ಸಾರಾಂಶ
ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಯಾವುದೇ ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇಲ್ಲವೇ ಇಲ್ಲ.
ಕೊಟ್ಟೂರು: ಜೆಡಿಎಸ್‌ನಿಂದ 12 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಪದೇಪದೇ ಹೇಳುವ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಕೇವಲ ಅವರ ಭ್ರಮೆ ಎಂದು ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಮಾಹಿತಿ ಇದ್ದರೆ ಜೆಡಿಎಸ್ ಶಾಸಕರ ಹೆಸರನ್ನು ಪ್ರಕಟಿಸಲಿ. ಜೆಡಿಎಸ್ ಶಾಸಕರು ಸರ್ಕಾರದಿಂದ ಆಯಾ ಕ್ಷೇತ್ರಗಳ ಕೆಲಸ- ಕಾರ್ಯಗಳಿಗೆ ಸಚಿವರ ಬಳಿ ತೆರಳಿ ಮಾತನಾಡಿದ ತಕ್ಷಣ ಅವರು ತಮಗೆ ತಾವೇ ಈ ರೀತಿ ಆಸೆ ಹುಟ್ಟಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಯಾವುದೇ ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇಲ್ಲವೇ ಇಲ್ಲ. ನಮ್ಮ ನಾಯಕ ಕುಮಾರಸ್ವಾಮಿ ಸದಾ ನಮ್ಮ ಬೇಕು- ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಂದ ಯಾವುದೇ ಕಾರಣಕ್ಕೂ ದೂರವಾಗುವ ಮಾತೇ ಇಲ್ಲ. ನಾನಂತೂ ಕೊನೆವರೆಗೂ ಅವರೊಂದಿಗೆ ಇರುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತ. ಆದರೆ ಈ ಅನುದಾನ ಯಾವುದಕ್ಕೂ ಉಪಯೋಗಕ್ಕೆ ಬಾರದಂತಿದೆ ಎಂದರು.ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಅಪಸ್ವರಕ್ಕೆ ಆಸ್ಪದ ಇಲ್ಲದಂತೆ ವರಿಷ್ಠರು ಸೂಕ್ತರನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಮುಖಂಡರಾದ ನೀಲಕಂಠಪ್ಪ, ಬೂದಿ ಶಿವಕುಮಾರ್, ವೈ.ಮಲ್ಲಿಕಾರ್ಜನ, ಎಚ್.ಗುರುಬಸವರಾಜ, ಮರಬದ ಕೊಟ್ರೇಶ್, ಬೋರ್‌ವೆಲ್ ತಿಪ್ಪೇಸ್ವಾಮಿ ಇದ್ದರು.