ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರೈತರ ಹೋರಾಟ ನಿರಂತರ-ರಾಕೇಶ ಟಿಕಾಯತ್

| Published : May 27 2024, 01:08 AM IST

ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರೈತರ ಹೋರಾಟ ನಿರಂತರ-ರಾಕೇಶ ಟಿಕಾಯತ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಚುನಾವಣೆ ಮುಗಿಯುತ್ತಾ ಬಂದಿದ್ದು, ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ರೈತರ ಬೇಡಿಕೆಗಳು ಹಗುರವಾಗಿ ಪರಿಗಣಿಸುವ ಸರ್ಕಾರದ ವಿರುದ್ಧ ನಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ನಿರಂತರ ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್‌ ಟಿಕಾಯತ್ ಎಚ್ಚರಿಸಿದರು.

ಬ್ಯಾಡಗಿ: ದೇಶದ ಚುನಾವಣೆ ಮುಗಿಯುತ್ತಾ ಬಂದಿದ್ದು, ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ರೈತರ ಬೇಡಿಕೆಗಳು ಹಗುರವಾಗಿ ಪರಿಗಣಿಸುವ ಸರ್ಕಾರದ ವಿರುದ್ಧ ನಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ನಿರಂತರ ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್‌ ಟಿಕಾಯತ್ ಎಚ್ಚರಿಸಿದರು.

ತಾಲೂಕಿನ ಕಾಗಿನೆಲೆ ಕನಕದಾಸ ಕಲಾಭವನದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಜೀವನ ಚರಿತ್ರೆ ಆಧಾರಿತ ಡೈರೆಕ್ಟ್ ಆ್ಯಕ್ಷನ್ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಗ್ರಿಕಲ್ಚರಲ್ ಲಾಸ್ ಬಗ್ಗೆ ಚರ್ಚೆಯಾಗಲಿ: ಕೃಷಿ ಪ್ರಧಾನ ದೇಶದಲ್ಲಿ ಕೃಷಿ ಮೇಲಿನ ನಷ್ಟವನ್ನು ಯಾವುದೇ ಸರ್ಕಾರಗಳು ಅಧ್ಯಯನ ನಡೆಸಿಲ್ಲ, ಹೀಗಾಗಿಯೇ ಶೇ. 70ರಷ್ಟಿದ್ದ ಕೃಷಿಕರು ಇದರಿಂದ ವಿಮುಖವಾಗಿ ಇದೀಗ ಶೇ. 47 ಬಂದು ನಿಂತಿದೆ. ಇಂತಹ ಪ್ರಮುಖ ಸಂಗತಿಗಳು ದೇಶದಲ್ಲಿ ಚರ್ಚೆಯಾಗದೇ ಜಾತಿ ಧರ್ಮಗಳ ನಡುವೆ ಚುನಾವಣೆಗಳು ನಡೆಯುತ್ತಿವೆ. ಇದನ್ನೂ ನೋಡಿಯೂ ರೈತರು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದರು.

ಕೃಷಿಯೂ ಒಂದು ಧರ್ಮ: ವಿಶ್ವಕ್ಕೆ ಅನ್ನ ಹಾಕುವ ರೈತರು ಕೂಡ ದೇವರ ಸಮಾನ ಎಂಬುದನ್ನು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಇಂತಹ ಬಿರುದನ್ನು ನಾವ್ಯಾರೂ ಪಡೆದುಕೊಂಡಿದ್ದಲ್ಲ ಅಥವಾ ಹೇಳಿದ್ದಲ್ಲ, ಕೃಷಿಕರ ಬದುಕನ್ನು ಅರ್ಥೈಸಿಕೊಂಡ ಶರಣರು, ಸ್ವಾಮೀಜಿಗಳು, ಸಾಹಿತಿಗಳು ಅಧ್ಯಯನ ಮಾಡಿದ ಚಿಂತಕರು ಸಾರಿ ಹೇಳಿದ್ದಾರೆ. ಹೀಗಾಗಿ ಕೃಷಿಯೂ ಒಂದು ಧರ್ಮವಾಗಿದೆ ಎಂದರು.

ಸರ್ಕಾರಗಳನ್ನು ನಡುಗಿಸುವ ತಾಕತ್ತು ರೈತ ಸಂಘಕ್ಕಿದ್ದು, ನಮ್ಮ ಹಕ್ಕುಗಳನ್ನು ಪಡೆಯಲು ನಾವು ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಭವಿಷ್ಯದಲ್ಲಿ ರೈತರು ತೀವ್ರ ಸಂಕಷ್ಟ ಎದುರಿಸಬೇಕಿದ್ದು ರೈತರ ಕಣ್ಮಣಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಧ್ಯೇಯಗಳು ಸತ್ಯವಾಗಲಿವೆ ಎಂದು ತಿಳಿಸಿದರು.ವಿಶ್ವಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಚಾಲನೆ ನೀಡಿದ್ದು, ಬಳಿಕ ಹಕ್ಕುಗಳನ್ನು ಪಡೆಯಲೇಬೇಕೆಂದು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಭವಿಷ್ಯದಲ್ಲಿ ರೈತರು ದೊಡ್ಡ ಸವಾಲುಗಳನ್ನು ಎದುರಿಸಬೇಕಿದ್ದು, ಆ ನಿಟ್ಟಿನಲ್ಲಿ ಗಟ್ಟಿ ಧ್ವನಿ ಮಾಡದಿದ್ದಲ್ಲಿ ನ್ಯಾಯ ಸಿಗಲ್ಲವೆಂದು ಖಚಿತ ನಿಲುವು ಹೊಂದಿದ್ದರು. ಅವರ ಆಳವಾದ ರೈತಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ರೈತನಿಗೆ ಬೆಲೆ ಕುಸಿತದಿಂದ ಧೃತಿಗೆಡುವ ಸಂದರ್ಭ ಬಂದಾಗ ಸರ್ಕಾರಗಳ ಪಾತ್ರವೇನು? ಎನ್ನುವುದು ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಬೀದಿ ಹೋರಾಟ ಆರಂಭಿಸಿದ ರೈತನಾಯಕ ನಂಜುಂಡಸ್ವಾಮಿ, ಭವಿಷ್ಯದಲ್ಲಿ ವಿಷಕಾರಿ ಬೀಜಗಳ ಪೂರೈಸಿದ ವಿದೇಶಿ ಬೀಜ ಕಂಪನಿಗಳು ರೈತರನ್ನು ಸದ್ದಿಲ್ಲದೆ ಕೊಲ್ಲಲಿವೆ. ಇದಕ್ಕೆ ಪರಿಹಾರ ಹುಡುಕಲು ಈಗಲೇ ರೈತರಿಗೆ ಜಾಗೃತಿ ಮುಟ್ಟಿಸೋಣವೆಂದು ಪಣ ತೊಟ್ಟಿದ್ದರು. ಎಂದಿಗೂ ರಾಜೀಸೂತ್ರಗಳಿಗೆ ಒಪ್ಪದ ಅವರು ಧ್ಯೇಯಗಳಿಗೆ ಮನ್ನಣೆ ನೀಡಿದ ರೈತಚೇತನ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸರ್ಕಾರಗಳು ಈಗ ಸಣ್ಣಪುಟ್ಟ ಹೋರಾಟಗಳಿಗೆ ಮಣಿಯದೆ, ರೈತರ ಜೀವ ಹಿಂಡುತ್ತಿವೆ ಎಂದರು.

ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ ಮಾತನಾಡಿದರು.

ಈ ವೇಳೆ ಸಾಹಿತಿ ಡಾ. ನಟರಾಜ ಹುಳಿಯಾರ್, ನಿರ್ದೇಶಕ ನರೇಂದ್ರ ಬಾಬು, ಖ್ಯಾತ ನಟ ಸಂಪತ್ ಮೈತ್ರೇಯ, ಚುಕ್ಕಿ ನಂಜುಂಡಸ್ವಾಮಿ, ರುದ್ರಗೌಡ ಕಾಡನಗೌಡ್ರ, ಜಾನ್ ಪುನೀತ್, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಪ್ಪನವರ, ಶಂಕ್ರಣ್ಣ ಮರಗಾಲ, ಚಿಕ್ಕಪ್ಪ ಛತ್ರದ, ಸಂಜೀವ ಬಿಷ್ಟಣ್ಣನವರ ಇದ್ದರು.