ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಾಸ್ಕ್ ಫೋರ್ಸ್ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸಾರ್ವಜನಿಕರ ಕುಡಿಯುವ ನೀರಿಗಾಗಿ ಸರ್ಕಾರದಿಂದ ಕೊರೆಸಲಾಗಿರುವ ಕೊಳವೆ ಬಾವಿಯ 500 ಮೀ. ಅಂತರದಲ್ಲಿ ಖಾಸಗಿ ಕೊಳವೆ ಬಾವಿ ಕೊರೆಯುವುದಕ್ಕೆ ಅವಕಾಶ ನೀಡಬಾರದು. ಒಂದು ಅನಧಿಕೃತ ಕೊಳವೆ ಬಾವಿ ಕೊರೆದಿರುವುದು ಕಂಡು ಬಂದರೆ ತಕ್ಷಣ ಕೊಳವೆ ಬಾವಿ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ನಿರ್ದೇಶಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ ಗ್ರಾಮದ ಜನರ ಕುಡಿವ ನೀರಿಗೆ ಕೊರೆಸಲಾದ ಕೊಳವೆ ಬಾವಿಯಲ್ಲಿ ಉತ್ತಮ ನೀರು ಬಂದಿದೆ ಎಂದ ತಕ್ಷಣ ಸುತ್ತಮುತ್ತಲಿನ ಖಾಸಗಿ ಜಮೀನವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುತ್ತಾರೆ. ಇದರಿಂದ ಸರ್ಕಾರದ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಗಲಿದೆ. ಇದಕ್ಕೆ ಅವಕಾಶ ನೀಡಬೇಡಿ. ಸರ್ಕಾರದ ಕೊಳವೆ ಬಾವಿಯ 500 ಮೀ. ಅಂತರದಲ್ಲಿ ಹೊಸ ಕೊಳವೆ ಬಾವಿ ತೆಗೆಸಲು ಅವಕಾಶ ನೀಡಬೇಡಿ. ಒಂದು ವೇಳೆ ಅನಧಿಕೃತ ಕೊಳವೆ ಬಾವಿ ತೆಗೆದರೆ ತಕ್ಷಣ ಕೊಳವೆ ಬಾವಿಯನ್ನು ಸರ್ಕಾರದ ವಶಕ್ಕೆ ಪಡೆಯಿರಿ ಎಂದು ತಿಳಿಸಿದರು.ಮೆಸ್ಕಾಂ ಅಧಿಕಾರಿಗೆ ತರಾಟೆ
ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತೀರಾ ಆದರೆ, ಈಗ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಈಗ ಆ ಸಮಸ್ಯೆ ಈ ಸಮಸ್ಯೆ ಎನ್ನುತ್ತೀರಾ ಎಂದು ಮೆಸ್ಕಾಂ ಎಂಜಿನಿಯರ್ ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾವ ಗ್ರಾಪಂನಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಎಂಬುದನ್ನು ಪಟ್ಟಿಮಾಡಿ ಸಮಸ್ಯೆ ಪರಿಹಾರಕ್ಕೆ ಕಾರ್ಯ ಮಾಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ನಿರ್ದೇಶಿಸಿದರು.
ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲೆಗೆ ₹4 ಕೋಟಿ ಅನುದಾನ ನೀಡಲಾಗಿದೆ. ಈವರೆಗೆ ₹1.5 ಕೋಟಿ ಮಾತ್ರ ವೆಚ್ಚವಾಗಿದೆ. ಇನ್ನೂ ₹2.5 ಕೋಟಿ ಬಾಕಿ ಇದೆ. ಕಾಮಗಾರಿ ಕೈಗೊಳ್ಳುವ ಮೊದಲು ಕಡ್ಡಾಯವಾಗಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅನುಮತಿ ಪಡೆಯಬೇಕು ಎಂದರು.
ಕನಿಷ್ಠ 3ದಿನಗಳಿಗೆ ಒಂದು ಬಾರಿ ನೀರು ನೀಡುವ ವ್ಯವಸ್ಥೆ ಆಗಬೇಕು. ವಾರಕ್ಕೆ ಒಂದು ಬಾರಿ ನೀರು ಕೊಟ್ಟರೆ ಬೇರೆ ರೀತಿ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, ಎಚ್ಚರಿಕೆ ವಹಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ (ಪ್ರಭಾರಿ) ಪೂರ್ಣಿಮಾ, ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿದಾನಂದ್ ಮೊದಲಾದವರಿದ್ದರು.
-- ಬಾಕ್ಸ್--ಗೋಮಾಳದಲ್ಲಿ ಕೊಳವೆಗೆ ಗ್ರಾಮಸ್ಥರ ಅಡ್ಡಿ
ಮಳೆ ಕೊರತೆಯಿಂದ ಹಲವು ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ನೀರಿನ ಲಭ್ಯತೆ ಇರುವ ಕಡೆ ಕೊಳವೆ ಬಾವಿ ತೆಗೆದು ನೀರು ಪೂರೈಸಲಾಗುತ್ತಿದೆ. ತಾಲೂಕಿನ ಕರ್ತಿಕೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ, ಪಕ್ಕದ ಬೀರದೇವರಹಳ್ಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ತೆಗೆಯಲು ಸರ್ಕಾರಿ ಗೋಮಾಳದಲ್ಲಿ ಪಾಯಿಂಟ್ ಮಾಡಲಾಗಿದೆ. ಆದರೆ, ಬೀರದೇವರಹಳ್ಳಿ ಗ್ರಾಮಸ್ಥರು ಅಡ್ಡಿ ಪಡಿಸುತ್ತಿದ್ದಾರೆ ಎಂದು ತಾಪಂ ಇಒ ವಿಜಯ್ ಕುಮಾರ್ ಸಭೆ ಗಮನಕ್ಕೆ ತಂದರು.ಆಗ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಡ್ಡಿ ಪಡಿಸುವವರ ವಿರುದ್ಧ ಈ ವರೆಗೆ ಏಕೆ ಪೊಲೀಸ್ ದೂರು ನೀಡಿ ಎಫ್‌ಐಆರ್ ದಾಖಲಿಸುವ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದರು. ಕುಡಿಯುವ ನೀರಿನ ವಿಚಾರಕ್ಕೆ ಯಾರೇ ಅಡ್ಡಿ ಪಡಿಸಿದರೂ ಮೂಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.