಿ ಮಕ್ಕಳಿಗೆ ತನ್ನದೇ ಊರು ಹರೇಕಳ ನ್ಯೂಪಡ್ಪುವಿನಲ್ಲಿ ಶಾಲೆ ನಿರ್ಮಿಸಿದರು. ಇವರ ಈ ಸಾಹಸ ಕನ್ನಡಪ್ರಭ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಪಾತ್ರವಾಯಿತಲ್ಲದೆ, ಸಿಎನ್‌ಎನ್‌-ಐಬಿಎನ್‌ ಮೂಲಕ ವಿಶ್ವಮಟ್ಟದ ಪ್ರಚಾರಕ್ಕೆ ಕಾರಣವಾಯಿತು. ಇದರಿಂದಾಗಿ ಹಾಜಬ್ಬರಿಗೆ ಎಲ್ಲೆಡೆಯಿಂದ ಪುರಸ್ಕಾರಗಳು, ಸನ್ಮಾನಗಳ ಜೊತೆ ಹಣಕಾಸಿನ ನೆರವೂ ಹರಿದು ಬಂತು. ಎಲ್ಲ ಮೊತ್ತಗಳನ್ನು ಹಾಜಬ್ಬರು ಶಾಲೆಗೆ ಸುರಿದರು. ಇದರ ಪರಿಣಾಮ ಶಾಲಾ ಕಟ್ಟಡಗಳು ನಿರ್ಮಾಣಗೊಂಡು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹೈಸ್ಕೂಲ್‌, ಈಗ ಪಿಯು ವರೆಗೆ ತರಗತಿಗಳು ನಡೆಯುತ್ತಿವೆ. ಒಟ್ಟು ಸುಮಾರು 220 ಮಕ್ಕಳು ಕಲಿಯುತ್ತಿದ್ದಾರೆ.

ಪಿಯು ಕಾಲೇಜಿಗೆ ಕಾದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಿಸುವ ಬಗ್ಗೆ ಅನುದಾನ ನೀಡುವಂತೆ ಕೋರಿ ಸ್ಪೀಕರ್‌, ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಪಿಯು ಶಿಕ್ಷಣ ಇಲಾಖೆಯಲ್ಲಿ ಕಡತ ಬಾಕಿಯಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕಟ್ಟಡ ನಿರ್ಮಾಣಗೊಂಡರೆ ಮಕ್ಕಳಿಗೆ ಬಹಳ ಉಪಕಾರವಾಗುತ್ತದೆ.

-ಹರೇಕಳ ಹಾಜಬ್ಬ, ಹರೇಕಳ ಶಾಲಾ ಸ್ಥಾಪನೆಯ ರೂವಾರಿ

ಈ ಬಾರಿ ಲಭ್ಯವಾದ 2 ಕೋಟಿ ರು. ಅನುದಾನವನ್ನು ಹೆಚ್ಚಿನ ಮಕ್ಕಳಿರುವ ದೇರಳಕಟ್ಟೆ ಪಿಯು ಕಾಲೇಜು ಕಟ್ಟಡಕ್ಕೆ ಮೀಸಲಿರಿಸಲಾಗಿದೆ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಮಕ್ಕಳ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾದರೆ ಮುಂದಿನ ವರ್ಷವೇ ಪಿಯು ಕಾಲೇಜಿಗೆ ಸ್ವಂತ ಕಟ್ಟಡ ಭಾಗ್ಯ ಸಿಗಲಿದೆ.

-ಯು.ಟಿ.ಖಾದರ್‌, ಸ್ಥಳೀಯ ಶಾಸಕರು, ಸ್ಪೀಕರ್‌ ವಿಧಾನಸಭೆ ಕರ್ನಾಟಕ