ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶ ಬೇಡ: ಶಾಸಕ ಶಿವರಾಮ ಹೆಬ್ಬಾರ್

| Published : Apr 23 2025, 12:31 AM IST

ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶ ಬೇಡ: ಶಾಸಕ ಶಿವರಾಮ ಹೆಬ್ಬಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಕೂಡದು. ಈ ನಡುವೆಯೇ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ಪಂದಿಸುವಂತೆ ಸೂಚಿಸಿದರು.

ಯಲ್ಲಾಪುರ: ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕಣ್ಣಿನ ನೇರಕ್ಕೆ ನೋಡದೇ ಬಡವರ ಮತ್ತು ಎಲ್ಲ ವರ್ಗದವರ ಅನುಕೂಲಕ್ಕೆ ತಕ್ಕಂತೆ ಮನೋಭಾವ ಬೆಳೆಸಿಕೊಂಡು ಪ್ರಾಮಾಣಿಕ ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅರಣ್ಯಾಧಿಕಾರಿಗಳ ಬಗೆಗೆ ಮಾತನಾಡಿದ ಅವರು, ಅಧಿಕಾರಿಗಳು ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಕೂಡದು. ಈ ನಡುವೆಯೇ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ಪಂದಿಸುವಂತೆ ಸೂಚಿಸಿದರು.

ಸಾರ್ವಜನಿಕರಿಗೆ ಎಲ್ಲ ಇಲಾಖೆಗಳ ಯೋಜನೆಗಳ ಸಂಪೂರ್ಣ ಮಾಹಿತಿ ತಿಳಿಯಬೇಕೆಂಬ ಉದ್ದೇಶದಿಂದಲೇ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ೪೩೨ ಕಂಬ ಬಿದ್ದಿವೆ. ಇವುಗಳಲ್ಲಿ ೬೩ ಹೊಸ ಕಂಬ ಅಳವಡಿಸಬೇಕಿದೆ ಎಂದು ಹೆಸ್ಕಾಂ ಸ.ಕಾ. ಅಭಿಯಂತರ ಹೇಮಂತ ಪ್ರಶ್ನೆಗೆ ಉತ್ತರಿಸಿ, ತಾಲೂಕಿನಲ್ಲಿ ಅಗತ್ಯವಿದ್ದ ೩ ಪರಿವರ್ತಕಗಳನ್ನು ಬದಲಿಸಲಾಗಿದ್ದು, ೩೭೪ ನೂತನ ಕಂಬಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗಾಗಿ ಸಾರ್ವಜನಿಕರಿಂದ ೨೩ ಅರ್ಜಿಗಳು ಬಂದಿವೆ ಎಂದರು.

ತಾಲೂಕಿನಲ್ಲಿ ೯೫ ನೀರಾವರಿ ಪಂಪ್‌ಸೆಟ್‌ಗಳ ಅಳವಡಿಕೆಗೆಂದು ಟೆಂಡರ್ ಆಗಿ ಕಾಮಗಾರಿ ಮುಗಿದಿದ್ದರೂ ವಿದ್ಯುತ್ ಸಂಪರ್ಕ ನೀಡದಿದ್ದರೆ ರೈತರಿಗೆ ಯಾವ ಪ್ರಯೋಜನ ಎಂದು ಶಾಸಕರು ಗರಂ ಆಗಿ ಪ್ರಶ್ನಿಸಿದಾಗ, ೧೦ ದಿನಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದೇಶಿಸಿದರು.

ಉಮ್ಮಚಗಿ ಗ್ರಾಪಂ ಸದಸ್ಯ ಗ.ರಾ. ಭಟ್ಟ ಮಾತನಾಡಿ, ವಿದ್ಯುತ್ ಸಮಸ್ಯೆ ಉಂಟಾದಾಗ ಸಾರ್ವಜನಿಕರು ಮಾಡುವ ದೂರವಾಣಿ ಕರೆಗಳಿಗೆ ಸ್ಪಂದಿಸದ ಮಂಚೀಕೇರಿಯ ಹೆಸ್ಕಾಂ ಅಧಿಕಾರಿಗಳ ವರ್ತನೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮಾತನಾಡಿ, ಉಮ್ಮಚಗಿಯ ಲೈನ್‌ಮ್ಯಾನ್ ವರ್ಗಾವಣೆಗೊಂಡಿದ್ದು ಹೊಸದಾಗಿ ನೇಮಕ ಮಾಡುವಂತೆ, ಜೆಜೆಎಂ ಯೋಜನೆಗೆ ಮೀಟರ್ ಅಳವಡಿಕೆ ಮಾಡುವಂತೆಯೂ ವಿನಂತಿಸಿದರು.

ಮಂಚಿಕೇರಿಯಿಂದ ಬಿಳಕಿಗೆ ಹೋಗುವ ವಿದ್ಯುತ್ ಮಾರ್ಗದ ಅಸಮರ್ಪಕತೆ ಕುರಿತಂತೆ ಹಾಸಣಗಿ ಗ್ರಾಪಂ ಸದಸ್ಯ ಎಂ.ಕೆ ಭಟ್ಟ ಸಭೆಯ ಗಮನ ಸೆಳೆದರು.

ಕಿರವತ್ತಿಯಲ್ಲಿರುವ ತಾಪಂನ ಧರ್ಮಶಾಲಾ ಹೆಸರಿನ ಖಾಲಿ ಸ್ಥಳವನ್ನು ಆಯುಷ್ಮಾನ್ ಭವನ ನಿರ್ಮಾಣಕ್ಕೆ ಹಸ್ತಾಂತರಿಸಲು ಸಭೆಯಲ್ಲಿ ಠರಾಯಿಸಲಾಯಿತು.

ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುಬ್ರಾಯ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಕೈಗೊಂಡಿರುವ ಜಾನುವಾರು ಗಣತಿ ಕಾರ್ಯ ಯಶಸ್ವಿಯಾಗಿ ಮುಗಿದಿದೆ. ತಾಲೂಕಿನಲ್ಲಿ ೧೬ ಆಸ್ಪತ್ರೆಗಳಿದ್ದು ಒಟ್ಟಾರೆ ಖಾಯಂ ವೈದ್ಯರ ಕೊರತೆಯೂ ಇದೆ. ಈ ಬಾರಿ ತಾಲೂಕಿನ ೧೧೦ ರೈತರಿಗೆ ಜಾನುವಾರು ಸಾವಿನ ಹಿನ್ನೆಲೆಯಲ್ಲಿ ನೀಡಲಾಗುವ ಪರಿಹಾರಧನ ನೀಡುವುದು ಬಾಕಿ ಇದೆ ಎಂದರು.

ಜಿಪ ಅಭಿಯಂತರ ಅಶೋಕ ಬಂಟ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ,

ಬಿಇಒ ಎನ್.ಆರ್ ಹೆಗಡೆ, ಸಿಡಿಪಿಒ ಶ್ರೀದೇವಿ ಪಾಟೀಲ, ಎಸಿಎಫ್ ಹಿಮವತಿ ಭಟ್ಟ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಸಂತೋಷ ವರ್ಣೇಕರ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಎಚ್, ಇಒ ರಾಜೇಶ ಧನವಾಡಕರ ಇದ್ದರು.