ಕಸ್ತೂರಿರಂಗನ್ ವರದಿಯಿಂದ ಬಾಧಿತರಾಗುವ ಮಲೆನಾಡು ಭಾಗದ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಂಬಂಧ ಕರೆದಿರುವ ವಿಶೇಷ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಸ್ತೂರಿರಂಗನ್ ವರದಿಯಿಂದ ಬಾಧಿತರಾಗುವ ಮಲೆನಾಡು ಭಾಗದ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಂಬಂಧ ಕರೆದಿರುವ ವಿಶೇಷ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ ತೀರ್ಥಹಳ್ಳಿಯ ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯಲ್ಲಿ ಮಾತನಾಡಿ, ಸೆ. 21ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ, ಮಲೆನಾಡು ಭಾಗದ ಜನರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.
ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಕುರಿತು ಹಾಗೂ ಪರಿಸರ ಸೂಕ್ಷ್ಮ ವಲಯದ ವಿಚಾರದಲ್ಲಿ ಕಾನೂನಿನ ಅಂಶಗಳನ್ನು ಪರಿಶೀಲಿಸಲಾಗುವುದು. ಕೇರಳ ಮಾದರಿಯಲ್ಲೇ ಭೌತಿಕ ಸರ್ವೆ ನಡೆಸುವ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.ನೋಟಿಸ್ ನೀಡದಂತೆ ಸೂಚನೆ: ಅರಣ್ಯ ಒತ್ತುವರಿ ಸಂಬಂಧ ಯಾವ ರೈತರಿಗೂ ಹೊಸದಾಗಿ ನೋಟಿಸ್ ನೀಡದಂತೆ ಹಾಗೂ ಇದೇ ವೇಳೆಗೆ ಹೊಸದಾಗಿ ಯಾರೂ ಒತ್ತುವರಿ ಮಾಡದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಾನು ನಿಮ್ಮ ಜೊತೆ ಇದ್ದೇನೆ. ರೈತರ ಪರವಾಗಿ ಇದ್ದೇನೆ. ಬಗರ್ ಹುಕುಂ, ಉಳುವವನಿಗೆ ಭೂಮಿ ಹಕ್ಕು ತಂದಿದ್ದು ನಮ್ಮ ಪಕ್ಷದ ಸರ್ಕಾರ ಎಂದರು.94ಸಿ ಹಾಗೂ ಬಗರ್‌ಹುಕುಂ ಸೇರಿದಂತೆ ಜಮೀನು ಸಂಬಂಧಿತ ವಿಚಾರಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಅರಣ್ಯ ಹಕ್ಕು ಕಾಯ್ದೆ ಕುರಿತು ಮಾತನಾಡಿ, ಪರಿಶಿಷ್ಟ ಪಂಗಡದವರಿಗೆ ಹಾಗೂ ಇತರರಿಗೆ ಇರುವ ಹಕ್ಕಿನ ಅವಧಿಗೆ ಸಂಬಂಧಿಸಿದಂತೆ ಬದಲಾವಣೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಉದ್ದೇಶವಿದೆ. ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸುವುದಾಗಿ ಹೇಳಿದರು.
‘ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಿಟೈರ್ಮೆಂಟ್ ಇಲ್ಲ, ರಜೆಯೂ ಇಲ್ಲ’. ರೈತರ ಸ್ಥಿತಿ ಕಷ್ಟದಲ್ಲಿದೆ. ನೀವು ಭರವಸೆ ಕಳೆದುಕೊಳ್ಳಬಾರದು. ರೈತರ ಬದುಕನ್ನು ಉಳಿಸುವ ದೃಷ್ಟಿಯಿಂದಲೇ ತೀರ್ಥಹಳ್ಳಿಗೆ ಬಂದಿರುವುದಾಗಿ ಹೇಳಿದರು.ಕಸ್ತೂರಿ ರಂಗನ್ ವರದಿ ಕುರಿತ ಮೊದಲು ಜನರೊಂದಿಗೆ ಸಂವಾದ ನಡೆಸಿ, ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆ ಬಳಿಕ ಶಾಸಕರೊಂದಿಗೆ ಚರ್ಚೆ ನಡೆಸಿ, ಈ ಸಂಬಂಧ ವಿಶೇಷ ಅಧಿವೇಶನ ನಡೆಸಿ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಎಲ್ಲದರ ಆಧಾರದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಆತಂಕ ನಿವಾರಿಸುವ ಕೆಲಸ ಮಾಡುತ್ತೇವೆ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜನರ ಆತಂಕ ನಿವಾರಿಸುವ ಕೆಲಸವನ್ನು ಮಾಡುತ್ತೇವೆಂದು ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಭರವಸೆ ನೀಡಿದ್ದಾರೆ. ಮನೆ, ಭೂಮಿ ಹೊಂದಿರುವ ಅರಣ್ಯವಾಸಿಗಳಿಗೆ ತೊಂದರೆ ಕೊಡುತ್ತಿರುವ ಕೇಂದ್ರದ ನಿಲುವನ್ನು ಧಿಕ್ಕರಿಸಬೇಕಿದೆ. ಗುಟ್ಕಾದಿಂದಲ್ಲ ಬದಲಾಗಿ ಕೇಂದ್ರದ ಸೇಲ್ಸ್ ತೆರಿಗೆಯಿಂದ ತೊಂದರೆಯಾಗಿದೆ ಎಂದರು.ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ. ಅದನ್ನು ತಿರಸ್ಕರಿಸಲು ನಾವು ನಿರ್ಧರಿಸಿದ್ದೇವೆ. ಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ವಿಷಯಗಳ ಕುರಿತು ಇಲ್ಲೇ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ಅಧಿಸೂಚನೆಯಾಗಬೇಕಿದೆ. ಜನ, ಅರಣ್ಯ, ವನಮೂಲ, ಪ್ರಾಣಿ ಸಂಕುಲ ಎಲ್ಲ ಉಳಿಯಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಜೊತೆಗಿರಲಿದೆ ಎಂದರು.
ವರದಿಯಲ್ಲಿ ವಿದೇಶಿ ಕೈವಾಡ ಶಂಕೆ; ಆರಗ ಜ್ಞಾನೇಂದ್ರ: ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಅಧಿಸೂಚನೆಗಳು ಸಾಕಷ್ಟು ಬಾಧೆ ನೀಡುತ್ತಿವೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಲಿ ವಿದೇಶಿ ಕೈವಾಡ ಇರುವ ಬಗ್ಗೆ ಮಾತುಗಳಿದ್ದು, ಈ ಬಗ್ಗೆ ವಿಚಾರಣೆ ಆಗಬೇಕಿದೆ. 6 ರಾಜ್ಯಗಳಲ್ಲಿ ಓಡಾಡಿ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚನೆ ಆಗಿದೆ. 1 ವರ್ಷದೊಳಗೆ ಸರ್ವೇ ಆಗಬೇಕು. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಜಾರಿಯಾಗದಿದ್ದರೂ ಅರಣ್ಯ ಇಲಾಖೆ ಸೂಕ್ಷ್ಮ ಪ್ರದೇಶದಂತೆ ನೋಡುತ್ತದೆ. ವರದಿಯಿಂದ ಎದುರಾಗುವ ಸಮಸ್ಯೆಗಳು, ಬದುಕನ್ನು ಕಸಿಯುವ ಪ್ರಯತ್ನಕ್ಕೆ ಶಾಶ್ವತ ಪರಿಹಾರ ನೀಡಬೇಕು. ಶೇ.70 ಅಡಕೆ ಬೆಳೆಗಾರರು ಇಲ್ಲಿದ್ದು, ಅಡಕೆ ಬೆಳೆಗಾರರನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಇಲ್ಲಿನ ಜನರ ಮಾರಣ ಹೋಮ ಆಗಲಿದೆ. ಇದನ್ನು ತಡೆಯಲು ಪಾದಯಾತ್ರೆ ಕೈಗೊಳ್ಳಲಾಯಿತು. ಮಲೆನಾಡಿನ ಜನ ಅನೇಕ ಸವಾಲು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಹಂದಿ, ಆನೆ, ಮಂಗಗಳ ಕಾಟಕ್ಕೆ ಜನ ಊರು ಬಿಡುವ ಮಟ್ಟಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ 440 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಗಾಗಿರುವುದು ಶೋಚನೀಯ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ವೇ ಮಾಡಿ ಸುಪ್ರೀಂ ಕೋರ್ಟ್ ಗೆ ಕಳುಹಿಸಲಾಗಿದೆ. ಸಮರ್ಪಕ ನ್ಯಾಯ ಒದಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ.ಮಂಜುನಾಥ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಪ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಸಿ. ಯೋಗೀಶ್, ಪ್ರಮುಖರಾದ ಚೇತನ್, ಎಚ್.ಎಸ್.ಸುಂದರೇಶ್, ಚಂದ್ರಭೂಪಾಲ್ ಇತರರಿದ್ದರು.