ಎಚ್‌.ಡಿ.ಕುಮಾರಸ್ವಾಮಿ ಬಾಯಿ ಚಪಲದ ಮಾತುಗಳಿಗೆ ಉತ್ತರಿಸಬೇಕಿಲ್ಲ : ಸಚಿವ ಚಲುವರಾಯಸ್ವಾಮಿ

| Published : Jan 06 2025, 01:02 AM IST / Updated: Jan 06 2025, 12:53 PM IST

ಎಚ್‌.ಡಿ.ಕುಮಾರಸ್ವಾಮಿ ಬಾಯಿ ಚಪಲದ ಮಾತುಗಳಿಗೆ ಉತ್ತರಿಸಬೇಕಿಲ್ಲ : ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು. ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಎನ್ನುವ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರಿಂದ ಈ ರೀತಿಯ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.

  ಮಂಡ್ಯ :  ಎಚ್‌.ಡಿ.ಕುಮಾರಸ್ವಾಮಿ ಅವರು ಬಾಯಿ ಚಪಲಕ್ಕೆ, ಚಟಕ್ಕೆ ಮಾತನಾಡುತ್ತಾರೆ. ಅಂತಹ ಮಾತುಗಳಿಗೆ ಉತ್ತರ ಕೊಡಬೇಕೆನಿಸುವುದೇ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ

ಜನರ ತೀರ್ಮಾನವೇ ಅಂತಿಮ ಎಂದು ನಾವು ನಂಬಿದ್ದೇವೆ. ಅದನ್ನು ಎಚ್ಡಿಕೆ ನಂಬುತ್ತಾರಾ. ಕಳೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲಾ ಸರ್ವೇಗಳನ್ನು ಮೀರಿ ಜನರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಈ ಫಲಿತಾಂಶ ಸರ್ಕಾರದ ಮೇಲಿನ ಜನರಿಗಿರುವ ವಿಶ್ವಾಸ ತೋರಿಸುತ್ತದೆ ಎಂದು ಉತ್ತರಿಸಿದರು.

ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು. ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಎನ್ನುವ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರಿಂದ ಈ ರೀತಿಯ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದರು.

ನಾನು ಸಂಸದನಾಗಿದ್ದಾಗ ಅಂಬರೀಶ್ ಬಳಸುತ್ತಿದ್ದ ಕಾರು ಕೊಟ್ಟಿದ್ದರು. ಹೊಸ ಕಾರು ಬರಲು ವರ್ಷ ಬೇಕಾಯಿತು. ಈಗ ಸಚಿವನಾದ ಮೇಲೂ ಹಳೆಯ ಕಾರನ್ನೇ ಬಳಸುತ್ತಿದ್ದೆ. ಕಾರು ಕೊಡಲು ಸರ್ಕಾರ ಕೆಲವು ನಿಯಮಗಳನ್ನು ಅನುಸರಿಸಬೇಕಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು ಎಂದರು.

ಸುಮಲತಾ ಕುಳಿತ ಕಾರಲ್ಲಿ ನಾನು ಕೂರೋಲ್ಲ ಎಂದಿದ್ದೇಕೆ?:

ಸುಮಲತಾ ಅವರು ಕುಳಿತಿದ್ದ ಕಾರಲ್ಲಿ ನಾನು ಕೂರಲ್ಲ ಎಂದವರು ಕುಮಾರಸ್ವಾಮಿ. ಓರ್ವ ಎಂಪಿ ಉಪಯೋಗಿಸಿದ್ದ ಕಾರು, ಉಪಯೋಗಿಸಲು ಸಮಸ್ಯೆ ಏನಿತ್ತು‌?. ಅದಕ್ಕೆ ಕಾರಣ ಅವರೇ ಹೇಳಬೇಕು. ಕುಮಾರಸ್ವಾಮಿ ಅವರ ಇಂತಹ ಮಾತುಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಅನುದಾನದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ವಿಚಾರವಾಗಿ ಕೇಳಿದಾಗ, ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡಬೇಕಿತ್ತು. ಆ ಅನುದಾನದಲ್ಲಿ ಕಿಕ್ಕೇರಿ- ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲೇನೂ ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯದ ಕೋಟಾದಲ್ಲಿ ನೀಡುವ ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.

ವಿಶೇಷ ಅನುದಾನ ತಂದರೆ ಅಭಿನಂದಿಸುವೆ:

ಕುಮಾರಸ್ವಾಮಿ ಅವರು ವಿಶೇಷ ಅನುದಾನ ತಂದರೆ ಅಭಿನಂದಿಸುತ್ತೇನೆ. ಪಾಂಡವಪುರ- ಚನ್ನರಾಯಪಟ್ಟಣ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಗೆ ಪರಿವರ್ತನೆ ಮಾಡಲಿ. ಇದು ಸವಾಲಲ್ಲ, ರಿಕ್ವೆಸ್ಟ್. ಈ ಕೆಲಸ ಮಾಡಿದರೆ ಕುಮಾರಸ್ವಾಮಿ ಅವರನ್ನು ನಾನೇ ಖುದ್ದು ಅಭಿನಂದಿಸುತ್ತೇನೆ ಎಂದರು.

ಬಸ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸ್‌ ದರ ಪರಿಷ್ಕರಣೆಯಾಗಿ 15 ವರ್ಷವಾಗಿದೆ. ಪೆಟ್ರೋಲ್‌-ಡೀಸೆಲ್‌ ದರ ಹೆಚ್ಚಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಬಸ್‌ ದರ ಕಡಿಮೆ ಇದೆ. ಬಸ್‌ ದರ ಹೆಚ್ಚಳ ಮಾಡದಿದ್ದರೆ ನಿಗಮ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಗ್ಯಾರಂಟಿಗೂ ಬಸ್‌ ದರ ಹೆಚ್ಚಳಕ್ಕೆ ಸಂಬಂಧವಿಲ್ಲ:

ಗ್ಯಾರಂಟಿಗೂ ಬಸ್ ದರ ಹೆಚ್ಚಳಕ್ಕೂ ಸಂಬಂಧ ಇಲ್ಲ. ವಿರೋಧ ಪಕ್ಷದವರನ್ನ ಕೇಳಿ ಗ್ಯಾರಂಟಿ ನಿಲ್ಲಿಸಲು ಆಗೋಲ್ಲ. ಜನ ಸಾಮಾನ್ಯರು ಗ್ಯಾರಂಟಿ ಬೇಡ, ಅಭಿವೃದ್ಧಿ ಬೇಕು ಎಂದಾಗ ಸರ್ಕಾರ ಯೋಚಿಸಲಿದೆ ಎಂದರು.

ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಊಟ ಮಾಡಿದ ಮಾತ್ರಕ್ಕೆ ರಾಜಕೀಯ ಮಾಡಲು ಹೋಗಿದ್ದರು ಎಂದರ್ಥವಲ್ಲ. ವಿರೋಧ ಪಕ್ಷದವರು ಕೆಲಸವಿಲ್ಲದಿದ್ದಾಗ ಈ ರೀತಿ ಸೃಷ್ಟಿ ಮಾಡುತ್ತಾರೆ. ಟೀಕೆ ಮಾಡಿಕೊಂಡು ಜೀವನ ಕಳೆಯುತ್ತಾರೆ. ಅವರಿಗೆ ಮುಂದೆ ಗುರಿಯಿಲ್ಲ, ಮಾತನಾಡಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಜರಿದರು.

ಸಿಎಂ ಡಿನ್ನರ್ ಮೀಟಿಂಗ್ ಬಳಿಕ ಒಕ್ಕಲಿಗ ನಾಯಕರು ಪ್ರತ್ಯೇಕ ಸಭೆ ನಡೆಸಿರುವ ವಿಚಾರದ ಬಗ್ಗೆ ಕೇಳಿದಾಗ, ಈಗಾಗಲೇ ಒಕ್ಕಲಿಗ ನಾಯಕರು 3-4 ಸಭೆ ನಡೆಸಿದ್ದೇವೆ. ಆದರೆ, ರಾಜಕೀಯಕ್ಕಲ್ಲ, ಸಮುದಾಯದ ಏಳಿಗೆ ಕುರಿತು ಸಭೆ ನಡೆಸಿದ್ದೇವೆ‌ ಎಂದು ಸಮರ್ಥನೆ ನೀಡಿದರು.