ಸಾರಾಂಶ
ಕನ್ನಡಪ್ರಭವಾರ್ತೆ ನಾಯಕನಹಟ್ಟಿ
ಬರಗಾಲದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಮನವಿಯಂತೆ ಈ ಬಾರಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗುವ, ಅಂಗಡಿ ಹಾಗೂ ವಾಣಿಜ್ಯ ವ್ಯಾಪಾರ ಮಳಿಗೆಗಳ ಜಕಾತಿ ವಸೂಲಿ ಮಾಡುವುದಿಲ್ಲ. ಅಧಿಕಾರಿಗಳು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವದ ಸಿದ್ಧತೆ ಕುರಿತು ನಾಯಕನಹಟ್ಟಿ ಒಳಮಠ ಸಮುದಾಯಭವನದ ಆವರಣದಲ್ಲಿ ಏರ್ಪಡಿಸಲಾದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆಯು ಮಾ.19 ರಿಂದ ಏ.1 ರವರೆಗೆ ನಡೆಯಲಿದ್ದು, ಮಾ. 26 ಮಂಗಳವಾರ ದೊಡ್ಡ ರಥೋತ್ಸವ ಜರುಗಲಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ನಾಯಕನಹಟ್ಟಿ ಜಾತ್ರೆಗೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಕಲ್ಲಿಸಬೇಕು. ನಾಯಕನಹಟ್ಟಿ ಯಲ್ಲಿ ಪ್ರಸ್ತುತ ಇರುವ ಕೊಳವೆ ಬಾವಿಗಳ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಹೊಸದಾಗಿ ಕೊಳವೆ ಬಾವಿ ಕೊರೆದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.ನಾಯಕಹಟ್ಟಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದರೆ ಸಂಬಂದಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಂದು ಸಚಿವ ಡಿ.ಸುಧಾಕರ್ ಹೇಳಿದರು.ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಉತ್ತಮವಾಗಿರಬೇಕು. ಬೇಸಿಗೆ ಸಂದರ್ಭವಾದ ಕಾರಣ ಆರೋಗ್ಯಕ್ಕೆ ಬಹಳ ವಿಶೇಷ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಬರಗಾಲ ಹಾಗೂ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಮೀಪ ಇರುವುದರಿಂದ ಬಹು ಬೇಗನೇ ಜಾತ್ರೆ ವ್ಯವಸ್ಥೆಯ ಸಿದ್ಧತೆ ಗಳನ್ನು ಅಧಿಕಾರಿಗಳು ಮಾಡಬೇಕು. ಕುಡಿಯುವ ನೀರಿಗೆ ಪಟ್ಟಣ ಪಂಚಾಯತಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಸ್ವಚ್ಛತಾ ಕಾರ್ಯಕ್ಕಾಗಿ ಬೇರೆ ನಗರ ಸ್ಥಳೀಯ ಸಂಸ್ಥೆ ಗಳಿಂದ ಅಗತ್ಯವಿರುವಷ್ಟು, ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸಂಚಾರಿ ಶೌಚಾಲಯಗಳ ಬದಲಿಗೆ ಖಾಲಿ ಸ್ಥಳಗಳಲ್ಲಿ ಕನಿಷ್ಠ 50 ರಂತೆ ತಾತ್ಕಾಲಿಕ ಶೌಚಾಲಯ ಗಳನ್ನು ನಿರ್ಮಿಸಬೇಕು. ರಸ್ತೆ ಸಾರಿಗೆ ಅಧಿಕಾರಿಗಳು ಹೊರ ಜಿಲ್ಲೆಗಳ ಡಿಪೋಗಳಿಂದ ಪ್ರತಿ ಬಾರಿ ನಿಯೋಜಿಸುತ್ತಿದ್ದ ಬಸ್ ಸಂಖ್ಯೆಗಳಿಗಿಂತ ಶೇ.20 ಹೆಚ್ಚಿನ ಬಸ್‍ಗಳನ್ನು ನಿಯೋಜನೆ ಮಾಡಬೇಕು ರಥೋತ್ಸವ ದಿನದಂದು ಜನದಟ್ಟಣೆ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಎದುರಿಸದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಪ್ರಾಣಿಬಲಿ ನಿಷೇಧವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮುಖಂಡರಾದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಎಂವೈಟಿ ಸ್ವಾಮಿ, ಬಾಲರಾಜು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))