ಹುಬ್ಬಳ್ಳಿ:
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರು ನಡೆಸಿದ ಹೋರಾಟದಲ್ಲಿ ಬಿಜೆಪಿ ರಾಜಕಾರಣ ಮಾಡಿಲ್ಲ. ಹಾಗೆ ರಾಜಕಾರಣ ಮಾಡುವ ಅಗತ್ಯವೂ ಬಿಜೆಪಿಗಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.ನಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಗೆ ಅವಕಾಶ ನಿರಾಕರಿಸುವ ಮೂಲಕ ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿತ್ತು. ಈ ಹಂತದಲ್ಲಿ ವಿದ್ಯಾರ್ಥಿಗಳು ನಮ್ಮ ಹತ್ತಿರ ಬಂದು ಮನವಿ ಮಾಡಿದ್ದರು. ಹಾಗಾಗಿ ಬಿಜೆಪಿಯು ಪ್ರತಿಭಟನೆಗೆ ಅನುಮತಿ ಪಡೆದು ಹೋರಾಟಕ್ಕೆ ಬೆಂಬಲಿಸಿದೆವು. ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ ಎಂದರು.
ಯುವಕರ ಹೋರಾಟಕ್ಕೆ ಸರ್ಕಾರ ಅಕ್ಷರಶಃ ನಡುಗಿದೆ. ಪ್ರತಿಭಟನೆ ಮುಗಿಯುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ವೇದಿಕೆ ಮೂಲಕ ಹುದ್ದೆ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದೇ ಇದಕ್ಕೆ ಸಾಕ್ಷಿ. ಹಣಕಾಸು ಇಲಾಖೆ ನೀಡಿದ ಅನುಮೋದನೆಯಂತೆ ಸರ್ಕಾರ, ಮೀಸಲು ಕುರಿತಾಗಿ ಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕ ಪ್ರಕ್ರಿಯೆ ಕೈಗೊಳ್ಳಬಹುದು. ವಿನಾಕಾರಣ ಕೋರ್ಟ್ ಹೆಸರಿನಲ್ಲಿ ನೇಮಕಾತಿ ಮುಂದೂಡುತ್ತಲೆ ಇದೆ ಎಂದು ಟೀಕಿಸಿದರು.ಕಳೆದ 3 ವರ್ಷಗಳಲ್ಲಿ 40 ಸಾವಿರದಷ್ಟು ವಿವಿಧ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಿರುವುದು ಸುಳ್ಳು. 17 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸುಳ್ಳರಾಮಯ್ಯ ಎನ್ನುವಂತಾಗಬಾರದು. ಹೋರಾಟ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳ ನೋವು ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಕೇಂದ್ರ ಸರ್ಕಾರ 11 ವರ್ಷದಲ್ಲಿ 7.30 ಲಕ್ಷ ಹುದ್ದೆ ಭರ್ತಿ ಮಾಡಿದೆ. ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಗಳ ಮೂಲಕ ಉದ್ಯೋಗ ಸೃಷ್ಟಿ ನಡೆದಿದೆ. ಈ ವರೆಗೆ 17 ಕೋಟಿ ಪಿಎಂ ಖಾತೆ ಓಪನ್ ಆಗಿರುವುದು ಉದ್ಯೋಗ ಸಿಕ್ಕಿದೆ ಎಂದೇ ಅರ್ಥ. ಕೇಂದ್ರದ ಶೇ 10ರಷ್ಟಾದರೂ ನೇಮಕಾತಿ ಮಾಡಿಕೊಳ್ಳಬೇಕೆಂದು ಹೇಳಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇವಲ ಟೀ ಶರ್ಟ್ ಹಾಕಿಕೊಂಡು ಓಡಾಡುವದರಿಂದ ಯುವಕರ ಧ್ವನಿ ಆಗಲು ಸಾಧ್ಯವಿಲ್ಲ. ಖಾಲಿ ಹುದ್ದೆಗಳ ನೇಮಕಕ್ಕೆ ಕ್ರಮಗೈಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಖಾಲಿ ಹುದ್ದೆಗೆ ಸಂಬಂಧಿಸಿ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ರವಿ ನಾಯಕ ಹಾಗೂ ಇತರರು ಇದ್ದರು.ಬಾಕ್ಸ್...ಕಾಂಗ್ರೆಸ್ಸಿನಿಂದ ರಾಜಕೀಯ ಓಲೈಕೆಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಆ್ಯಂಬುಲೆನ್ಸ್ ಮತ್ತು ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ನೀಡುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲೂ ಮುದ್ರಿಸಿರುವುದು ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿಯಾದ ರಾಜಕೀಯ ಓಲೈಕೆಯಿಂದ ಭಾಷಾ ಬಾಂಧವರ ನಡುವೆ ಕಾಂಗ್ರೆಸ್ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಹೋರಾಟಕ್ಕೆ ಬಿಜೆಪಿ ಬೆಂಬಲಅರವಿಂದ ಬೆಲ್ಲದ ಜತೆ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಕಾಂತಕುಮಾರ, ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಕನಿಷ್ಠ ಶೇ. 50ರಷ್ಟಾದರೂ ಹುದ್ದೆ ಭರ್ತಿ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಜಿಪಂ, ತಾಪಂ ಚುನಾವಣೆ ಅಧಿಸೂಚನೆ ಆಗಲಿದೆ. ಅಲ್ಲಿಗೆ ಮತ್ತಷ್ಟು ತಿಂಗಳು ಮುಂದಕ್ಕೆ ಹೋಗುತ್ತದೆ. ಹಾಗಾಗಿ ಹಣಕಾಸು ಇಲಾಖೆ ನೀಡಿದ ಅನುಮೋದನೆಯಂತೆ ನೇಮಕಾತಿಗೆ ಒಂದು ವಾರದೊಳಗೆ ನೋಟಿಫಿಕೇಶನ್ ಹೊರಡಿಸಬೇಕೆಂದು ಒತ್ತಾಯಿಸಿದರು.