ಚುನಾವಣೆಗಳ ಸಮಯದಲ್ಲಿ ರಾಜಕೀಯ ವೈಷಮ್ಯಗಳನ್ನು ತರುವುದರಿಂ ಸಂಘದ ಬೆಳವಣಿಗೆಗೆ ಕುಂಠಿತವಾಗುತ್ತದೆ. ಆದ್ದರಿಂದ ಸಹಕಾರ ಸಂಘಗಳ ಚುನಾವಣೆಯಲ್ಲಿ ರಾಜಕೀಯ ತರದೇ ಸಾಮಾನ್ಯವಾಗಿ ಚುನಾವಣೆಗಳು ನಡೆಸಬೇಕಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸಹಕಾರ ಸಂಘಗಳು ರೈತರ ಮತ್ತು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಇವುಗಳ ಚುನಾವಣೆಯಲ್ಲಿ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ರಾಜಕೀಯೇತರವಾಗಿ ಚುನಾವಣೆಗಳು ನಡೆದಲ್ಲಿ ಸಹಕಾರ ಸಂಘಗಳು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ಹಾಗೂ ಗುಡಿಬಂಡೆ ತಾಲೂಕು ಹಾಲು ಉತ್ಪಾಕದರ ಸಹಕಾರ ಸಂಘಗಳ ವತಿಯಿಂದ ಆಯೋಜಿಸಿದ್ದ ಚಿಮುಲ್ ನೂತನ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ಪಕ್ಷಾತೀತವಾಗಿ ಕೆಲಸ ಮಾಡಿದಾಗ ಮಾತ್ರ ಸಾಮಾನ್ಯ ಜನರಿಗೆ ಅದರ ಸೌಲಭ್ಯಗಳು ತಲುಪಲು ಸಾಧ್ಯ.

ಚುನಾವಣೆಗಳ ಸಮಯದಲ್ಲಿ ರಾಜಕೀಯ ವೈಷಮ್ಯಗಳನ್ನು ತರುವುದರಿಂ ಸಂಘದ ಬೆಳವಣಿಗೆಗೆ ಕುಂಠಿತವಾಗುತ್ತದೆ. ಆದ್ದರಿಂದ ಸಹಕಾರ ಸಂಘಗಳ ಚುನಾವಣೆಯಲ್ಲಿ ರಾಜಕೀಯ ತರದೇ ಸಾಮಾನ್ಯವಾಗಿ ಚುನಾವಣೆಗಳು ನಡೆಸಬೇಕಿದೆ. ಇನ್ನೂ ಸಹಕಾರ ಕ್ಷೇತ್ರಗಳು ರೈತರಿಗೆ ಸಂಬಂಧಿಸಿದೆ. ಹೈನಯಗಾರಿಕೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಸರ್ಕಾರದಿಂದ ಹೈನುಗಾರಿಕೆಗೆ ಸಿಗಬೇಕಾದ ಸೌಲಭ್ಯಗಳನ್ನು ಹಾಗೂ ಹೊಸ ಕಾರ್ಯಕ್ರಮಗಳನ್ನು ತರಲು ಪ್ರಯತ್ನಿಸುತ್ತೇನೆ. ನಮ್ಮ ಕ್ಷೇತ್ರದವರೇ ಚಿಮುಲ್ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ನಮ್ಮ ಭಾಗದಲ್ಲಿ ಹೈನುಗಾರಿಕೆ ಮತ್ತಷ್ಟು ಅಭಿವೃದ್ದಿಯಾಗಲಿದೆ ಎಂದರು.

ಬಳಿಕ ಚಿಮುಲ್ ನೂತನ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ನಮ್ಮ ಭಾಗದಲ್ಲಿ ಹೈನುಗಾರಿಕೆಯನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ. ಈಗಾಗಲೇ ಗುಡಿಬಂಡೆ ಸೇರಿದಂತೆ ಹಲವು ಕಡೆ ಮೇವು ಬೀಜಗಳನ್ನು ರೈತರಿಗೆ ವಿತರಿಸುವ ಜೊತೆಗೆ ಅದನ್ನು ಬೆಳೆಯಲು ಪ್ರೋತ್ಸಾಹಧನ ಸಹ ನೀಡಲಾಗುತ್ತದೆ. ರೈತರು ಸಹ ಹೆಚ್ಚು ಹೆಚ್ಚು ಹಾಲು ಪೂರೈಕೆ ಮಾಡಲು ಕ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ ಮಾತನಾಡಿ, ಗುಡಿಬಂಡೆ ಭಾಗದಿಂದ ಹಾಲು ಪೂರೈಕೆ ಕಡಿಮೆಯಿದೆ. ಹಾಲು ಪೂರೈಕೆ ಹಾಗೂ ಗುಣಮಟ್ಟದ ಹಾಲು ಪೂರೈಕೆ ಮಾಡಲು ಹೈನುಗಾರರು ಮುಂದಾಗಬೇಕು. ಈ ಸಂಬಂಧ ಶಾಸಕರು ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಸಾಲ ಸೌಲಭ್ಯ ಕೊಡಿಸಲು ಯೋಜನೆ ರೂಪಿಸಬೇಕು. ಹೈನುಗಾರರು ಸಹ ತಮ್ಮ ರಾಸುಗಳಿಗೆ ವಿಮೆ ಮಾಡಿಸಬೇಕು. ನನ್ನ ಅವಧಿಯಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಮಾಡುವ ಗುರಿಯನ್ನು ಹೊಂದಿದ್ದು, ಅದಕ್ಕೆ ಹಾಲು ಉತ್ಪಾದಕರ ಸಂಘಗಳು ಸಂಪೂರ್ಣ ಸಹಕಾರ ನೀಡಬೇಕು ಎಂದರು,

ಕಾರ್ಯಕ್ರಮದಲ್ಲಿ ಚಿಮುಲ್ ಶಿಬಿರ ಕಚೇರಿಯ ಸಿಬ್ಬಂದಿ ನವ್ಯ, ಧರಣೇಂದ್ರ ಸೇರಿದಂತೆ ತಾಲೂಕಿನ ವಿವಿಧ ಹಾಲು ಉತ್ಪಾದಕ ಸಹಕಾರ ಸಂಘಗಳ ನಿರ್ದೇಶಕರು, ಪದಾಧಿಕಾರಿಗಳು, ಕಾರ್ಯದರ್ಶಿಗಳು ಹಾಜರಿದ್ದರು.

01ಜಿಯುಡಿ1: ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಚಿಮುಲ್ ನೂತನ ನಿರ್ದೇಶಕರ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.