ನವ ಗುಲಾಮಗಿರಿಗೆ ತಳ್ಳಿಲಿರುವ ಕಾರ್ಮಿಕ ಸಂಹಿತೆಗಳು ಬೇಡ

| Published : May 02 2025, 01:30 AM IST

ಸಾರಾಂಶ

ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನು ಲೆಕ್ಕಿಸದೇ ಕಾರ್ಪೋರೇಟ್‌ಗಳಿಗೆ ಕಡಿವಾಣವಿಲ್ಲದ ಲಾಭವನ್ನು ಕಲ್ಪಿಸಲು ಈ ಸಂಹಿತೆಗಳನ್ನು ರೂಪಿಸಲಾಗಿದ್ದು, ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳು ಹಾಗೂ ಕಲ್ಯಾಣ ಯೋಜನೆಗಳ ಕಲ್ಪನೆಗಳು ದುರ್ಬಲಗೊಂಡು ಕಾರ್ಮಿಕರು ಅತಂತ್ರಸ್ಥಿತಿಯ ಸಂಕಷ್ಟಕ್ಕೀಡಾಗಲಿದ್ದಾರೆ.

ಹುಬ್ಬಳ್ಳಿ: ದೇಶದ ಕಾರ್ಮಿಕ ವರ್ಗ ತ್ಯಾಗ, ಬಲಿದಾನ, ಹೋರಾಟದಿಂದ ಪಡೆದ ೨೯ ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಮಾರ್ಪಡಿಸಿ ಜಾರಿಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಈ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಆಗ್ರಹಿಸಿದರು.ಎಪಿಎಂಸಿ ಶ್ರಮಿಕ ಭವನದಲ್ಲಿ ಗುರುವಾರ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆಸ ಸಭೆಯಲ್ಲಿ ಮಾತನಾಡಿದರು.

ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನು ಲೆಕ್ಕಿಸದೇ ಕಾರ್ಪೋರೇಟ್‌ಗಳಿಗೆ ಕಡಿವಾಣವಿಲ್ಲದ ಲಾಭವನ್ನು ಕಲ್ಪಿಸಲು ಈ ಸಂಹಿತೆಗಳನ್ನು ರೂಪಿಸಲಾಗಿದ್ದು, ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳು ಹಾಗೂ ಕಲ್ಯಾಣ ಯೋಜನೆಗಳ ಕಲ್ಪನೆಗಳು ದುರ್ಬಲಗೊಂಡು ಕಾರ್ಮಿಕರು ಅತಂತ್ರಸ್ಥಿತಿಯ ಸಂಕಷ್ಟಕ್ಕೀಡಾಗಲಿದ್ದಾರೆ ಎಂದರು. ಸಭೆಯ ಪೂರ್ವದಲ್ಲಿ ಎಪಿಎಂಸಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮೇ ೨೦ ಸಾರ್ವತ್ರಿಕ ಮುಷ್ಕರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವಣ್ಣೆಪ್ಪ ನೀರಲಗಿ, ಗುರುಸಿದ್ದಪ್ಪ ಅಂಬಿಗೇರ, ನಾರಾಯಣ ಆರೇರ, ಉದಯ ಗದಗಕರ, ಹನಮಂತ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು. ಹಮಾಲಿ, ಗ್ರಾಮ ಪಂಚಾಯತ, ಸ್ವಚ್ಚವಾಹಿನಿ, ಹಾಸ್ಟೇಲ್ ಮುಂತಾದ ಕಾರ್ಮಿಕರು ಭಾಗವಹಿಸಿದ್ದರು.