ನಮ್ಮದು ಸಾಧು-ಸಂತರು ನೆಲಸಿದ ಭೂಮಿ, ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಧರ್ಮ ನಮ್ಮದಾಗಿದೆ. ನಮಗೂ ಈ ಭೂಮಿಗೂ ಅವಿನಾಭಾವ ಸಂಬಂಧವಿದೆ. ಬಹುಸಂಖ್ಯಾತರೆಂಬ ಆಧಾರದಲ್ಲಿ ಈ ಭೂಮಿ ಹಿಂದೂಗಳದ್ದು ಎಂದು ಹೇಳಿಕೊಳ್ಳುವುದಲ್ಲ. ಬದಲಿಗೆ ಈ ಭೂಮಿ ನಮ್ಮದು ಎನ್ನುವುದು ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆಯಾಗಿದೆ ಎಂದು ಆರ್‌ಎಸ್‌ಎಸ್ ನ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಮ್ಮದು ಸಾಧು-ಸಂತರು ನೆಲಸಿದ ಭೂಮಿ, ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಧರ್ಮ ನಮ್ಮದಾಗಿದೆ. ನಮಗೂ ಈ ಭೂಮಿಗೂ ಅವಿನಾಭಾವ ಸಂಬಂಧವಿದೆ. ಬಹುಸಂಖ್ಯಾತರೆಂಬ ಆಧಾರದಲ್ಲಿ ಈ ಭೂಮಿ ಹಿಂದೂಗಳದ್ದು ಎಂದು ಹೇಳಿಕೊಳ್ಳುವುದಲ್ಲ. ಬದಲಿಗೆ ಈ ಭೂಮಿ ನಮ್ಮದು ಎನ್ನುವುದು ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆಯಾಗಿದೆ ಎಂದು ಆರ್‌ಎಸ್‌ಎಸ್ ನ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಶನಿವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವತಿಯಿಂದ ಆಯೋಜಿಸಲಾಗಿದ್ದ `ಸಂಘ ೧೦೦ ಮತ್ತು ಸಾಮರಸ್ಯ ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದು ದೇಶದಲ್ಲಿ ಸಂಬಂಧಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ. ನಾವೆಲ್ಲರೂ ಒಂದೇ ಮಾತರಂ ಎನ್ನುವುದು ದ್ರೋಹವಾಗುತ್ತಿದೆ. ಇಂದು ಎಲ್ಲದರಲ್ಲೂ ಬದಲಾವಣೆಗಳಾಗುತ್ತಿವೆ. ಆದರೆ ನಮ್ಮಲ್ಲಿನ ಅಸ್ಮಿತೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಈ ಭೂಮಿಯಲ್ಲಿ ಹುಟ್ಟಿರುವ ಹಿಂದೂಗಳು ನಾನು ಯಾರು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಎಲ್ಲಿಯವರೆಗೆ ನಮ್ಮಲ್ಲಿ ಗೊಂದಲಗಳು ಇರುತ್ತವೆಯೋ ಅಲ್ಲಿಯವರೆಗೂ ಸಂಘರ್ಷಗಳು ಇರುತ್ತವೆ ಎಂದರು.

ಈ ದೇಶದಲ್ಲಿ ಬ್ರಿಟಿಷರು ನಮಗೆ ಸಿಹಿ ತಿನಿಸಿ ಗುಲಾಮಗಿರಿಗೆ ತಳ್ಳಿದರು. ಆ ದಾಸ್ಯದಿಂದ ಹೊರಬಂದು ನಮ್ಮದೇ ಆದ ಹೋರಾಟ ರೂಪಿಸಿಕೊಂಡು ಬರಲಾಯಿತು. ಆದರೆ ಸ್ವಾತಂತ್ರ್ಯದ ಚಳುವಳಿಯಲ್ಲಿ ಸಂಘದ ಪಾತ್ರ ಏನೆಂದು ಇದೀಗ ಪ್ರಶ್ನಿಸಲಾಗುತ್ತಿದೆ. ಇದಕ್ಕೂ ಮೊದಲು ಪ್ರಶ್ನಿಸುವವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿ ಎಂದರು.

೧೯೭೫ರಲ್ಲಿ ಇಂದಿರಾಗಾಂಧಿಯವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ದೇಶವನ್ನು ಕತ್ತಲಿನಲ್ಲಿಟ್ಟಿದ್ದರು. ಇದರ ವಿರುದ್ಧ ಸಂಘ ನಡೆಸಿದ ಹೋರಾಟದ ಪರಿಣಾಮ ಭವಿಷ್ಯದ ರಾಜಕೀಯ ಚಿತ್ರಣ ಬದಲಾಯಿತು. ಇಂತಹ ಹಲವು ಹೋರಾಟಗಳನ್ನು ಸಂಘ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದರು.

ಪ್ರಸ್ತುತ ಹಿಂದೂ ಸಮಾಜ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಸಂಘದ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಮುಂದಿನ ವಿಜಯದಶಮಿವರೆಗೂ ಸಾಮರಸ್ಯ ಜೀವನ, ಕುಟುಂಬ, ಪರಿಸರ, ಶಿಷ್ಟಾಚಾರ ಮತ್ತು ಸ್ವಾತಂತ್ರ್ಯ ಈ ಐದು ಪಂಚ ಪರಿವರ್ತನೆಗಳಿಗೆ ಸಂಘ ಕರೆ ನೀಡಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಿ ಶ್ರಮಿಸಬೇಕಾಗಿದೆ ಎಂದರು.

ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚಾಗಬೇಕಾಗಿದೆ. ಅಲ್ಲದೆ ಹಿಂದೂ ಸಮಾಜ ಆರ್ಥಿಕ ಸದೃಢಗೊಳ್ಳಬೇಕಾಗಿದೆ. ನಾವೆಲ್ಲರೂ ವಿದೇಶ ವಸ್ತುಗಳ ಖರೀದಿ ಬದಲು ಸ್ವದೇಶಿ ವಸ್ತುಗಳನ್ನು ಖರೀದಿಸಿ ಈ ದೇಶದ ಸಂಪನ್ಮೂಲ ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ತರುಣಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ್ ಉಪ್ಪಾರ ಸ್ವಾಗತಿಸಿ, ಕೀರ್ತಿ ಗುಜ್ಜಾರ್ ನಿರೂಪಿಸಿ, ಕೇಶವಮೂರ್ತಿ ವಂದಿಸಿದರು.