ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ವಾತಾವರಣ ಗಮನಿಸಿದರೆ ಬಾಗಲಕೋಟೆಯಲ್ಲಿ ಬಿಜೆಪಿ ಅರಳುವುದು ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಶಿರಾ, ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ತಂತ್ರ, ಕುತಂತ್ರ ಮಾಡಿದ್ದು ನೋಡಿದ್ದೇನೆ. ಸಿಎಂ ಸೇರಿ ಸಚಿವ ಸಂಪುಟದ ಸದಸ್ಯರೆಲ್ಲ ಝಂಡಾ ಊರ್ತಾರೆ, ಸೂಟಕೇಸ್ ಅಲ್ಲ ಗೋಣಿಚೀಲದಲ್ಲಿ ಹಣ ತರ್ತಾರೆ. ಬಡ ವಿರೋಧಿ, ದಲಿತ ವಿರೋಧಿ, ಯುವಕರ ವಿರೋಧಿ ಸರ್ಕಾರವಿದು. ನಾಲಾಯಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷ ಏನೇ ಹರಸಾಹಸ ಮಾಡಿದರೂ ಬಾಗಲಕೋಟೆ, ದಾವಣಗೆರೆಯಲ್ಲಿ ನಮ್ಮ ಗೆಲುವು ತಡೆಯಲು ಸಾಧ್ಯವಿಲ್ಲ. ಯಾವುದೇ ಕ್ಷಣವನ್ನು ಸಹ ನಮ್ಮ ಕಾರ್ಯಕರ್ತರು ಮೈಮರೆಯಬಾರದು. ಮತ ಹಾಕುವ ಕೊನೆಯ ದಿನದವರೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಾನು ನಿನ್ನೆ ಬೆಂಗಳೂರಿನಿಂದ ಬಂದಿದ್ದೇನೆ. ಯಡಿಯೂರಪ್ಪನವರ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಯಡಿಯೂರಪ್ಪನವರ ಇಟ್ಟ ಗುರಿ, ದಿಟ್ಟ ಹೆಜ್ಜೆ ತಪ್ಪಿಲ್ಲ, ಕ್ಷೇತ್ರದಲ್ಲಿ ಇದ್ದ ಸಣ್ಣಪುಟ್ಟ ಗೊಂದಲ ಬಗೆಹರಿಸುತ್ತೇವೆ. ಎಲ್ಲ ನಾಯಕರು ಒಗ್ಗಟ್ಟಾಗಿ ಚರಂತಿಮಠರ ಗೆಲುವಿಗೆ ಹೋರಾಟ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.ಶುಭ ಮುಹೂರ್ತದಲ್ಲಿ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಎಲ್ಲರೂ ಒಟ್ಟಾಗಿ ಬಾಗಲಕೋಟೆ, ದಾವಣಗೆರೆ ಕ್ಷೇತ್ರ ಗೆಲ್ಲುತ್ತೇವೆ. ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ದುಷ್ಟ ಸರ್ಕಾರದ ವಿರುದ್ಧ ಗೆಲ್ಲಬೇಕೆಂಬ ಸಂಕಲ್ಪದೊಂದಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಗೆಲುವು ಶತಃಸಿದ್ಧ, ಚರಂತಿಮಠ ಬಹಳ ದೊಡ್ಡ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ.- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ