ಒಬ್ಬರಿಗೂ ಸಿಗದ ಪರಿಷತ್‌ ಟಿಕೆಟ್‌: ಅಸಮಾಧಾನ

| Published : Jun 03 2024, 01:15 AM IST / Updated: Jun 03 2024, 08:11 AM IST

ಒಬ್ಬರಿಗೂ ಸಿಗದ ಪರಿಷತ್‌ ಟಿಕೆಟ್‌: ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಒಬ್ಬರಿಗೂ ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.

 ಹುಬ್ಬಳ್ಳಿ :  ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಒಬ್ಬರಿಗೂ ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ವಿಧಾನಸಭೆಯಿಂದ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಕಾಂಗ್ರೆಸ್‌ಗೆ ಏಳು ಸ್ಥಾನಗಳು ಸಿಗುವುದು ಖಚಿತವಾಗಿದೆ. ಇದರಲ್ಲಿ ಒಂದು ಸ್ಥಾನವಾದರೂ ಹುಬ್ಬಳ್ಳಿ- ಧಾರವಾಡಕ್ಕೆ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು.

ಹಾಗೆ ನೋಡಿದರೆ ಡಜನ್‌ಗಟ್ಟಲೇ ಆಕಾಂಕ್ಷಿಗಳು ಪರಿಷತ್‌ ಟಿಕೆಟ್‌ಗಾಗಿ ಭಾರೀ ಪ್ರಯತ್ನ ನಡೆಸಿದ್ದರು. ಜತೆಗೆ ಅಲ್ಪಸಂಖ್ಯಾತರ ಕೋಟಾದ ಶಾರ್ಟ್‌ಲಿಸ್ಟ್‌ನಲ್ಲಿ ಅಲ್ತಾಫ್‌ ಹಳ್ಳೂರ ಹಾಗೂ ಇಸ್ಮಾಯಿಲ್‌ ತಮಟಗಾರ ಹೆಸರಿತ್ತು. ಬಳಿಕ ಕೊನೆ ಪಟ್ಟಿಯಲ್ಲಿ ಇಸ್ಮಾಯಿಲ್‌ ತಮಟಗಾರ ಹೆಸರು ಇತ್ತು. ಆದರೆ, ಕೊನೆ ಕ್ಷಣದಲ್ಲಿ ಇಸ್ಮಾಯಿಲ್‌ ತಮಟಗಾರ ಅವರಿಗೆ ಟಿಕೆಟ್ ಕೈತಪ್ಪಿದೆ. ತಮಟಗಾರ ಸಚಿವ ಜಮೀರ್‌ ಅಹ್ಮದ ಖಾನ್‌ ಅವರನ್ನು ಹಿಡಿದುಕೊಂಡು ಲಾಬಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಅಸಮಾಧಾನ:  ಯಾರೊಬ್ಬರಿಗೂ ಟಿಕೆಟ್‌ ಸಿಗದೇ ಇರುವ ಕಾರಣ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಲ್ಲಿನವರಿಗೆ ಟಿಕೆಟ್‌ ಕೊಡದಿದ್ದರೆ ಹೇಗೆ ನಾವು ಪಕ್ಷ ಕಟ್ಟಬೇಕು? ಪ್ರತಿಸಲವೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಕ್ಷದಲ್ಲಿ ಸ್ಥಾನಮಾನ ಸಿಗುತ್ತದೆ ಎಂದು ಪ್ರತಿಸಲ ಸಭೆಗಳಲ್ಲಿ, ಕಾರ್ಯಾಗಾರಗಳಲ್ಲಿ ಹೇಳಲಾಗುತ್ತಿದೆಯಾದರೂ ಪರಿಷತ್‌ ಸೇರಿದಂತೆ ವಿವಿಧ ಉನ್ನತ ಸ್ಥಾನ ನೀಡುವಾಗ ಕಡೆಗಣಿಸಲಾಗುತ್ತದೆ ಎಂದು ಕಾರ್ಯಕರ್ತರು, ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದರ ಬಿಸಿ ಇವತ್ತು ನಗರಕ್ಕೆ ಬಂದಿದ್ದ ಸಚಿವ ದಿನೇಶ ಗುಂಡೂರಾವ್‌ ಅವರಿಗೂ ತಟ್ಟಿದೆ. ಪ್ರತಿಸಲ ಸಚಿವರು ನಗರಕ್ಕೆ ಬಂದಾಗ ನೂರಾರು ಜನರು ಹೋಗಿ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು. ಆದರೆ, ಇವತ್ತು ಸಂಜೆ ಆಗಮಿಸಿದ್ದ ಗುಂಡೂರಾವ್‌ ಅವರನ್ನು ಸ್ವಾಗತಿಸಲು ನಾಲ್ಕೇ ನಾಲ್ಕು ಜನ ಮುಖಂಡರು ಇದ್ದರು. ಮುಖಂಡರ ವಿರುದ್ಧ ಅಸಮಾಧಾನವನ್ನು ಸ್ಥಳೀಯ ಮುಖಂಡರು ಈ ರೀತಿ ಹೊರಹಾಕಿದ್ದಾರೆ. ಬರೀ ಇವರು ಬಂದಾಗ ಜಯಘೋಷಣೆ ಕೂಗಲು ನಾವು ಬೇಕೇ ಎಂಬ ಪ್ರಶ್ನೆ ಇಲ್ಲಿನ ಮುಖಂಡರದ್ದು.