ಜಿಲ್ಲಾಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ: ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ

| Published : May 25 2024, 12:45 AM IST

ಜಿಲ್ಲಾಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ: ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಮೆಡಿಕಲ್ ಕಾಲೇಜನ್ನು ಚಿತ್ರದುರ್ಗ ಹೊರವಲಯದಲ್ಲಿ ನಿರ್ಮಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿತು. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹೊಸದಾಗಿ ವಿಶೇಷ ಡಿಪಿಆರ್ ಮಾಡಿ ಮುಂದಿನ ನೂರು ವರುಷಗಳಿಗೆ ದೂರದೃಷ್ಠಿ ಅಳವಡಿಸಬೇಕೆಂದು ಆಗ್ರಹಿಸಿದೆ.

ಹಾಲಿ ಡಿಪಿಆರ್‌ನಂತೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ 20 ಕಟ್ಟಡಗಳನ್ನು ಕೆಡವಲಾಗಿದೆ. ಎನ್‌ಎಂಸಿ ಮಾರ್ಗಸೂಚಿ ಪ್ರಕಾರ ಸಭಾಂಗಣ, 24 ಗಂಟೆಗಳು ನಡೆಸುವ ಲೈಬ್ರರಿ ಮತ್ತು ಕ್ರೀಡಾಂಗಣದ ಸವಲತ್ತುಗಳು ಇರುವುದಿಲ್ಲ. ಹಾಲಿ ಎಎನ್ಎಂ ಶಾಲೆಯ 30 ವಿದ್ಯಾರ್ಥಿನಿಯರು, ಜಿಎನ್ಎಂ ಶಾಲೆಯ 90 ವಿದ್ಯಾರ್ಥಿಗಳು, ಬಿಎಸ್ಸಿ ನರ್ಸಿಂಗ್‍ನ 240 ವಿದ್ಯಾರ್ಥಿಗಳು ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ 420 ವಿದ್ಯಾರ್ಥಿ (ಅರೆ ವೈದ್ಯಕೀಯ)ಗಳು ಸೇರಿ ಒಟ್ಟಾರೆ ಪ್ರತಿ ವರ್ಷ 780 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ಕಟ್ಟಡಗಳು ನಿರ್ಮಾಣಗೊಂಡು ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳೇ ಉಪಯೋಗಿಸಲಿ. ಆದರೆ ಅಲ್ಲಿ ಕಾಲೇಜು ನಿರ್ಮಾಣ ಬೇಡ ಎಂದು ಒತ್ತಾಯಿಸಿದ್ದಾರೆ.

ಪ್ರತಿ ನಿತ್ಯ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಾಗಿ ಹೊರರೋಗಿಗಳು ಮತ್ತು ಒಳರೋಗಿಗಳು 500 ರಿಂದ 600 ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಗಳು ದೊರೆ ಯುತ್ತಿವೆ. ಇದರ ಜೊತೆಗೆ ರೋಗಿಗಳ ಜೊತೆಗೆ ಬರುವ ಸಹಾಯಕರು ಮತ್ತು ಸಂಬಂಧಿಗಳು 2000 ಸಂಖ್ಯೆ ಮೀರುತ್ತದೆ. ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಪಾರ್ಕಿಂಗ್ ಮಾಡಲು ಅಸಾಧ್ಯವಾಗುತ್ತಿದೆ. ತುರ್ತಾಗಿ ಬರುವ ರೋಗಿಗಳಿಗೂ ಸಹ ಚಿಕಿತ್ಸೆ ನೀಡಲು ಸ್ಥಳಾವಕಾಶ ಜೊತೆಗೆ ಸೂಕ್ತ ವಾತಾವರಣ ಇರುವುದಿಲ್ಲ. ಇದೇ ಜಾಗದಲ್ಲಿ ಕಾಲೇಜು ಆಸ್ಪತ್ರೆ ನಿರ್ಮಾಣಗೊಂಡಲ್ಲಿ ಹೊರರೋಗಿಗಳು, ಒಳ ರೊಗಿಗಳು, ಸಹಾಯಕರು, ಸಂಬಂಧಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕ ವರ್ಗದವರು, ಆಸ್ಪತ್ರೆಯ ಸಿಬ್ಬಂದಿ ಎಲ್ಲರೂ ಸೇರಿ ಒಟ್ಟು ಸಂಖ್ಯೆ ಸುಮಾರು 9000 ರಿಂದ 10 ಸಾವಿರ ಜನರು ಪ್ರತಿ ನಿತ್ಯ ಸೇರುತ್ತಾರೆ. ಇಡೀ ಆಸ್ಪತ್ರೆ ಆವರಣ ಜನರಿಂದ ತುಂಬಿ ತುಳುಕಾಡುತ್ತದೆ. ಮೆಡಿಕಲ್ ಕಾಲೇಜಿಗೆ ಪ್ರತಿ ವರುಷ 150 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ.

ಜಿಲ್ಲಾಡಳಿತ 2013-14ರಲ್ಲಿ ಹಿರೇಗುಂಟನುರು ಹೋಬಳಿ, ಚಿಕ್ಕಪುರ ಗ್ರಾಮದ ಸರ್ವೇ. ನಂ. 96ರಲ್ಲಿ 15 ಎಕರೆ 23 ಗುಂಟೆ ಮತ್ತು ಸರ್ವೇ ನಂ 101ರಲ್ಲಿ 14 ಎಕರೆ 17 ಗುಂಟೆ ಒಟ್ಟಾಗಿ 30 ಎಕರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಮೀಸಲು ಇಟ್ಟಿದೆ. ಪಹಣಿ ಕೂಡಾ ಮೆಡಿಕಲ್ ಕಾಲೇಜು ಹೆಸರಲ್ಲಿದೆ. ಮುಂದಿನ ನೂರು ವರುಷಗಳ ದೂರದೃಷ್ಟಿಯಲ್ಲಿ ಚಿಂತನೆ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಾಲೇಜು ಕಟ್ಟಡ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯಗಳು, ಸಭಾಂಗಣ, ಕ್ರೀಡಾಂಗಣ ಮತ್ತು ಗ್ರಂಥಾಲಯ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿದೆ. ಇದರ ಜೊತೆಗೆ ಬೋಧಕ ವರ್ಗದವರಿಗೂ ಸಹ ವಸತಿ ಸೌಲಭ್ಯವನ್ನು ಸಹ ನಿರ್ಮಾಣ ಮಾಡಿಕೊಡಬಹುದು. ಇದಕ್ಕೆ ಇದೇ ಸೂಕ್ತವಾದ ಜಾಗವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡ 65ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು ಇದ್ದಾರೆ. ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ಮಧ್ಯಭಾಗ ದಲ್ಲಿದ್ದು, 2 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೂಪರ್ ಸ್ಪೆಷಾಲಿಟಿಗಳಾದ ಹೃದಯ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ರೋಗಗಳು ಮತ್ತು ಇತರೆ ರೋಗಗಳಿಗೂ ಸಹ ಆಸ್ಪತ್ರೆ ಸೌಲಭ್ಯಗಳನ್ನು ನೀಡಿದರೆ ಸಾರ್ವಜನಿಕರಿಗೆ ಅತ್ಯಂತ ಉಪಯೋಗವಾಗುತ್ತದೆ. ಖನಿಜ ಪುನಶ್ಚೇತನ ನಿಧಿಯಲ್ಲಿ 2 ಸಾವಿರ ಕೋಟಿ ರು ಹಣ ಲಭ್ಯವಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಈ ಅನುದಾನ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಶಾಖೆ ಅಧ್ಯಕ್ಷ ಡಾ.ಪಿ.ಟಿ. ವಿಜಯಕುಮಾರ್‌, ಕಾರ್ಯದರ್ಶಿ ಡಾ.ಕೆ.ಎಂ ಬಸವರಾಜ್ ಉಪಸ್ಥಿತರಿದ್ದರು.