ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಸರ್ಕಾರಕ್ಕೆ, ಚುನಾವಣೆಗೆ ರಾಜ್ಯದ ಮದ್ಯ ವ್ಯಾಪಾರಿಗಳು ಹಣ ನೀಡಿಲ್ಲ, ಇದು ಸುಳ್ಳು ಆರೋಪ ಎಂದು ರಾಜ್ಯ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರ ಚುನಾವಣೆಗೆ ಮದ್ಯ ವ್ಯಾಪಾರಿಗಳಿಂದ 800 ಕೋಟಿ ರು. ಹಣ ಪಡೆದಿದೆ ಎಂದು ಇತ್ತೀಚೆಗೆ ಆರೋಪಿಸಿದ್ದು, ಇದನ್ನು ಗೋವಿಂದರಾಜ ಹೆಗ್ಡೆ ಅಲ್ಲಗಳೆದಿದ್ದಾರೆ.ಸಂಘಟನೆ ಕಳೆದ ತಿಂಗಳ 25ರಂದು ಬೆಂಗಳೂರಿನಲ್ಲಿ ರಾಜ್ಯದ 3000ಕ್ಕೂ ಹೆಚ್ಚು ಸನ್ನದುದಾರರು ಸೇರಿ ಅಬಕಾರಿ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಿದ್ದು ನಿಜ. ಇಲಾಖೆಯ ಅಧಿಕಾರಿಗಳು ತಾವು ಹಣ ಕೊಟ್ಟು ವರ್ಗಾವಣೆ, ಭಡ್ತಿ ಪಡೆದುಕೊಂಡಿದ್ದಾರೆ. ಆದ್ದರಿಂದ ಮದ್ಯ ವ್ಯಾಪಾರಿಗಳು ಹೆಚ್ಚು ಲಂಚ ಕೊಡಬೇಕು ಎಂದು ಕಿರುಕುಳ ನೀಡುತಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಯಾರೇ ಸನ್ನದುದಾರರು ಲಂಚ ನೀಡಿಲ್ಲ. ನಮ್ಮ ಪ್ರತಿಭಟನೆಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.ನಾವು 700 - 800 ಕೋಟಿ ರು. ಸರ್ಕಾರಕ್ಕೆ ನೀಡಿದ್ದೇವೆ ಎಂಬ ಸುಳ್ಳು ಮಾಹಿತಿಯನ್ನು ಪ್ರಧಾನಿಗೆ ಯಾರೂ ಯಾಕೆ ಕೊಟ್ಟರೋ ಗೊತ್ತಿಲ್ಲ. ರಾಜ್ಯಪಾಲರಿಗೂ ನಾವು ದೂರು ನೀಡಿಲ್ಲ. ಒಬ್ಬ ಆರ್‌ಟಿಐ ಕಾರ್ಯಕರ್ತ ದೂರು ನೀಡಿದ್ದಾರೆ, ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದವರು ಹೇಳಿದರು.
ಅಧಿಕಾರಿಗಳು ಲಂಚ ಪಡೆಯುತ್ತಿರುವುದು ಈ ಸರ್ಕಾರದಲ್ಲಿಯೇ ಮೊದಲಲ್ಲ, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ, ಅಬಕಾರಿ ಸಚಿವರ ಕಾಲದಲ್ಲಿಯೂ ಪರಿಸ್ಥಿತಿ ಇದೆ ಇತ್ತು. ಆಗಲೂ ನಾವು ಬೇಡಿಕೆ, ಮನವಿ, ಪ್ರತಿಭಟನೆ ನಡೆಸಿದ್ದೆವು. ಆದರೆ ಈ ಬಾರಿ ಪರಿಸ್ಥಿತಿ ಇನ್ನಷ್ಟು ಉಲ್ಭಣಗೊಂಡಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.ಉದ್ಯಮಕ್ಕೆ ಬೆಂಕಿ ಬಿದ್ದಿದೆ, ಸರ್ಕಾರ ಈ ಬೆಂಕಿಯನ್ನು ಆರಿಸುವುದು ಬಿಟ್ಟು, ಆ ಬೆಂಕಿಯಲ್ಲಿಯೇ ಬೀಡಿ ಹಚ್ಚಿಕೊಂಡು ಸೇದುತ್ತೇವೆ ಎನ್ನುವುದು ಸರಿಯಲ್ಲ, ನಮ್ಮನ್ನು ರಾಜಕೀಯಕ್ಕಾಗಿ ಬಳಸಬೇಡಿ, ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ ಎಂದರು.