ಸಾರಾಂಶ
ಸಂಡೂರು: ಜೀವ ವೈವಿಧ್ಯ ಹೊಂದಿರುವ, ಪಶ್ಚಿಮ ಘಟ್ಟಗಳ ಪರಿಸರ ಹೋಲುವ ಸಂಡೂರು ತಾಲೂಕಿನ ದಟ್ಟ ಅರಣ್ಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಇಲ್ಲಿನ ಪರಿಸರ ಸಂರಕ್ಷಿಸಿ, ಮುಂದಿನ ಜನಾಂಗಕ್ಕೂ ಉಳಿಸಲು ಒಟ್ಟಾಗಿ ಶ್ರಮಿಸೋಣ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ತಾಲೂಕಿನ ರಾಮಘಡ ಅರಣ್ಯ ವಲಯ, ಸ್ವಾಮಿಮಲೈ ಅರಣ್ಯ ವಲಯದಲ್ಲಿ ಬರುವ ದೇವದಾರಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ, ಕುದುರೆಮುಖ ಕಬ್ಬಿಣ ಅದಿರು ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ನೀಡುವ ಪ್ರದೇಶಗಳನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಅವರು ಮಾತನಾಡಿದರು.ಹೊಸದಾಗಿ ಗಣಿಗಾರಿಕೆ ನೀಡಲು ಉದ್ದೇಶಿಸಿರುವ ಸ್ಥಳಗಳಲ್ಲಿ ದಟ್ಟ ಅರಣ್ಯವಿದೆ. ಅಲ್ಲಿ ಔಷಧೀಯ ಸಸ್ಯಗಳು, ಶ್ರೀಗಂಧ, ತೇಗದ ಮರಗಳು ಯಥೇಚ್ಛವಾಗಿವೆ. ಜೀವ ವೈವಿಧ್ಯವಿದೆ. ಜಲ ಮೂಲಗಳಿವೆ. ಉದ್ದೇಶಿತ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ, ಲಕ್ಷಾಂತರ ಗಿಡ-ಮರಗಳು, ಔಷಧೀಯ ಸಸ್ಯಗಳು ನಾಶವಾಗಲಿವೆ. ಇದು ಇಲ್ಲಿನ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅರಣ್ಯ ಇಲಾಖೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಗಣಿಗಾಗಿಕೆಗೆ ಅನುಮತಿ ನೀಡಲು ಮುಂದಾಗಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಈಗಾಗಲೇ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಾಕಷ್ಟು ಅರಣ್ಯ, ಪರಿಸರ ಹಾಳಾಗಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾಗಿಕೆ ನಡೆಸಲು ಅವಕಾಶ ನೀಡಬಾರದು. ಆ.೨ರಂದು ರಾಮಗಡ ಅರಣ್ಯ ವಲಯದಲ್ಲಿ ವಿಐಎಸ್‌ಎಲ್ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಕುರಿತಂತೆ ಕರೆದಿರುವ ಸಾರ್ವಜನಿಕ ಪರಿಸರ ಸಭೆಯಲ್ಲಿ ಸ್ಥಳೀಯರು ಗಣಿಗಾರಿಕೆ ವಿರೋಧಿಸಿ ಅಲ್ಲಿನ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉತ್ತರ, ದಕ್ಷಿಣ ಅರಣ್ಯ ವಲಯಗಳ ವಲಯ ಅರಣ್ಯಾಧಿಕಾರಿಗಳಾದ ದಾದಾ ಖಲಂದರ್, ಡಿ.ಕೆ. ಗಿರೀಶ್‌ಕುಮಾರ್, ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಸದಸ್ಯ ಮೂಲಿಮನೆ ಈರಣ್ಣ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಕೆ ನಾಯ್ಡು, ಮುಖಂಡರಾದ ಜಿ.ಕೆ. ನಾಗರಾಜ, ಪರಮೇಶ್ವರಪ್ಪ, ಕಾಡಪ್ಪ, ಮೌನೇಶ, ನಾಗರಾಜ,ಲಿಂಗರಾಜು, ಕಾಶಪ್ಪ, ಶಿವು, ನರಸಾಪುರ, ರಣಜಿತ್‌ಪುರ ಹಾಗೂ ಯಶವಂತನಗರ ಗ್ರಾಮಸ್ಥರು ಉಪಸ್ಥಿತರಿದ್ದರು.