ಸಾರಾಂಶ
- ಸದ್ಯದಲ್ಲೇ ಸಂಪೂರ್ಣ ಮಾಹಿತಿ ನೀಡುತ್ತೇನೆ: ವಿನಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ನೋಟಿಸ್ ಆಗಲಿ, ಪತ್ರವಾಗಲೀ ಬಂದಿಲ್ಲ ಎಂದು ಸ್ವಾಭಿಮಾನಿ ಬಳಗದ ಪ್ರಮುಖ, ದಾವಣಗೆರೆ ಲೋಕಸಭೆ ಕ್ಷೇತ್ರ ಪರಾಜಿತ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಸ್ಪಷ್ಟಪಡಿಸಿದ್ದಾರೆ.ಪಕ್ಷದಿಂದ ಉಚ್ಚಾಟನೆ ಮಾಡಿರುವ ವಿಷಯ ಕುರಿತಂತೆ ರಹೀಂ ಖಾನ್ ಪ್ರಕಟಣೆ ನೀಡಿರುವ ಬಗ್ಗೆ ನನಗೆ ಅಧಿಕೃತವಾಗಿ ಏನೂ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಷ್ಟೇ ಅದನ್ನು ಗಮನಿಸಿದ್ದೇನೆ. ನನ್ನನ್ನು ಯಾಕೆ ಉಚ್ಚಾಟನೆ ಮಾಡಿದ್ದಾರೆಂಬುದೂ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂದ ವರ್ಗದ ಪರ ನಾನು ಮಾತನಾಡಿದ್ದಕ್ಕೋ ಅಥವಾ ಶಾಸಕ ಶಾಮನೂರು ಶಿವಶಂಕರಪ್ಪನವರು ಅಹಿಂದ ಪರ ಮಾತನಾಡಿಲ್ಲವೆಂಬ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಅಹಿಂದ ವರ್ಗದ ಪರ ನನ್ನ ಹೋರಾಟ ಮುಂದುವರಿಯುತ್ತದೆ. ಕಾಂಗ್ರೆಸ್ ಪಕ್ಷ ಔಟ್ ರೀಚ್ ವಿಭಾಗದ ರಾಜ್ಯ ಘಟಕದಲ್ಲಿ ನನಗೆ ಹುದ್ದೆ ನೀಡಲಾಗಿತ್ತು. ರಾಷ್ಟ್ರಾಧ್ಯಕ್ಷರಾದ ಉಮನ್ ಚಾಂಡಿ ನೇಮಕ ಮಾಡಿದ್ದರು. ಉಮನ್ ಚಾಂಡಿಯವರೇ ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ರಹೀಂ ಖಾನ್‌ರ ಹೆಸರಿನ ಹೇಳಿಕೆ ಬಂದಿದೆ ಅಷ್ಟೇ. ಈ ಕುರಿತಂತೆ ಸುದೀರ್ಘವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.ಅಹಿಂದ ವರ್ಗವನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಬಳಸಲಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಮತದಾನದ ಕೊನೆ ವೇಳೆಗೆ ಆಗಮಿಸಿ ಜಿ.ಬಿ.ವಿನಯಕುಮಾರಗೆ ಮತ ನೀಡಬೇಡಿ ಎಂಬುದಾಗಿ ಕರೆ ನೀಡಿದ್ದರು. ಆ ಬಳಿಕ ತಾವೇ ಅಭ್ಯರ್ಥಿಯೆಂದು ಪರಿಗಣಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಪಾದಯಾತ್ರೆ, ಸಂಘಟನೆ, ಪಕ್ಷ ಸೇವೆ ಗುರುತಿಸಿ ಈ ಮಟ್ಟದಲ್ಲಿ ನನ್ನ ಹೆಸರು ಇತ್ತು. ರಾಜ್ಯದ ಮುಖ್ಯಮಂತ್ರಿಯವರೇ ಹೀಗೆ ಹೇಳುತ್ತಾರೆಂದರೆ ಜಿಲ್ಲೆಯ ಸ್ವಾಭಿಮಾನಿ ಜನರು ನೀಡಿದ ಶಕ್ತಿ ಏನೆಂಬುದು ಗೊತ್ತಾಗುತ್ತದೆ. ಸದ್ಯದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡುತ್ತೇನೆ, ಎಂದು ವಿನಯಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- - - -31ಕೆಡಿವಿಜಿ1: ಜಿ.ಬಿ.ವಿನಯಕುಮಾರ