ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪುತ್ತೂರಿನಲ್ಲಿ ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಈ ಕುರಿತು ಸ್ಪಷ್ಟನೆ ನೀಡಿದ್ದು, ಶಾಸಕನ ನೆಲೆಯಲ್ಲಿ ನನ್ನನ್ನು ಕಾರ್ಯಕ್ರಮಕ್ಕೆ ಕರೆದಿದ್ದರು. ನಾನು ಯಾವುದೇ ಪಕ್ಷದ ಬ್ಯಾನರ್ ಹಾಕಿದ ಕಾರ್ಯಕ್ರಮ ಅಥವಾ ಬಿಜೆಪಿ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್‌ನ ಕಮಿಟಿಯವರು ಬಂದು ನನಗೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದರು. ಅವರಲ್ಲಿ ನನಗೆ ಚುನಾವಣೆ ವೇಳೆ ಸಹಾಯ ಮಾಡಿದ ಹಿಂದೂಗಳೂ ಇದ್ದಾರೆ. ಚುನಾವಣೆ ಸಹಕಾರ ಎಂದರೆ ಹಣ ಕೊಟ್ಟಿದ್ದಲ್ಲ. ನನಗೆ ಮತ ಹಾಕಿದ ಹಾಗೂ ಮತ ಹಾಕಿಸಿದ ಹಿಂದೂಗಳು ಇದ್ದಾರೆ. ಅವರು ಕರೆದ ಹಿನ್ನೆಲೆಯಲ್ಲಿ ಹೋಗಿ ಬಂದಿದ್ದೇನೆ, ಆದರೆ ಭಾಷಣ ಮಾಡಿಲ್ಲ. ಇದರ ಮಾಹಿತಿ ಇಲ್ಲದವರು ಹಾಗೂ ತಪ್ಪು ಮಾಹಿತಿ ಇರುವವರು ಮಾತನಾಡುತ್ತಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ ಕೋಮುವಾದಿ ಸಂಘಟನೆ ಅಂತ ಕೆಲವರು ಹೇಳಬಹುದು. ಸರ್ಕಾರ ಕೋಮುವಾದಿ ಸಂಘಟನೆ ಎಂದರೆ ಅದನ್ನು ಬ್ಯಾನ್ ಮಾಡಬೇಕಾಗುತ್ತದೆ. ಆದರೆ ಅಂಥದ್ದೇನೂ ಆಗಿಲ್ಲ ಎಂದು ಹೇಳಿದ ಅಶೋಕ್ ಕುಮಾರ್ ರೈ, ನಾನು ಆ ಕಾರ್ಯಕ್ರಮಕ್ಕೆ ಹೋಗಿ ತಪ್ಪು ಮಾಡಿದೆ ಅನಿಸುತ್ತಿಲ್ಲ. ಶಾಸಕರಾಗಿ ನಾವು ಪ್ರತಿಜ್ಞೆ ಸ್ವೀಕರಿಸುವಾಗ ಎಲ್ಲರನ್ನೂ ಒಂದೇ ರೀತಿ ಕಾಣುವುದಾಗಿ ಹೇಳುತ್ತೇವೆ. ಕೋಮುವಾದ, ಧರ್ಮದ ವಿಚಾರಗಳು ಅದರಲ್ಲಿ ಬರಬಾರದು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ನಾನು ಯಾವುದೇ ವಿಚಾರ ಹೇಳಲ್ಲ ಎಂದರು.ನಾನು 22 ವರ್ಷ ಬಿಜೆಪಿಯಲ್ಲಿದ್ದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೇಳಿದೆ, ಕೊಡಲಿಲ್ಲ. ವಿಎಚ್‌ಪಿ ಕಾರ್ಯಕ್ರಮಕ್ಕೆ ಹೋದ ಮಾತ್ರಕ್ಕೆ ಬಿಜೆಪಿಗೆ ಹೋಗ್ತೇನೆ ಎನ್ನುವುದು ಸರಿಯಲ್ಲ. ನನ್ನನ್ನು ಶಾಸಕ ಮಾಡಿದ ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಧರ್ಮ ನನಗೆ ಬೇಕು, ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ ಎಂದು ಅಶೋಕ್ ರೈ ಹೇಳಿದರು.ಅರುಣ್ ಪುತ್ತಿಲ ಮತ್ತು ಹಿಂದೂ ಸಂಘಟನೆಯವರ ನಡುವೆ ನಡೆದಿರುವ ಗಲಾಟೆ ಅವರ ಪಕ್ಷದ ಒಳಗಿನ ಬಿಕ್ಕಟ್ಟು. ನನಗೆ ಅಭಿವೃದ್ಧಿ ಕೆಲಸ ಮಾಡಲು ಜನಾದೇಶ ಸಿಕ್ಕಿದೆ. ಗುರಿ ಇಟ್ಟುಕೊಂಡು ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿತ್ತಾ ವಿಎಚ್‌ಪಿ?ಕಳೆದ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧಿಸಿದ್ದ ಅಶೋಕ್ ಕುಮಾರ್ ರೈ ಪರವಾಗಿ ವಿಶ್ವ ಹಿಂದೂ ಪರಿಷತ್ ಕೆಲಸ ಮಾಡಿತ್ತಾ ಎಂಬ ಸಂಶಯಕ್ಕೆ ಇದೀಗ ಅಶೋಕ್ ರೈ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.
‘ವಿಶ್ವ ಹಿಂದೂ ಪರಿಷತ್‌ನ ಕಮಿಟಿಯವರು ಬಂದು ನನಗೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದರು. ಅದರಲ್ಲಿ ನನಗೆ ಮತ ಹಾಕಿದ ಹಾಗೂ ಮತ ಹಾಕಿಸಿದ ಹಿಂದೂಗಳು ಇದ್ದಾರೆ’ ಎಂದಿರುವುದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.ಕಳೆದ ಚುನಾವಣೆ ಸಂದರ್ಭ, ಮಾಜಿ ಬಿಜೆಪಿಗ ಅಶೋಕ್ ರೈ ದಿಢೀರನೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.