ಪ್ರಜ್ವಲ್‌ ರೇವಣ್ಣರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ: ಜೋಶಿ

| Published : Jun 02 2024, 01:45 AM IST / Updated: Jun 02 2024, 09:22 AM IST

Prahlada Joshi

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ಬಹುದೊಡ್ಡ ಹಗರಣವಾಗಿದೆ. ಸರ್ಕಾರದ ಹಸ್ತಕ್ಷೇಪವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯಾವ ಕಾರಣಕ್ಕೆ ನಿಗಮದ ಹಣ ಬೇರೆ ಖಾತೆಗೆ ವರ್ಗಾವಣೆಯಾಯಿತು ಎಂದು ಸರ್ಕಾರ ಹೇಳಿಲ್ಲ.

ಹುಬ್ಬಳ್ಳಿ:  ಸಂಸದ ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂತಹ ಅಪರಾಧ ಮಾಡಿದ್ದಾರೆ. ಹೀಗಾಗಿ ಅವರು ಕ್ಷಮೆಗೆ ಅರ್ಹರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ರನ್ನು ಎಸ್ಐಟಿ ವಶಕ್ಕೆ ನೀಡಲಾಗಿದೆ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಭಾರತದಲ್ಲಿ ಮಹಿಳೆಯರನ್ನು ನಾವು ಗೌರವದಿಂದ ಕಾಣುತ್ತೇವೆ. ಈ ರೀತಿಯ ಘಟನೆ ನಡೆದಿರುವುದು ಖಂಡನೀಯ. ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಸೂಕ್ತ ಕ್ರಮಕೈಗೊಳ್ಳಲಿದೆ ಎನ್ನುವ ಭರವಸೆಯಿದೆ. ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಗರಿಷ್ಠ ಶಿಕ್ಷೆ ಕೊಡುವಂತಾಗಬೇಕು ಎಂದರು.

ಶಿಕ್ಷೆ ಆಗಲೇಬೇಕು:  ಪ್ರಜ್ವಲ್ ರಾಜ್ಯದ ಕ್ಷಮೆ ಕೇಳಿದ ವಿಚಾರಕ್ಕೆ ಉತ್ತರಿಸಿದ ಜೋಶಿ, ಆರೋಪಿ ಸ್ಥಾನದಲ್ಲಿದ್ದವರು ಕ್ಷಮೆ ಕೇಳಿದ ಕೂಡಲೇ ಬಿಟ್ಟುಬಿಡಲು ಆಗುತ್ತದೆಯೇ?. ಏಕೆ ಕ್ಷಮೆ ಕೇಳಿದರು ಎಂಬುದನ್ನು ಉತ್ತರಿಸಲಿ. ಕ್ಷಮೆ ಕೇಳುವುದಿದ್ದರೆ ಸಂತ್ರಸ್ತೆಯರ ಬಳಿ ಕ್ಷಮೆ ಕೇಳಲಿ. ಪ್ರಜ್ವಲ್ ಕ್ಷಮೆಗೆ ಅರ್ಹರಲ್ಲ. ಅವರಿಗೆ ಶಿಕ್ಷೆ ಆಗಲೇ ಬೇಕು ಎಂದರು.

ತೆಲಂಗಾಣ ಚುನಾವಣೆಗೆ ಬಳಕೆ:

ವಾಲ್ಮೀಕಿ ನಿಗಮದಲ್ಲಿ ಬಹುದೊಡ್ಡ ಹಗರಣವಾಗಿದೆ. ಸರ್ಕಾರದ ಹಸ್ತಕ್ಷೇಪವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯಾವ ಕಾರಣಕ್ಕೆ ನಿಗಮದ ಹಣ ಬೇರೆ ಖಾತೆಗೆ ವರ್ಗಾವಣೆಯಾಯಿತು ಎಂದು ಸರ್ಕಾರ ಹೇಳಿಲ್ಲ. ಈ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಲ್ಲಿ ಈ ಹಗರಣ ಮುಚ್ಚಿ ಹೋಗುತ್ತಿತ್ತು. ಇದು ದಪ್ಪ ಚರ್ಮದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಸಿಬಿಐಗೆ ವಹಿಸಿ:

ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ದುಡ್ಡನ್ನು ಹೊಡೆದು ಚುನಾವಣೆಗೆ ಬಳಸುವಂತಹ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ. ಮುಖ್ಯಮಂತ್ರಿ ಸೇರಿದಂತೆ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಬೇಕು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿ. ಬ್ಯಾಂಕಿನ ಹಗರಣ ಸಾಮಾನ್ಯವಾಗಿ ಸಿಬಿಐಗೆ ಹೋಗುತ್ತೆ. ಇಷ್ಟು ದೊಡ್ಡ ಹಗರಣ ಆಗಿರುವುದರಿಂದ ರಾಜ್ಯ ಸರ್ಕಾರವೇ ಸಿಬಿಐಗೆ ವಹಿಸಲಿ ಎಂದರು.

ರಾಜೀನಾಮೆ ಪಡೆಯಲಿ:

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಪ್ರಕರಣಕ್ಕೂ ಈ ಹಗರಣಕ್ಕೂ ಬಹಳ ವ್ಯತ್ಯಾಸವಿದೆ. ಈಶ್ವರಪ್ಪ ಪ್ರಕರಣದಲ್ಲಿ ಯಾವುದೇ ದಾಖಲೆಗಳಿರಲಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆಯ ದಾಖಲೆಗಳಿವೆ. ಅವರು ಏನೇನು ಮಾಡಬೇಕು ಅದೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಸಾಕ್ಷಿ ನಾಶ, ಬೆದರಿಸುವ ಕೆಲಸವಾಗುತ್ತಿದೆ. ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ಕೊಡಬೇಕು, ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಬೇಕು ಎಂದು ಜೋಶಿ ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಶೇ. 100 ಪರ್ಸೆಂಟ್ ಭ್ರಷ್ಟಾಚಾರದಲ್ಲಿದೆ. ಗುತ್ತಿಗೆದಾರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್ ಪಾಟೀಲ ಮಾದರಿಯಲ್ಲಿ ಆತ್ಮಹತ್ಯೆಯಾಗಿದೆ. ಮತ್ತೊಂದು ಕಡೆ ಚೆಕ್‌ ಮೂಲಕ ಭ್ರಷ್ಟಾಚಾರವಾಗಿದೆ. ಇದಕ್ಕಿಂತ ಗಂಭೀರತೆ ಏನು ಬೇಕು. ಈ ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ನಗರವಾಲಾ ಪ್ರಕರಣ ಆಗಿತ್ತು. ಇದು ಅದಕ್ಕೆ ಹೋಲುತ್ತದೆ ಎಂದರು.

ಕೇರಳದಲ್ಲಿ ನನ್ನ ಹಾಗೂ ಸಿಎಂ ನಾಶಕ್ಕಾಗಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಆರೋಪಕ್ಕೆ ತಿರುಗೇಟು ನೀಡಿದ ಜೋಶಿ, ನೀವು ಸರಿಯಾಗಿದ್ದರೆ ಯಾಕೆ ಆಗುತ್ತೆ. ದೇವರು ಇರುವುದು ಆಶೀರ್ವಾದ ಮಾಡಲು, ಯಾವುದೇ ಕೆಡಕು ಮಾಡಲು ಅಲ್ಲ. ನಾನು ಗೆಲ್ಲಲಿ ಎಂದು ಪೂಜೆ ಮಾಡುತ್ತೇನೆ. ಮತ್ತೊಬ್ಬರು ಸೋಲಲಿ ಎಂದು ಪೂಜೆ ಮಾಡಿದರೆ ದೇವರು ಮಾನ್ಯ ಮಾಡುವುದಿಲ್ಲ ಎಂದರು.ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಅಂತರದಿಂದ ಗೆಲವು ಸಾಧಿಸುವ ವಿಶ್ವಾಸವಿದೆ. ಮತದಾರರು ಈ ಬಾರಿಯೂ ನನ್ನ ಪರವಾಗಿದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.