ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗೃಹಬಳಕೆ ಅಡುಗೆ ಅನಿಲ ಪೂರೈಕೆ ಸಮರ್ಪಕವಾಗಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಚಾಮರಾಜನಗರ ಮಹೇಶ್ ಗ್ಯಾಸ್ ಏಜೆನ್ಸಿ ಮಾಲೀಕ ಮಹೇಶ್‌ ಕುದರ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು ತಾಲೂಕಿನಲ್ಲಿ ೨೩ ವಿವಿಧ ಗ್ಯಾಸ್ ವಿತರಕ ಏಜೆನ್ಸಿಗಳಿದ್ದು, ೩,೩೨,೪೩೩ ಅನಿಲ ಗ್ರಾಹಕರಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ, ತಮಗೆ ಸಿಲಿಂಡರ್ ಸಿಗುತ್ತದೆಯೋ ಇಲ್ಲವೋ ಎಂದು ಆತಂಕಕ್ಕೊಳಗಾಗಿ ಸಾಲು ಸಾಲು ಬುಕಿಂಗ್ ಮಾಡಿದರು, ಬುಕ್ ಮಾಡಿದ ಎಲ್ಲ ಗ್ರಾಹಕರಿಗೂ ಸಿಲಿಂಡರ್ ಪೂರೈಕೆ ವಿಳಂಭವಾಯಿತು. ಪ್ರಸ್ತುತ ಸಿಲಿಂಡರ್ ಸಮರ್ಪಕವಾಗಿ ಸರಬರಾಜಾಗುತ್ತಿದ್ದು, ಗ್ರಾಹಕರು ಯಾವುದೇ ಆತಂಕಕ್ಕೂ ಒಳಗಾಗಬಾರದು ಎಂದರು.

ಒಂದು ಸಿಲಿಂಡರ್ ಬಳಸುವವರು ೨೫ ದಿನಕ್ಕೆ, ಎರಡು ಸಿಲಿಂಡರ್ ಬಳಸುವವರು ೪೫ ದಿನಕ್ಕೆ ಬುಕ್ ಮಾಡಬಹುದಾಗಿದೆ. ಅನಿಲ ಗ್ರಾಹಕರು ತಪ್ಪದೇ ಇ- ಕೆವೈಸಿ ನೋಂದಾಯಿಸುವ ಮೂಲಕ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ವೆಂಕಟಯ್ಯನಛತ್ರ ಜ್ವಾಲೇಶ್ವರಿ ಇಂಡೇನ್ ಗ್ರಾಮೀಣ್ ವಿತರಕ ಏಜೆನ್ಸಿಯ ಎಚ್.ಬಿ.ಶಮಿತ್‌ಕುಮಾರ್ ಮಾತನಾಡಿ, ಗ್ರಾಹಕರು ಒಂದು ಸಿಲಿಂಡರ್ ಬುಕ್ ಮಾಡಿದ ೪೫ ದಿನಗಳ ನಂತರ ಬುಕ್ ಮಾಡಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ಬಳೇಪೇಟೆ ಗೋಪಾಲಕೃಷ್ಣ ಏಜೆನ್ಸಿಯ ನಿರಂಜನ್ ಇದ್ದರು.