ಬಳ್ಳಾರಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಿಸದೆ ಕೇವಲ ಸೀರೆ ನೀಡುವ ಸರ್ಕಾರದ ಪ್ರಸ್ತಾಪವನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹಿತ ಕಾಯುವ ನಿರೀಕ್ಷೆಯಿತ್ತು. ಆದರೆ, ಸರ್ಕಾರ ದುಡಿವ ಮಹಿಳೆಯರನ್ನು ಕಡೆಗಣಿಸಿದೆ. ಗೌರವಧನ ಹೆಚ್ಚಳ ಮಾಡುವ ಬದಲು ಸೀರೆ ನೀಡುವುದಾಗಿ ಘೋಷಿಸಿದೆ. ಮುಖ್ಯಮಂತ್ರಿ ಈ ಧೋರಣೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ ಅಂಗನವಾಡಿ ಕಾರ್ಯಕರ್ತೆಯರ ಹಿತ ಕಾಯುವ ಯಾವುದೇ ಯೋಜನೆ ಜಾರಿಗೊಳಸಲಿಲ್ಲ. ಬಹುವರ್ಷಗಳ ಬೇಡಿಕೆಯಾದ ಗೌರವಧನವನ್ನು ಸಹ ಹೆಚ್ಚಳ ಮಾಡಲಿಲ್ಲ. ಕಳೆದ ವರ್ಷ ಬರೀ 1 ಸಾವಿರ ರು. ಮಾತ್ರ ಹೆಚ್ಚಳದ ಘೋಷಣೆ ಮಾಡಲಾಯಿತೇ ವಿನಃ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುಂಚೆ ನೀಡಿದ ಭರವಸೆಯಂತೆ ₹15 ಸಾವಿರ ಗೌರವಧನ ನೀಡುವ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.2011ನೇ ಇಸ್ವಿಯಿಂದ ಅಂಗನವಾಡಿಗಳಲ್ಲಿ ದುಡಿದು ನಿವೃತ್ತಿಯಾಗಿರುವ ವಯೋವೃದ್ಧ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿ ಮಾಡದೆ 2023ರ ಬಳಿಕ ನಿವೃತ್ತಿಯಾಗುವವರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ ಜಾರಿಗೊಳಿಸಲಾಗಿದೆ. ಇದರಿಂದ ಸುಮಾರು 15ರಿಂದ 20 ಸಾವಿರದಷ್ಟು ನಿವೃತ್ತ ವಯೋವೃದ್ಧ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿಯಿಂದ ವಂಚಿತರಾಗಿದ್ದಾರೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಗೌರವಧನ ಹೆಚ್ಚಳ ಹಾಗೂ ಗ್ರಾಚ್ಯುಟಿ ಘೋಷಣೆಯ ನಿರೀಕ್ಷೆಯಲ್ಲಿದ್ದೆವು. ನಮ್ಮ ನಿರೀಕ್ಷೆ ಹುಸಿಗೊಂಡಿದೆ. ದುಡಿವ ಮಹಿಳೆಯರ ಶ್ರಮಕ್ಕೆ ತಕ್ಕಂತೆ ಗೌರವಧನ ಹೆಚ್ಚಳ ಮಾಡುವ ಬದಲು ಸೀರೆ ನೀಡಲು ನಿರ್ಧರಿಸಿರುವುದು ಅತ್ಯಂತ ಖಂಡನೀಯ. ನಮಗೆ ಸೀರೆ ಬೇಡ-ಗೌರವಧನ ಹೆಚ್ಚಿಸಿ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷೆ ಹಾಗೂ ರಾಜ್ಯ ಕಾರ್ಯದರ್ಶಿ ಆರ್ಕಾಣಿ ಅವರು ಆಗ್ರಹಿಸಿದರು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಪತ್ರ ಕಳುಹಿಸಿಕೊಟ್ಟರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ಮಂಗಮ್ಮ, ಎರ್ರೆಮ್ಮ, ಸೌಭಾಗ್ಯ, ಪಿ.ಡಿ.ಮೀನಾಕುಮಾರಿ, ವೀರಮ್ಮ, ಬಿ.ಕೆ.ಶಾರದಾ, ರತ್ನಮ್ಮ, ಪಿ.ಕಲಾವತಿ, ಶಿವಗಂಗಮ್ಮ, ಟಿ.ಇಂದಿರಾ, ಮಂಗಳಗೌರಿ, ಸತ್ಯಸಾವಿತ್ರಿ, ಪದ್ಮಾವತಿ, ಸುನೀತಾ, ಕೊಂಡಮ್ಮ, ಜಮೇಲಾ, ಟಿ.ಪುಷ್ಪಾವತಿ, ಜಗದೀಶ್ವರಿ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.