ಪರೀಕ್ಷೆ ಬರೆದು ಕೆಲವೇ ಗಂಟೆಗಳಲ್ಲಿ ವಿಶ್ವವಿದ್ಯಾಲಯಗಳು ಫಲಿತಾಂಶವನ್ನು ಪ್ರಕಟಿಸಿರುವುದನ್ನು ನೋಡಿದ್ದೇವೆ. ಆದರೆ, ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎರಡು ಮೂರು ತಿಂಗಳಾದರೂ ಇನ್ನೂ ಫಲಿತಾಂಶ ಪ್ರಕಟಿಸಿಲ್ಲ, ಅಸಲಿಗೆ ಇಲ್ಲಿ ಇನ್ನೂ ಮೌಲ್ಯಮಾಪನವೇ ಆಗಿಲ್ಲ!
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಪರೀಕ್ಷೆ ಬರೆದು ಕೆಲವೇ ಗಂಟೆಗಳಲ್ಲಿ ವಿಶ್ವವಿದ್ಯಾಲಯಗಳು ಫಲಿತಾಂಶವನ್ನು ಪ್ರಕಟಿಸಿರುವುದನ್ನು ನೋಡಿದ್ದೇವೆ. ಆದರೆ, ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎರಡು ಮೂರು ತಿಂಗಳಾದರೂ ಇನ್ನೂ ಫಲಿತಾಂಶ ಪ್ರಕಟಿಸಿಲ್ಲ, ಅಸಲಿಗೆ ಇಲ್ಲಿ ಇನ್ನೂ ಮೌಲ್ಯಮಾಪನವೇ ಆಗಿಲ್ಲ! ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಕಳೆದ ಜನವರಿಯಲ್ಲೇ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಫೆಬ್ರವರಿಯಲ್ಲಿ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ತರಗತಿಗಳು ಆರಂಭಗೊಂಡಿವೆ. ಮೊದಲ ಹಾಗೂ ಮೂರನೇ ಸೆಮಿಸ್ಟರ್‌ಗೆ ಪರೀಕ್ಷೆ ಬರೆದು ಎರಡು ತಿಂಗಳು ಕಳೆದರೂ ಇನ್ನೂ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲು ಸಾಧ್ಯವಾಗಿಲ್ಲ.
ಮೌಲ್ಯಮಾಪನವೇ ನಡೆದಿಲ್ಲ!:ಜನವರಿಯಲ್ಲೇ ಪರೀಕ್ಷೆ ನಡೆದರೂ ಕುವೆಂಪು ವಿವಿ ಇನ್ನೂ ಮೌಲ್ಯಮಾಪನವೇ ನಡೆಸಿಲ್ಲ. ಈ ಹಿಂದೆ ಮೌಲ್ಯಮಾಪನ ಮಾಡಿದ ಉಪನ್ಯಾಸಕರಿಗೆ ಮೌಲ್ಯಮಾಪನ ವೇತನ ನೀಡಿಲ್ಲ. ಜೊತೆಗೆ ಅವರಿಗೆ ನೀಡುತ್ತಿರುವ ವೇತನ ಜೊತೆಗೆ ಭತ್ಯೆಯೂ ಕಡಿಮೆ ಇರುವುದರಿಂದ ಮೌಲ್ಯಮಾಪನ ಮಾಡಲು ಉಪನ್ಯಾಸಕರು ಮುಂದೆ ಬರುತ್ತಿಲ್ಲ. ಹೀಗಾಗಿ ಪರೀಕ್ಷೆ ಮುಗಿದು ಎರಡು ತಿಂಗಳಾದರೂ ಇನ್ನೂ ಮೌಲ್ಯಮಾಪನ ಪ್ರಕ್ರಿಯೆಯೇ ಆರಂಭವಾಗಿಲ್ಲ.
ಈ ಮಧ್ಯೆ ಎನ್‌ಇಟಿ/ ಎಸ್ಎಇಟಿ ಪರೀಕ್ಷೆಗೆ ಅರ್ಜಿ ಆಹ್ವಾನ ಮಾಡಿದರೆ ಎಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೋ ಎಂಬ ಭಯದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಯಾವಾಗ ಎಂದು ಉನ್ಯಾಸಕರನ್ನು ಕೇಳುತ್ತಿದ್ದಾರೆ. ಇತ್ತ ಕುವೆಂಪು ವಿವಿಯಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ಡಬಲ್ ವ್ಯಾಲೂವೇಶನ್ ಬದಲಿಗೆ ಏಕರೂಪ ಪರೀಕ್ಷಾ ಪದ್ದತಿಯನ್ನು ಅನುಸರಿಸಲು ಇಲ್ಲಿನ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ, ಇದನ್ನು ಏಕಾಏಕಿ ಜಾರಿಗೆ ತರುವುದು ಅಷ್ಟು ಸುಲಭವಿಲ್ಲ. ಏಕರೂಪ ಪರೀಕ್ಷಾ ಪದ್ದತಿಯನ್ನು ಜಾರಿಗೆ ತರಬೇಕಾದರೆ ಮೊದಲು ತಿದ್ದುಪಡಿ ಮಾಡಿ, ಶಾಸನಾತ್ಮಕ ಅನುಮೋದನೆಗೆ ಕಾಯ್ದಿರಿಸಿ ಅನುಷ್ಠಾನಗೊಳಿಸಬೇಕು ಎಂದು ಬಿವೈಎಸ್ ಸದಸ್ಯರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆದರೆ, ನಿರ್ಧಾರವಾಗಿ ತಿಂಗಳು ಕಳೆದರೂ ಈವರೆಗೆ ಇದಕ್ಕೆ ಸಂಬಂಧಿಸಿದ ಸಮಿತಿ ರಚನೆ ಆಗಿಲ್ಲ. ಸದ್ಯ ಈ ಪ್ರಕ್ರಿಯೆಯೂ ಅರ್ಧಕ್ಕೆ ನಿಂತಿದೆ. ಈಗ ಮೇ ಮೊದಲ ವಾರದಲ್ಲೇ 2025-26ನೇ ಸಾಲಿನ ಪದವಿ ಪ್ರಧಾನ ಸಮಾರಂಭ (ಘಟಿಕೋತ್ಸವ) ನಡೆಸಲು ಕುವೆಂಪು ವಿವಿಯು ತಯಾರಿ ಮಾಡಿಕೊಳ್ಳುತ್ತಿರುವುದರಿಂದ ಈ ನಡುವೆ ಮೌಲ್ಯಮಾಪನ ಪ್ರಕ್ರಿಯೆ ಆರಂಭಕ್ಕೆ ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ಹೆಚ್ಚಿದೆ ಎಂಬುದು ವಿವಿ ಮೂಲಗಳ ಮಾಹಿತಿ.ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು!:
ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿಶ್ವವಿದ್ಯಾಲಯವೇ ಈಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೊದಲಲೆಲ್ಲ ಪರೀಕ್ಷೆ ನಡೆದು 15 ದಿನದೊಳಗೆ ಫಲಿತಾಂಶ ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಪರೀಕ್ಷೆ ಮುಗಿದು ಎರಡು ತಿಂಗಳಾದರೂ ಇನ್ನೂ ಫಲಿತಾಂಶ ಪ್ರಕಟಿಸಿಲ್ಲ.ಮೂರನೇ ಸೆಮಿಸ್ಟರ್ ಪಾಸ್ ಆದವರು ಎನ್‌ಇಟಿ ಹಾಗೂ ಎಸ್ಎಲ್ಇಟಿ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಆದರೆ, ಈ ಬಾರಿ ಇನ್ನೂ ಫಲಿತಾಂಶ ಪ್ರಕಟಿಸದ ಪರಿಣಾಮ ಸುಮಾರು 1500 ಮಂದಿ ವಿದ್ಯಾರ್ಥಿಗಳು ಎನ್‌ಇಟಿ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.
ಮೂಲಗಳ ಪ್ರಕರಣ ಸದ್ಯದಲ್ಲೇ ಎನ್‌ಇಟಿ ಹಾಗೂ ಎಸ್‌ಎಲ್‌ಇಟಿ ಪರೀಕ್ಷೆಗಳು ಕಾಲ್ ಆಗಬಹುದು. ಆಗೊಂದು ವೇಳೆ ಈ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸುವುದಕ್ಕೂ ಮುನ್ನನೇ ಫಲಿತಾಂಶ ಪ್ರಕಟವಾಗದಿದ್ದರೆ ಕುವೆಂಪು ವಿವಿ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಬಾರಿಯ ಎನ್‌ಇಟಿ ಹಾಗೂ ಎಸ್ಎಲ್ಇಟಿ ಪರೀಕ್ಷೆ ಬರೆಯುವ ಅರ್ಹತೆಯನ್ನು ಕಳೆದುಕೊಳ್ಳಲಿದ್ದಾರೆ.ಆಡಳಿತ ಮಂಡಳಿ ಇತ್ತ ಗಮನ ಹರಿಸಲಿ
ಮೂರನೇ ಸೆಮಿಸ್ಟರ್ ಪರೀಕ್ಷೆ ಜನವರಿಯಲ್ಲಿಯೇ ಮುಗಿದೆ. ಇನ್ನೂ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಿಲ್ಲ. ಈ ಮಧ್ಯೆ ಏನಾದರೂ ಎನ್‌ಇಟಿ ಪರೀಕ್ಷೆ ಕಾಲ್ ಆದರೆ ನಾವು ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಡಳಿತ ಮಂಡಳಿ ಇದನ್ನು ಪರಿಗಣಿಸಿ ಆದಷ್ಟು ಬೇಗ ಫಲಿತಾಂಶವನ್ನು ಪ್ರಕಟಿಸಬೇಕು. ಇಲ್ಲವಾದರೆ ನಾವು ಈ ಬಾರಿಯ ಎನ್‌ಇಟಿ ಹಾಗೂ ಎಸ್ಎಲ್‌ಇಟಿ ಪರೀಕ್ಷೆಯಿಂದ ದೂರ ಉಳಿಯಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ ಅಳಲು ತೋಡಿಕೊಂಡರು.ಕುವೆಂಪು ವಿವಿಯಲ್ಲಿ ಇನ್ನು ಮುಂದೆ ಏಕ ರೂಪ ಪರೀಕ್ಷಾ ಪದ್ದತಿ ಅನುಸರಿಸುವಂತೆ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆ ಇದನ್ನು ಜಾರಿಗೆ ತರುವ ಸಂಬಂಧ ಚರ್ಚೆ ನಡೆಯುತ್ತಿದೆ. ಹೀಗಾಗಿ ವಿಳಂಬವಾಗಿದೆ. ಇನ್ನೊಂದು ತಿಂಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು.
ಪ್ರೊ.ತಿಮ್ಮರಾಯಪ್ಪ ಕುಲಸಚಿವ (ಪರೀಕ್ಷಾಂಗ), ಕುವೆಂಪು ವಿವಿ.