ಸಾರಾಂಶ
ಹೂವಿನಹಡಗಲಿ : ಧರ್ಮಸ್ಥಳ ಹಿಂದೂಗಳ ಪುಣ್ಯಕ್ಷೇತ್ರವಾಗಿದ್ದು, ಇಲ್ಲಸಲ್ಲದ ಮಾಹಿತಿ ನೀಡಿ, ಅದಕ್ಕೆ ಅಪಚಾರ ಮಾಡುವ ಕೆಲಸ ಆಗಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ವರೆಗೂ ಸಿಕ್ಕ ಶವಗಳ ಸಂಖ್ಯೆ ಎಷ್ಟು? ಈಗಾಗಲೇ ಗುರುತಿಸಿರುವ 13ನೇ ಸ್ಥಳವನ್ನು ಬಗೆದಿಲ್ಲ, ಅಲ್ಲಿ ಏನು ಇದೆಯೊ ನಮಗೆ ಮಾಹಿತಿ ಇಲ್ಲ. ಈ ಕ್ಷೇತ್ರದ ಬಗ್ಗೆ ರಾಜ್ಯ ಮತ್ತು ದೇಶದ ತುಂಬೆಲ್ಲ ಸುದ್ದಿಯಾಗಿದೆ. ಜನರಲ್ಲಿ ಅಪನಂಬಿಕೆ ಹುಟ್ಟುವಂತೆ ಮಾಡಿರುವ ವ್ಯಕ್ತಿಗಳು ಸತ್ಯವನ್ನು ಹೇಳಲಿ. ಇಲ್ಲವೇ ರಾಜ್ಯ ಮತ್ತು ದೇಶದ ಜನರ ಮುಂದೆ ಕ್ಷೇಮೆ ಕೇಳಲಿ ಎಂದರು.
ಬಿಜೆಪಿ ಶಿಸ್ತಿನ ಪಕ್ಷ, ಆದರೆ ಇಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದು ಶುದ್ಧೀಕರಣ ಆಗಬೇಕಾದ ಕಾಲ ಸನಿಹವಾಗುತ್ತಿದೆ. ಕೇಂದ್ರದ ನಾಯಕರು ಆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಆಶಯವೂ ಇದೇ ಆಗಿದೆ. ಆದರೆ ನಾವು ಬಿಜೆಪಿ ಸೇರ್ಪಡೆಯಾಗುವುದು ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿ ಚುನಾವಣೆ ಆಯೋಗದ ವಿರುದ್ಧ, ಹೋರಾಟ ಹಮ್ಮಿಕೊಳ್ಳುತ್ತಿರುವುದು ಮೂರ್ಖತನದ ನಿರ್ಧಾರ. ಕಾಂಗ್ರೆಸ್ ಸೋತರೆ ಮತ ಕಳ್ಳತನವಾಗಿದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಹಾಗಾದರೆ ಇಲ್ಲಿಯೂ ಮತಗಳ ಕಳ್ಳತನ ಆಗಿದೆಯೇ? ಎಂಬ ಮರು ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ರಸ್ತೆ ಗುಂಡಿಗೆ ಒಂದು ಬುಟ್ಟಿ ಮಣ್ಣು ಕೂಡಾ ಹಾಕಿಲ್ಲ. ದುರಸ್ತಿ ಕಾರ್ಯ ದೂರದ ಮಾತು. ರಾಜ್ಯದ ಜನರ ಪಾಲಿಗೆ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ. ಗ್ಯಾರಂಟಿ ಜಪ ಮಾಡುತ್ತಾ ರಾಜ್ಯದ ಜನರಿಗೆ ದೊಡ್ಡ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ₹50 ಕೋಟಿ ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಮೊದಲು ಒಂದು ಕೋಟಿ ಅನುದಾನ ನೀಡಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರೂ ಒಂದೇ, ಇಬ್ಬರೂ ವಿಶ್ವದಲ್ಲೇ ಮಹಾನ್ ಸುಳ್ಳುಗಾರರು. ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹೇಳುತ್ತಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕೇಂದ್ರ ನಮ್ಮ ಪಾಲಿನ ತೆರಿಗೆ ಹಣ ನೀಡಿಲ್ಲ ಎಂದು ರಾಜ್ಯದ ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಹಾಗಾಗಿ ಇಬ್ಬರೂ ದೊಡ್ಡ ಸುಳ್ಳುಗಾರರು ಎಂದು ಲೇವಡಿ ಮಾಡಿದರು.
ಈಟಿ ಲಿಂಗರಾಜ, ಶಿರಾಜ್ ಬಾವಿಹಳ್ಳಿ ಇತರರಿದ್ದರು.