ಸಾರಾಂಶ
ಕಟ್ಟೆಮಾಡುವಿನ ಎಲ್ಲ ಜನಾಂಗ ಬಾಂಧವರು ಒಟ್ಟಾಗಿ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮೃತ್ಯುಂಜಯನ ಸನ್ನಿಧಿಯಲ್ಲಿ ಭಕ್ತಿ ಇರಲಿ, ಶಕ್ತಿ ಪ್ರದರ್ಶನ ಬೇಡ ಎಂದು ಗ್ರಾಮದ ಬಿಲ್ಲವ ಸೇವಾ ಸಮಾಜ ಮನವಿ ಮಾಡಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡುವಿನ ಎಲ್ಲ ಜನಾಂಗ ಬಾಂಧವರು ಒಟ್ಟಾಗಿ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮೃತ್ಯುಂಜಯನ ಸನ್ನಿಧಿಯಲ್ಲಿ ಭಕ್ತಿ ಇರಲಿ, ಶಕ್ತಿ ಪ್ರದರ್ಶನ ಬೇಡ ಎಂದು ಗ್ರಾಮದ ಬಿಲ್ಲವ ಸೇವಾ ಸಮಾಜ ಮನವಿ ಮಾಡಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಸದಸ್ಯ ರಘು ರಾಜಕುಮಾರ್, ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಜಾತ್ರೋತ್ಸವದ ಸಂದರ್ಭ ನಡೆದ ಘಟನೆ ತೀವ್ರ ಬೇಸರವನ್ನುಂಟು ಮಾಡಿದೆ. ದೇವರು ಜಳಕಕ್ಕೆ ತೆರಳುವ ಪರಂಬು ಪೈಸಾರಿಯ ಉದ್ದಕ್ಕೂ ಅಲ್ಲಿನ ನಿವಾಸಿಗಳು ಹಾದಿಯನ್ನು ಸ್ವಚ್ಛಗೊಳಿಸಿ ಹೂವಿನ ರಂಗೋಲಿಯನ್ನಿಟ್ಟು, ಭಕ್ತಾದಿಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡಿ ದೇವರ ಆಗಮನವನ್ನು ಎದುರು ನೋಡುತ್ತಿದ್ದರು. ಆದರೆ ಇದೇ ಅವಧಿಯಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ವಿಷಾದನೀಯ ಎಂದರು.
ದೇವಸ್ಥಾನ ಸಮಿತಿಯಲ್ಲಿ ಗ್ರಾಮದ ಎಲ್ಲ ಜನಾಂಗದ ಪ್ರತಿನಿಧಿಗಳು ಸೇರಿದಂತೆ ಒಟ್ಟು 43 ಸದಸ್ಯರುಗಳಿದ್ದಾರೆ. ಇವರೆಲ್ಲರ ಒಮ್ಮತದ ತೀರ್ಮಾನದಂತೆ ಅಧ್ಯಕ್ಷರನ್ನಾಗಿ ಗೌಡ ಸಮುದಾಯದ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ದೇವಸ್ಥಾನದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಎಲ್ಲ ಜನಾಂಗ ಬಾಂಧವರು ಒಟ್ಟಾಗಿ ಮಾಡಿಕೊಂಡು ಬರುತ್ತಿದ್ದೇವೆ. ದೇವಸ್ಥಾನದಲ್ಲಿ ಎಲ್ಲರ ತೀರ್ಮಾನದಂತೆ ಪಂಚೆ, ಅಂಗಿ ಧರಿಸಬೇಕೆಂಬ ವಸ್ತ್ರ ಸಂಹಿತೆ ನಿಯಮ ಮಾಡಲಾಗಿದೆ. ಆದರೆ ಉತ್ಸವದ ಸಂದರ್ಭ ನಡೆದ ಅಹಿತಕರ ಘಟನೆ ಮತ್ತೆ ಮರುಕಳಿಸುವುದು ಬೇಡ, ಜನಾಂಗಗಳ ನಡುವೆ ಒಡಕು ಮೂಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮಹಾ ಮೃತ್ಯುಂಜಯ ದೇವೆ ಸೇವೆ ಮಾಡಬೇಕಾಗಿದೆ ಎಂದು ರಘು ರಾಜಕುಮಾರ್ ತಿಳಿಸಿದರು.ಜಿಲ್ಲಾಡಳಿತದ ಸೂಚನೆಯಂತೆ ಗೊಂದಲ ನಿವಾರಣೆಗೆ ಅಗತ್ಯ ನಿರ್ಧಾರ ಕೈಗೊಳ್ಳಲು ಗ್ರಾಮಸ್ಥರ ಸಭೆ ನಡೆಯಬೇಕಾಗಿತ್ತದರೂ ನಿರ್ಬಂಧಕಾಜ್ಞೆಗಳ ಹಿನ್ನೆಲೆಯನ್ನು ಅದು ಸಾಧ್ಯವಾಗಿಲ್ಲ. ಜ.6ರಂದು ದೇವಸ್ಥಾನ ಸಮಿತಿಯ ಸದಸ್ಯರುಗಳಿಗೆ ಸೀಮಿತವಾಗಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರಾದ ಪಿ.ಕೆ. ಧನಂಜಯ, ಬಿಲ್ಲವ ಸಮಾಜ ಸೇವಾ ಸಮಿತಿಯ ಸದಸ್ಯರಾದ ಬಿ.ಪಿ. ಬಾಲಕೃಷ್ಣ, ಬಿ.ಬಿ. ಭರತ್ ಕುಮಾರ್, ಬಿಲ್ಲವರ ರಂಜು ಮಹೇಶ್ ಹಾಗೂ ಬಿ.ಸಿ. ಯತೀನ್ ಹಾಜರಿದ್ದರು.