ಧಾರವಾಡ:
ಕಡಿಮೆ ಫಲಿತಾಂಶದ ಶಾಲೆಗಳಿಗೆ ಪಾಲಕರು ಮಕ್ಕಳನ್ನು ದಾಖಲು ಮಾಡುತ್ತಿಲ್ಲ. ಅಂತಹ ಶಾಲೆಗಳನ್ನು ನಡೆಸುವುದರಿಂದ ಪ್ರಯೋಜನವೂ ಇಲ್ಲ. ಆದ್ದರಿಂದ ಸಮೀಪದ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳ ದಾಖಲಾತಿ ಮಾಡಲು ಪಾಲಕರ ಮನವೊಲಿಸಲು ಶಿಕ್ಷಕರು ಪ್ರಯತ್ನಿಸಲು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿಸಿದ ಅವರು, ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸುವ ಮತ್ತು ಸಾಮುದಾಯಿಕ ಪಾಲ್ಗೊಳುವಿಕೆಯಲ್ಲಿ ಕ್ರಿಯಾಶೀಲತೆ ಅಳವಡಿಸಿಕೊಳ್ಳುವ ಕ್ರಮವಾಗಬೇಕು. ನಿರಂತರವಾಗಿ ಪಾಲಕರ ಸಭೆ ಜರುಗಿಸಬೇಕು. ಕಡಿಮೆ ಫಲಿತಾಂಶ ಮಾಡುವ ಖಾಸಗಿ ಹಾಗೂ ಇತರ ಶಾಲೆಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಯಾವುದೇ ಸರ್ಕಾರಿ ಶಾಲೆಗಳ ವಿಲೀನದ ಪ್ರಕ್ರೀಯೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸತತ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 0ದಿಂದ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಹಾಗೂ ಶೇ. 25ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಹೊಂದಿದ ಖಾಸಗಿ ಶಾಲೆಗಳ ಫಲಿತಾಂಶ ಸಹ ಸಭೆಯಲ್ಲಿ ಅವರು ವಿಶ್ಲೇಷಿಸಿದರು. ತರಗತಿಗಳಲ್ಲಿ ಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಚಟುವಟಿಕೆಗಳನ್ನು ರೂಢಿಸುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕ್ರಿಯಾಯೋಜನೆ ಮೂಲಕ ಕಲಿಕಾ ಪ್ರಗತಿ ಸಾಧಿಸುವಂತೆ ಮಾಡುವುದು ಪ್ರಸಕ್ತ ವರ್ಷದ ಮುಖ್ಯ ಅಂಶವಾಗಿರಲಿ ಎಂಬ ಸಲಹೆ ನೀಡಿದರು.ಹುಬ್ಬಳ್ಳಿ ಶಹರ, ಧಾರವಾಡ ಶಹರ, ಕುಂದಗೋಳ ಹಾಗೂ ನವಲಗುಂದ ತಾಲೂಕುಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾಗಿದ್ದು, ಸದರಿ ತಾಲೂಕಗಳ ಫಲಿತಾಂಶ ಹಾಗೂ ಶೇ. 60 ಕ್ಕಿಂತ ಕಡಿಮೆ ಫಲಿತಾಂಶ ಹೊಂದಿದ ಎಲ್ಲ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ ಸ್ಥಿತಿಯ ವರದಿಯನ್ನು ಸಲ್ಲಿಸಲು ಅವರು ನಿರ್ದೇಶಿಸಿದರು.
ಮಕ್ಕಳನ್ನು ಮೊಬೈಲ್ ಗಿಳಿನಿಂದ ಹೊರ ತರಲು ಹಾಗೂ ಪೋಷಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಪೋಷಕರಿಗೆ ತಿಳಿಸಿ, ನಿಯಮಿತವಾಗಿ ಪಾಲಕರ ಸಭೆ ಜರುಗಿಸಬೇಕು. ಪ್ರತಿ ಫಲಿತಾಂಶದಲ್ಲಿ ಬಾಲಕರ ಫಲಿತಾಂಶ ಬಾಲಕಿಯರ ಫಲಿತಾಂಶಕ್ಕಿಂತ ಕಡಿಮೆ ಇದೆ. ಇದರಿಂದಾಗಿ ಬಾಲಕರು ಶಾಲೆಗೆ ನಿಯಮಿತವಾಗಿ ಹಾಜರಾಗುವಂತೆ ಹಾಗೂ ಅಧ್ಯಯನದಲ್ಲಿ ತೊಡಗುವಂತೆ ಮಾಡಲು ಬಾಲಕರಿಗಾಗಿಯೇ ವಿಶೇಷ ಚಟುವಟಿಕೆಗಳನ್ನು ನಿರ್ವಹಿಸಲು ಭುವನೇಶ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಯಟ್ ಪ್ರಾಂಶುಪಾಲ ಬಸವರಾಜ ನಾಲ್ವತವಾಡ್ ಹಾಗೂ ಬಿಇಒ ರಾಮಕೃಷ್ಣ ಸದಲಗಿ ಇದ್ದರು.
ಮಾಹಿತಿ ನೀಡಿ...ಜೂನ್ 1ರಿಂದ ಶಾಲೆಗಳು ಮರು ಆರಂಭವಾಗುತ್ತಿದ್ದು, ಶಾಲೆ ಕಟ್ಟಡ ಸುಸ್ಥಿತಿಯಲ್ಲಿರುವಂತೆ ಮುರ್ತುವಜಿ ವಹಿಸುವುದು ಹಾಗೂ ಕಟ್ಟಡವು ಮಳೆ ಹಾನಿಗೆ ಒಳಪಡದಂತೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ಒದಗಿಸಲು ಸಿವಿಲ್ ಕಾಮಗಾರಿಗಳ ಅಗತ್ಯವಿದ್ದಲ್ಲಿ ಮಾಹಿತಿ ನೀಡಬೇಕು. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಕುರಿತು ಜಿಲ್ಲಾ ಹಾಗೂ ತಾಲೂಕು ಮುಖ್ಯಸ್ಥರಿಗೆ ಜಿಪಂ ಸಿಇಒ ತಿಳಿಸಿದರು.