ಸಾರಾಂಶ
ಕೊಪ್ಪಳ(ಯಲಬುರ್ಗಾ):
ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಓಲೈಕೆ ಮಾತುಗಳು ಸಲ್ಲದು ಎಂದಿರುವ ಮಾಜಿ ಸಚಿವ ಹಾಲಪ್ಪ ಆಚಾರ್, ಉಗ್ರಗಾಮಿತ್ವಕ್ಕೆ ಆಪರೇಷನ್ ಸಿಂದೂರ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸೈನಿಕರು ಪಾಕ್‌ಗೆ ಬುದ್ಧಿ ಕಲಿಸಿದ್ದಾರೆಂದು ಹೇಳಿದರು.ಯಲಬುರ್ಗಾ ಪಟ್ಟಣದ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಬುಧವಾರ ಬಿಜೆಪಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಭಯೋತ್ಪಾದಕರ ವಿರುದ್ಧ ಭಾರತೀಯ ಸೈನಿಕರು ಆಪರೇಷನ್ ಸಿಂದೂರ ಮೂಲಕ ತಕ್ಕಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಜನರ ರಕ್ಷಣೆಗೆ ಬದ್ಧವಿದೆ. ಪಹಲ್ಗಾಮ್ನಲ್ಲಿ ೨೬ ಜನರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಭಯೋತ್ಪಾದಕರ ನಾಶವಾಗಿದೆ. ಇಡೀ ವಿಶ್ವದ ಎದುರು ನಮ್ಮ ಸೈನಿಕರ ಶಕ್ತಿ ಪ್ರದರ್ಶನವಾಗಿದೆ ಎಂದರು.
ಪಾಕಿಸ್ತಾನ ಶತ್ರು ರಾಷ್ಟ್ರವಾಗಿದ್ದರೂ ಅವರನ್ನು ಕೆಲವರು ಓಲೈಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ದೇಶದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸೇನಾ ಪಡೆಗೆ ಬೆಂಬಲಿಸಬೇಕು ಎಂದ ಕರೆ ನೀಡಿದ ಅವರು, ಭಯೋತ್ಪಾದಕರನ್ನು ಬೆಳೆಸುವ ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮಕೈಗೊಳ್ಳಬೇಕು. ಭಾರತೀಯ ಸೈನಿಕರು ಹಾಗೂ ಜನರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಗುಂಡಿನ ದಾಳಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.ಗಡಿಯಲ್ಲಿ ನಿಂತು ಯೋಧರು ದೇಶದ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ತಿರಂಗಾ ಯಾತ್ರೆ ನಡೆಸಿ ಸೈನಿಕರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದರು.
ತಿರಂಗಾ ಯಾತ್ರೆ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡು ವಿವಿಧ ವೃತ್ತಗಳ ಮೂಲಕ ಚೆನ್ನಮ್ಮ ವೃತ್ತಕ್ಕೆ ಆಗಮಿಸಿತು.ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗೌವರಾಳ, ಮುಖಂಡರಾದ ಬಸಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ರತನ್ ದೇಸಾಯಿ, ಬಸವರಾಜ ರಾಜೂರು, ಮಲ್ಲನಗೌಡ ಕೋನನಗೌಡ, ಫಕೀರಪ್ಪ ತಳವಾರ, ವೀರಣ್ಣ ಹುಬ್ಬಳ್ಳಿ, ಶಿವಶಂಕರ ದೇಸಾಯಿ, ಸಂತೋಷಿಮಾ ಜೋಶಿ, ಶಿವಲೀಲಾ ದಳವಾಯಿ, ಎಸ್.ಎನ್. ಶ್ಯಾಗೋಟಿ, ಶಂಕರಗೌಡ ಎ.ಎಂ., ಮಹೇಶ ಭೂತೆ, ಅಮರೇಶ ಹುಬ್ಬಳ್ಳಿ, ಶಿವಪ್ಪ ವಾದಿ, ಸಿದ್ರಾಮೇಶ ಬೇಲೇರಿ, ಸಂಗಪ್ಪ ರಾಮತ್ನಾಳ, ಅಯ್ಯನಗೌಡ ಕೆಂಚಮ್ಮನವರ, ವಸಂತಕುಮಾರ ಭಾವಿಮನಿ, ಬಸವರಾಜ ಗುಳಗುಳಿ, ಬಿಜೆಪಿ ಯುವ ಘಟಕದ ಅಧ್ಯಕ್ಷ ಕಲ್ಲಪ್ಪ ಕರಮುಡಿ, ಮಾಜಿ ಸೈನಿಕ ನಾಗರಾಜ ವೆಂಕಟಾಪೂರ, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರಿದ್ದರು.
ಮಳೆಯಲ್ಲಿಯೇ ಆಚಾರ್ ಭಾಷಣಚೆನ್ನಮ್ಮ ವೃತ್ತದಲ್ಲಿ ತಿರಂಗಾ ಯಾತ್ರೆ ಸಮಾವೇಶಗೊಂಡಿತು. ಈ ವೇಳೆ ಜಿಟಿಜಿಟಿ ಮಳೆ ಸುರಿಯಲು ಪ್ರಾರಂಭಿಸಿತು. ಇದರ ನಡುವೆಯೇ ಹಾಲಪ್ಪ ಆಚಾರ್ ಮಳೆಯಲ್ಲಿ ನೆನೆದುಕೊಂಡೇ ಭಾಷಣ ಮಾಡಿದರು. ನೆರೆದಿದ್ದವರು ಸಹ ಕದಲದೇ ಭಾಷಣ ಮುಗಿಯುವವರಿಗೂ ನಿಂತುಕೊಂಡಿದ್ದರು.