ವಿಮಾ ಕ್ಷೇತ್ರದಲ್ಲಿ ಮುಕ್ತ ಅವಕಾಶ ಬೇಡ

| Published : Feb 05 2025, 12:30 AM IST

ಸಾರಾಂಶ

ಒಂದೊಮ್ಮೆ ವಿದೇಶಿ ಕಂಪನಿಗಳು ಭಾರತೀಯ ವಿಮಾ ಕಂಪನಿಗಳ ಪಾಲುದಾರಿಕೆಯಿಂದ ಹೊರ ಬಂದು ತಮ್ಮದೇ ವಿಮಾ ಕಂಪನಿ ಆರಂಭಿಸಿದರೆ, ಆಗ ಈ ನಿರ್ಧಾರವು ಭಾರತೀಯ ವಿಮಾ ಕಂಪನಿಗಳು ಮಾತ್ರವಲ್ಲ, ಭಾರತದ ಆರ್ಥಿಕತೆಯ ಮೇಲೆ ಕೂಡ ಗಂಭೀರ ಪರಿಣಾಮ ಬೀರಲಿದೆ.

ಧಾರವಾಡ:

ಕೇಂದ್ರ ಸರ್ಕಾರವು ನೇರ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಶೇ.74ರಿಂದ ಶೇ. 100ರ ವರೆಗೆ ಹೆಚ್ಚಿಸುವ ಬಜೆಟ್ ಪ್ರಸ್ತಾಪದ ವಿರುದ್ಧ ಮಂಗಳವಾರ ಇಲ್ಲಿಯ ಎಲ್‌ಐಸಿ ಉದ್ಯೋಗಿಗಳು ಅಖಿಲ ಭಾರತ ವಿಮಾ ನೌಕರರ ಸಂಘದ ಮೂಲಕ ಪ್ರತಿಭಟನೆ ನಡೆಸಿದರು.

ಧಾರವಾಡ ವಿಭಾಗದ ವ್ಯಾಪ್ತಿಗೆ ಒಳಪಡುವ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಎಲ್‌ಐಸಿ ಕಚೇರಿಗಳ ಉದ್ಯೋಗಿಗಳು ಮಧ್ಯಾಹ್ನ ಪ್ರತಿಭಟನೆ ನಡೆಸಿ, ಕೇಂದ್ರದ ಬಜೆಟ್ ಮಂಡನೆ ಮಾಡುವಾಗ ಹಣಕಾಸು ಸಚಿವರು ಈ ಅಂಶವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರ ಅನಗತ್ಯ. ಐಆರ್‌ಡಿಎ ಮಸೂದೆ 1999ನ್ನು ಅಂಗೀಕರಿಸುವ ಮೂಲಕ ವಿಮಾ ಕ್ಷೇತ್ರದಲ್ಲಿ ಖಾಸಗಿ ಅವರಿಗೆ ಅವಕಾಶ ನೀಡಲಾಯಿತು. ಆ ಕಾಯ್ದೆ ಪ್ರಕಾರ ಭಾರತದ ಬಂಡವಳಿಗರು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಪಾಲುಗಾರಿಕೆ ಪಡೆದು ವಿಮಾ ವ್ಯವಹಾರ ನಡೆಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ. 26ಕ್ಕೆ ಮಿತಿಗೊಳಿಸಲಾಗಿತ್ತು. ನಂತರದಲ್ಲಿ ಅದನ್ನು ಶೇ.74ಕ್ಕೆ ಏರಿಸಲಾಯಿತು. ದೊಡ್ಡ ಸಂಖ್ಯೆಯ ವಿಮಾ ಕಂಪನಿಗಳು ಬಹುರಾಷ್ಟ್ರೀಯ ವಿಮಾ ಕಂಪನಿಗಳ ಪಾಲುದಾರಿಕೆಯೊಂದಿಗೆ ಜೀವ ವಿಮೆ ಹಾಗೂ ಸಾಮಾನ್ಯ ವಿಮೆ ಎರಡರಲ್ಲೂ ವ್ಯವಹಾರ ನಡೆಸುತ್ತಿವೆ. ವಿಮಾ ಉದ್ದಿಮೆಯಲ್ಲಿನ ಒಟ್ಟು ವಿದೇಶಿ ನೇರ ಬಂಡವಾಳವು ಒಟ್ಟು ಬಂಡವಾಳ ಹೂಡಿಕೆಯ ಶೇ. 32ರ ಆಸುಪಾಸಿನಲ್ಲಿ ಮಾತ್ರ ಇದೆ. ನಿಜ ಸ್ಥಿತಿ ಹೀಗಿರುವಾಗ, ಸರ್ಕಾರ ಏಕೆ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ. 100 ಕ್ಕೆ ಏರಿಸಿ ವಿದೇಶಿ ವಿಮಾ ಕಂಪನಿಗಳಿಗೆ ಭಾರತದ ವಿಮಾ ಕ್ಷೇತ್ರದಲ್ಲಿ ಮುಕ್ತ ಅವಕಾಶ ಮಾಡಿಕೊಡುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಒಂದೊಮ್ಮೆ ವಿದೇಶಿ ಕಂಪನಿಗಳು ಭಾರತೀಯ ವಿಮಾ ಕಂಪನಿಗಳ ಪಾಲುದಾರಿಕೆಯಿಂದ ಹೊರ ಬಂದು ತಮ್ಮದೇ ವಿಮಾ ಕಂಪನಿ ಆರಂಭಿಸಿದರೆ, ಆಗ ಈ ನಿರ್ಧಾರವು ಭಾರತೀಯ ವಿಮಾ ಕಂಪನಿಗಳು ಮಾತ್ರವಲ್ಲ, ಭಾರತದ ಆರ್ಥಿಕತೆಯ ಮೇಲೆ ಕೂಡ ಗಂಭೀರ ಪರಿಣಾಮ ಬೀರಲಿದೆ. ವಿದೇಶಿ ಬಂಡವಾಳಕ್ಕೆ ಈ ರೀತಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಮುಕ್ತ ಅವಕಾಶ ನೀಡುವುದು, ಕ್ರಮಬದ್ಧವಾಗಿ ಬೆಳೆಯುತ್ತಿರುವ ಭಾರತದ ವಿಮಾ ಉದ್ದಿಮೆಯನ್ನು ಹಿಂದುಳಿಯುವಂತೆ ಮಾಡುವುದಷ್ಟೇ ಅಲ್ಲ, ಅವುಗಳ ಗುರಿ ಕೇವಲ ಲಾಭ ಗಳಿಸುವುದಷ್ಟೇ ಆಗಿ ಜನರು ಮತ್ತು ವಿಮಾ ವ್ಯವಹಾರಕ್ಕೆ ನೀಡಬೇಕಾಗಿದ್ದ ಸುರಕ್ಷತೆಯ ಕ್ರಮಗಳು ಹಿಂದಕ್ಕೆ ಸರಿಯುತ್ತವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಜನಸಾಮಾನ್ಯರ ಉಳಿತಾಯದ ಹಣವನ್ನು ಹಣಕಾಸು ದಂಧೆ ಮಾಡುವವರ ಕೈಗೆ ಒಪ್ಪಿಸಬಾರದೆಂಬ ಎಚ್ಚರಿಕೆಯ ಮಾತು ಇದಾಗಿದ್ದು, ಲಾಭವನ್ನೇ ಮುಖ್ಯ ಗುರಿಯಾಗಿಸಿರುವವರ ಮತ್ತು ಬ್ಯಾಂಕರ್‌ಗಳ ಕೈಗೆ ವಿಮಾ ರಂಗ ಒಪ್ಪಿಸಲು ಈಗಿನ ಸರ್ಕಾರವೇ ಮುಂದಾಗಿದೆ. ಜನರ ಉಳಿತಾಯದ ಹಣ ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಕಾರ್ಪೊರೇಟ್ ಪರವಾಗಿರುವ ಆರ್ಥಿಕ ನೀತಿಗಳನ್ನು ಜನಪರವಾಗಿ ಬದಲಾಯಿಸಬೇಕೆಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಉದಯ ಗದಕರ, ಪದಾಧಿಕಾರಿಗಳಾದ ಎನ್.ಕೆ. ಕಾಮತ, ಬಿ.ಎನ್‌. ಪೂಜಾರಿ, ಸದಯು ದೇವರಮನಿ, ಎ.ಎಂ. ಖಾನ್‌ ಮತ್ತಿತರರು ಇದ್ದರು.