ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ದೇವಾಲಯಗಳು ಭಕ್ತಿಯ ಕೇಂದ್ರಗಳಾಗಿದ್ದು ಅದರಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹಮಠದ ಶ್ರೀ 1008 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಯಡೇಹಳ್ಳಿ ಗ್ರಾಮದ ಶ‍್ರೀ ಕರಿಬಸವೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀ ಕರಿಬಸವೇಶ್ವರ ನೂತನ ದೇವಾಲಯದ ಶಿಲಾಮಂದಿರ ಪ್ರವೇಶೋತ್ಸವ ಹಾಗೂ ಕಳಸರೋಹಣ ಪ್ರಯಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇವಾಲಯಗಳನ್ನು ಭಕ್ತರು ಸ್ವೇಚ್ಛೆಯಂತೆ ಹಾಗೂ ಭಕ್ತಿಗೆ ನಿಲುಕುವಂತೆ ನಿರ್ಮಾಣ ಮಾಡಬೇಕೇ ಹೊರತು ರಾಜಕೀಯ ನಾಯಕ ಮುಂದೆ ಕೈಚಾಚಬಾರದು. ರಾಜಕಾರಣಿಗಳು ದೇವಾಲಯಕ್ಕೆ ಹಣ ನೀಡುವ ಬದಲು ಅದೇ ಅನುದಾನದಿಂದ ಕೆರೆಗಳ ನಿರ್ಮಾಣ ಹಾಗೂ ಜೀರ್ಣೋದ್ದಾರದಂತಹ ಕಾರ್ಯಗಳನ್ನು ಮಾಡಬೇಕು. ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ ಶಿಕ್ಷಣ, ಹಾಗೂ ಆರೋಗ್ಯ ಸೇವೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪ್ರಸ್ತುತ ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳ ನಡುವೆ ಅಂತರ ಹೆಚ್ಚುತ್ತಿದೆ. ಅಣ್ಣತಮ್ಮ, ಅಕ್ಕತಂಗಿ, ತಂದೆತಾಯಿ, ಎಂಬ ಭಾವನೆಗಳು ಕಡಿಮೆಯಾಗುತ್ತಿದ್ದು, ಕುಟುಂಬಗಳಲ್ಲಿ ಒಡಕು ಮೂಡುತ್ತಿದೆ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಸಂಸ್ಕೃತಿ ಹಾಗೂ ದೈವತ್ವದ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು. ಮೊಬೈಲ್ ಗಳಿಂದ ಮಕ್ಕಳಲ್ಲಿ ಸಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಇತ್ತಿಚೀನ ದಿನಗಳಲ್ಲಿ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮೊಬೈಲ್ ಗೀಳಿನಿಂದಾಗಿ ಜನರು ಬೌದ್ಧಿಕ ಅದಪಥನದತ್ತ ಸಾಗುತ್ತಿರುವುದು ವಿಷಾದನೀಯ ಎಂದರು.


ಇತ್ತೀಚೆಗೆ ದೆಹಲಿಗೆ ತೆರಳಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ಕೊಡಿಸುವ ಕೆಲಸ ಮಾಡಲಾಗಿದ್ದು, ಅದರ ಮುಂದಿನ ಹಂತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯಾರಂಭ ಮಾಡಬೇಕು. ಈ ಯೋಜನೆಯಿಂದ ಹತ್ತಾರು ತಾಲೂಕುಗಳಿಗೆ ಪ್ರಯೋಜನವಾಗುತ್ತದೆ. ರಾಜಕಾರಣಿಗಳು ಇದರಲ್ಲಿ ದುರದ್ದೇಶ ಹುಡಕದೇ ರೈತರ ಹಿತಕೋಸ್ಕರ ತಕ್ಷಣವೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದರು.

ಸಂಸದ ಬಿ.ವೈ.ರಾಘವೇಂದ್ರ, ಯುವಕರು ದುಶ್ಚಟ ಹಾಗೂ ದುರಭ್ಯಾಸಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂತವರಿಗೆ ಯಾವುದೇ ವೈದ್ಯರಿಂದ ಚಿಕಿತ್ಸೆ ಸರಿಹೋಗಲ್ಲ. ಬದಲಾಗಿ ಸಿರಿಗೆರೆ ಶ್ರೀಗಳಂತಹ ಗುರುಗಳ ಮಾರ್ಗದರ್ಶನ ಸಹಕಾರಿಯಾಗುವುದು ಎಂದರು.

ಭಾನುವಾರದಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನೂರಾರು ಜನ ಯುವಕರು ಹಗಲು ರಾತ್ರಿಯೆನ್ನದೇ ಶ್ರಮವಹಿಸಿ ಕೆಲಸ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಅಧ್ಯಕ್ಷತೆಯನ್ನು ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್. ಬಸಪ್ಪ ವಹಿಸಿದ್ದರು. ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, ಶಾಸಕ ಧನಂಜಯ ಸರ್ಜಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ, ಮಾಜಿ ಶಾಸಕ ಕೆ.ಬಿ. ಅಶೋಕನಾಯ್ಕ ಹೆಚ್.ಎಲ್.ಷಡಾಕ್ಷರಿ, ಬಿ.ಕೆ.ಶಿವಕುಮಾರ್, ಕರಿಬಸವೇಶ್ವರ ಸಮಿತಿ ಅಧ್ಯಕ್ಷ ಎಸ್.ಎಂ.ಹಾಲೇಶಪ್ಪ, ಶ್ರೀನಿವಾಸ್, ಎಂ.ಪಾಲಾಕ್ಷಪ್ಪ, ಮೂಡಬಾಗಿಲು ಯುವರಾಜ್, ಗದ್ದೆ ಮಂಜಣ್ಣ, ದೇವರಾಜ್, ಕೆ.ಪಿ. ಕಿರಣ್ ಕುಮಾರ್, ಶಿವಕುಮಾರ್, ಶೇಖರಪ್ಪ, ನಂದ್ಯಪ್ಪ ಇತರರು ಹಾಜರಿದ್ದರು.

ಪಿತ್ತಾರ್ಜಿತ ಆಸ್ತಿಯಲ್ಲಿ ಮಹಿಳೆಗೆ ಪಾಲು ಕಾನೂನು ತೆಗೆಯಿರಿ

ಇತ್ತೀಚೆನ ವರ್ಷಗಳಲ್ಲಿ ಮಹಿಳೆಯುರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು ಕುಟುಂಬಗಳು ಹೊಡೆದು ಹೋಗುತ್ತಿವೆ. ಇದೊಂದು ಕಾನೂನು ನಮಗೇಕೋ ಸರಿ ಅನಿಸುತ್ತಿಲ್ಲ. ತಂದೆತಾಯಿ, ಅಣ್ಣತಮ್ಮಂದಿರು ಸಹೋದರಿಯರ ಮದುವೆಗಾಗಿ ಸಾಲಸೂಲ ಮಾಡಿ, ಅಥವಾ ಆಸ್ತಿ ಮಾರಿ ಮದುವೆ ಮಾಡಿದ್ದರೂ ಕೂಡ ಮಹಿಳೆಯರು ಇಂದು ಉಳಿದಿರುವ ಆಸ್ತಿಯಲ್ಲಿ ಪಾಲು ಕೇಳುತ್ತಿರುವುದು ತಪ್ಪು. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಾನೂನನ್ನು ತೆದುಹಾಕಬೇಕು. ಕಾನೂನುಗಳು ಜನರ ಹಿತವನ್ನು ಬಯಸಬೇಕೇ ಹೊರತು ಸಂಬಂಧವನ್ನು ಕೆಡಿಸಬಾರದು. ಜನರ ಹಿತಕ್ಕೆ ವಿರುದ್ದ ಇರುವ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.