ಆಸೆ ಇರಲಿ, ದುರಾಸೆ ಸಲ್ಲದು: ಲೋಕಾಯುಕ್ತ ಡಿವೈಎಸ್ಪಿ ಕಿವಿಮಾತು

| Published : May 18 2024, 12:35 AM IST

ಸಾರಾಂಶ

ಮಡಿಕೇರಿಯ ತಹಸೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್, ಪ್ರತಿಯೊಬ್ಬರಲ್ಲಿಯೂ ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿಗಳ ಮಕ್ಕಳು ಸಮಾಜದಲ್ಲಿ ಒಳ್ಳೆಯವರಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಪ್ರತಿಯೊಬ್ಬರಲ್ಲಿಯೂ ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿಗಳ ಮಕ್ಕಳು ಸಮಾಜದಲ್ಲಿ ಒಳ್ಳೆಯವರಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಇದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಹೇಳಿದ್ದಾರೆ.

ಮಡಿಕೇರಿಯ ತಹಸೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ಲೋಕಾಯುಕ್ತ ಡಿವೈಎಸ್‌ಪಿ ಮುಂದೆ ಮಂಡಿಸಿದರು.

ಜಾತಿ, ಆದಾಯ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡಬೇಕಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಸಕಾಲದಲ್ಲಿ ಇಷ್ಟು ದಿನದೊಳಗೆ ಪ್ರಮಾಣ ಪತ್ರ ನೀಡಬೇಕು ಎಂಬ ಆದೇಶ ಇದ್ದರೂ ಸಹ, ಸತಾಯಿಸುತ್ತಿದ್ದಾರೆ. ಜಾತಿ, ಆದಾಯ ಮತ್ತಿತರ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲಾತಿಯ ಮಾಹಿತಿ ಫಲಕ ಅಳವಡಿಸಿದಲ್ಲಿ ಒದಗಿಸಲಾಗುವುದು, ಆದರೆ ಸತಾಯಿಸುವುದು ಏಕೆ ಎಂದು ಸಾರ್ವಜನಿಕರೊಬ್ಬರು ಅಲವತ್ತುಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಪವನ್ ಕುಮಾರ್, ಯಾರು ಸತಾಯಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಲೋಕಾಯುಕ್ತ ನಿಯಮನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೊಂದು ಗಂಭೀರ ವಿಚಾರವಾಗಿದ್ದು, ಯಾರನ್ನು ಸಹ ಸತಾಯಿಸದೆ ಗೌರವದಿಂದ ಕಾಣಬೇಕು. ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ, ಹಿಂಬರಹವನ್ನಾದರೂ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಾಗದ ಖಾತೆಗೆ ಸಂಬಂಧಿಸಿದಂತೆ ಸುಮಾರು ನಾಲ್ಕು ದಶಕಗಳಿಂದ ಓಡಾಡಿದರೂ ಸಹ ಖಾತೆ ಬದಲಾವಣೆ ಆಗಿಲ್ಲ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

ಖಾತೆ ಬದಲಾವಣೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ನಾಲ್ಕು ದಶಕವಾದರೂ ಸಹ ಖಾತೆ ಸರಿಪಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್‌ಪಿ ಅವರು ಕೆಲವು ಇಲಾಖೆಗಳಲ್ಲಿ ಇದ್ದಕ್ಕಿದ್ದ ಹಾಗೆ ಕಡತಗಳು ನಾಪತ್ತೆಯಾಗುತ್ತವೆ ಹೇಗೆ ಎಂದು ಪ್ರಶ್ನಿಸಿದರು.

ಪಡಿತರ ಚೀಟಿ ಕೊಡಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿ ಅವರಲ್ಲಿ ಸಾರ್ವಜನಿಕರೊಬ್ಬರು ಮನವಿ ಮಾಡಿದರು. ವಿವಿಧ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಾರ್ವಜನಿಕರಿಗೆ ನೇರವಾಗಿ ಕೆಲಸಗಳು ಆಗುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್‌ಪಿ, ಸಾರ್ವಜನಿಕರನ್ನು ಗೌರವಯುತವಾಗಿ ಮಾತನಾಡಿಸಿದಲ್ಲಿ ಅರ್ಧ ಕೆಲಸಗಳು ಬಗೆ ಹರಿಯುತ್ತವೆ. ನಂತರ ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಬಹುದು ಎಂದರು.

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೂರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ, ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದರು.

’ ತಹಶೀಲ್ದಾರರಾದ ರಮೇಶ್ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.