ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬರಗಾಲದ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ರೈತರೊಂದಿಗೆ ಚರ್ಚಿಸಿದರು.

ಡಂಬಳ: ಜಿಲ್ಲೆಯನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಬೇಕು. ಇದಕ್ಕೆ ಪರಿಹಾರ ಕಾರ್ಯಕ್ರಮಗಳನ್ನು ಅದರ ಹಿಂದೆಯ ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬರಗಾಲದ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಮಾತನಾಡಿದರು. ಒಂದು ವೇಳೆ ಕೇಂದ್ರ ಸರ್ಕಾರ ತಡ ಮಾಡಿದರೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಬೇಕು. ರಾಜ್ಯ ಸರ್ಕಾರ ದೆಹಲಿಯನ್ನು ತೋರಿಸುತ್ತಾ ಬರಗಾಲವನ್ನು ವಿಸ್ತರಣೆ ಮಾಡುವುದರಲ್ಲಿ ಅರ್ಥವಿಲ್ಲ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ರೈತರ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕು. ತಕ್ಷಣ ರೈತರ ಪ್ರತಿ ಎಕರೆಗೆ ₹25 ಸಾವಿರ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಬೇಕು ಒತ್ತಾಯ ಮಾಡಿದರು.ಗ್ರಾಮೀಣ ಜನರಿಗೆ ನೀಡುವ ಸೇವೆಯನ್ನು ನೋಡಿ ಮೈಕ್ರೋ ಪೈನಾನ್ಸ್‌ನವರಿಗೆ ಕೇಂದ್ರ ಸರ್ಕಾರ ₹5 ಸಾವಿರ ಕೋಟಿ ಸಹಾಯಧನ ಕೊಟ್ಟಿದೆ. ಸಹಾಯಧನ ತೆಗೆದುಕೊಂಡವರು ಸೇವೆ ಮಾಡುತ್ತಿದ್ದಾರಾ ಅಥವಾ ನಮ್ಮ ತಲೆ ಒಡೆಯುತ್ತಿದ್ದಾರಾ? ಬರಗಾಲದ ಸಂದರ್ಭದಲ್ಲಿ ಬ್ಯಾಂಕ್‌ ರೈತರ ಸಾಲ ವಸೂಲಿ ಮಾಡಬಾರದು. ಒಂದು ವೇಳೆ ವಸೂಲಿ ಮಾಡಲು ಬಂದರೆ ಒದ್ದು ಬೀಗ ಹಾಕಿ ಎಂದು ರೈತರಿಗೆ ಸಲಹೆ ನೀಡಿದರು.

ಬೆಂಗಳೂರು ಎ ಗ್ರೇಡ್ ನಾಗರಿಕರು, ಹುಬ್ಬಳ್ಳಿ-ಧಾರವಾಡ ಬಿ ಗ್ರೇಡ್, ಗದಗ ಅಂದರೆ ಸಿ ಗ್ರೇಡ್, ಗ್ರಾಮೀಣ ಪ್ರದೇಶ ಎಂದರೆ ಡಿ ಗ್ರೇಡ್ ನಾಗರಿಕರು ಎನ್ನುವ ಭಾವನೆ ತೊಲಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮನವಾದ ಹಕ್ಕು ಸಮಾನವಾದ ಸವಲತ್ತು ಹಂಚಿಕೆ ಇರಬೇಕು. ನಮ್ಮನ್ನು ಕನಿಷ್ಠ ಮಟ್ಟದ ನಾಗರಿಕರು ಎಂದು ನೋಡಿದರೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ತೊಂದರೆ ಮಾಡಿದರೆ ಬಿಡುವುದಿಲ್ಲ. ಈ ಭಾಗದ ರೈತರ ಸಮಸ್ಯೆಗಳ ಕುರಿತು ಶೀಘ್ರದಲ್ಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಸಮಗ್ರವಾಗಿ ಚರ್ಚೆ ಮಾಡುತ್ತೇನೆ ಎಂದು ಸಲಹೆ ನೀಡಿದರು. ಶೀಘ್ರವಾಗಿ ರೈತರ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಾಯನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕಾರಿಗಳ ತಾಂತ್ರಿಕ ನೆಪದಿಂದ ರೈತರು ಬೆಳೆ ವಿಮಾದಿಂದ ವಂಚಿತರಾಗಿದ್ದಾರೆ. ಶಿಂಗಟಾಲೂರ ಏತ ನೀರಾವರಿ ಯೋಜನೆ, ಘಟಪ್ರಭಾ, ಮಲಪ್ರಭಾ ಮಹಾದಾಯಿ ನೀರಾವರಿ, ಜಾಲವಾಡಗಿ ಏತ ನೀರಾವರಿ, ಇಟಗಿ ಸಾಸಲವಾಡ ಏತ ನೀರಾವರಿಗಳು ಅತಂತ್ರವಾಗಿವೆ. ಆ ಹಿನ್ನೆಲೆಯಲ್ಲಿ ರೈತರು ಜಾಗೃತಿ ಹೊಂದಬೇಕು. ಪ್ರತಿಯೊಂದು ಗ್ರಾಮದಲ್ಲಿ ರೈತ ಸಂಘದ ಘಟಕವಾಗಬೇಕು ಎಂದರು ಸಲಹೆ ನೀಡಿದರು.

ಈ ಸಮಯದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಕಲ್ಮೇಶ ಲಿಗಾಡಿ, ಡಂಬಳ ಗ್ರಾಮ ಘಟಕದ ಅಧ್ಯಕ್ಷ ಮಲ್ಲಪ್ಪ ಮಠದ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಶಿರಸಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಡಿ. ಬಸವರಾಜ, ಹಾವೇರಿ ಜಿಲ್ಲಾ ಕಾನೂನು ಸಲಹೆಗಾರ ಹನುಮಂತಪ್ಪ ಲಮಾಣಿ, ಹಾವೇರಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಶಿವಪ್ಪ ಹೊಟ್ಟೆಪ್ಪನವರ, ಬಸವರಾಜ ಮರಾಠೆ, ರವಿ ವಗ್ಗಣ್ಣವರ, ಹಸನಸಾಬ್ ದೊಡ್ಡಮನಿ, ಅಂದಪ್ಪ ಅಂಗಡಿ, ಗಿರೀಶ ಹೊಸಮನಿ, ಮಹೇಶ ನಾಗರಹಳ್ಳಿ, ಮೀರಾಬಾಯಿ ಗುತ್ತೆದಾರ, ಸಂಜೀವ ಹುಡೇದ, ಮಂಜುನಾಥ ಬೋವಿವಡ್ಡರ, ಪರಶುರಾಮ ವಡ್ಡರ, ವೀರಪ್ಪ ಸಿದ್ನೆಕೊಪ್ಪ, ಪ್ರವೀಣ ಕರ್ಣಿ, ಆದೇಶ ಹುಲಿಗೂರ, ಈರಪ್ಪ ಸಿದ್ನೆಕೊಪ್ಪ ಭಾಗವಹಿಸಿದ್ದರು.