ಜಿಲ್ಲೆಯ ಹೆಸರು ಬದಲಾವಣೆಗೆ ಅಂಕಿತ ಬೇಡ

| Published : Jul 30 2024, 12:34 AM IST

ಸಾರಾಂಶ

ರಾಮನಗರ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು. ವರದಿ ಸಂಪೂರ್ಣ ಪರಿಶೀಲಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆಗ್ರಹಿಸಿದರು.

ರಾಮನಗರ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು. ವರದಿ ಸಂಪೂರ್ಣ ಪರಿಶೀಲಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸಮಸ್ಯೆ, ಕಾವೇರಿ ವಿಚಾರ ಸೇರಿದಂತೆ ಹತ್ತಾರು ಜ್ವಲಂತ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು, ಜಿಲ್ಲೆಯ ಹೆಸರು ಬದಲಾವಣೆಗೆ ಮಹತ್ವ ನೀಡುತ್ತಿರುವುದು ಏಕೆಂದು ಪ್ರಶ್ನಿಸಿದರು.

ಹೆಸರು ಬದಲಾವಣೆಗೆ ಕೆಲವೇ ಕೆಲವರು ಮನವಿ ನೀಡಿದ ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲೆಯ ಶಾಸಕರು ಹಾಗೂ ಅವರ ಹಿಂಬಾಲಕರ ಭೂಮಿಗೆ ಬೆಲೆ ಹೆಚ್ಚಿಸಲು ಹೆಸರು ಬದಲಾವಣೆಗೆ ಹೊರಟಿದ್ದಾರೆ. ಹೆಸರು ಬದಲಾವಣೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರಾಮನಾಮ ಹೊಂದಿರುವ ರಾಮನಗರ ಜಿಲ್ಲೆಯ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಈ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ಜನವಿರೋಧಿಯಾಗಿದೆ. ರಾಮನ ಹೆಸರನ್ನು ಹೊಂದಿರುವ ಜಿಲ್ಲೆ ಬೇರೆಲ್ಲೂ ಇಲ್ಲ. ಮರುನಾಮಕರಣಕ್ಕೆ ಕಾಂಗ್ರೆಸ್ ತರಾತುರಿ ನೋಡಿದರೆ, ಎಲ್ಲೋ ಒಂದು ಕಡೆ ರಾಮನ ಹೆಸರಿರುವುದೇ ಅವರಿಗೆ ತೊಂದರೆ ಆದಂತೆ ತೋರುತ್ತಿದೆ ಎಂದರು.

ಅಂದೇ ವಿರೋಧಿಸಬೇಕಿತ್ತು:

ಹೆಸರಿನ ಕುರಿತು ರಾಮನಗರ ಜಿಲ್ಲೆಯಾದ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ವಿರೋಧಿಸಬೇಕಿತ್ತು. ಆದರೆ, ಅದನ್ನು ಮಾಡದೇ ಈಗ ಹೆಸರು ಬದಲಾವಣೆಗೆ ಹೊರಟಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ಅಡಿ ಜಾಗ ಕೊಳ್ಳಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಮುಂದೆ ಮತ್ತಷ್ಟು ದುಬಾರಿಯಾದಲ್ಲಿ ಬಡವರ ಸೂರಿನ ಕನಸು ನನಸಾಗುವುದಿಲ್ಲ ಎಂದರು.

ಜಿಲ್ಲೆಯಲ್ಲಿರುವ ಜನ ನಗರ ಪ್ರದೇಶಕ್ಕೆ ಬಂದು ಒಂದೆರಡು ಗಂಟೆಗಳಲ್ಲಿ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಾರೆ. ಈಗಾಗಲೇ ಬೆಂಗಳೂರು ದಕ್ಷಿಣ ತಾಲೂಕು ಇದೆ. ಲೋಕಸಭಾ ಕ್ಷೇತ್ರ ಇದೆ, ಹಾಗಾದರೆ ಇದನ್ನು ಬೆಂಗಳೂರು ದಕ್ಷಿಣ ಮಾಡಿ ಎರಡೆರಡು ಜಿಲ್ಲೆ ಮಾಡುತ್ತಾರೆಯೇ? ಈ ರೀತಿ ತರಾತುರಿಯಲ್ಲಿ ಜಿಲ್ಲೆಯ ಹೆಸರು ಬದಲಾವಣೆಗೆ ಹೊರಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನಡೆ ಕೇವಲ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಅವರು, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಪಾಲರ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸುತ್ತೇವೆ ಎಂದರು.

ರೈತ ಸಂಘದ ಮುಖಂಡ ಮಲ್ಲಯ್ಯ ಮಾತನಾಡಿ, ರಾಜಕಾರಣಿಗಳ ಹುಳುಕು ಮುಚ್ಚಲು ಅಭಿವೃದ್ಧಿ ಹೆಸರೇಳುತ್ತಿದಾರೆ. ಜಿಲ್ಲೆಯ ಹೆಸರು ಬದಲಾವಣೆಗೆ ರೈತರು ಹಾಗೂ ಸಾರ್ವಜನಿಕರು ಒಪ್ಪುವುದಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಹೆಸರು ಬದಲಾವಣೆಯಿಂದ ಅಭಿವೃದ್ಧಿ ಆಗುವುದಿದ್ದರೆ ಇವರು ಇಡೀ ರಾಜ್ಯವನ್ನೇ ಬೆಂಗಳೂರು ಮಾಡಬಹುದಲ್ಲವೇ. ಆಗ ಇವರ ಅಭಿವೃದ್ಧಿ ಇಡೀ ರಾಜ್ಯಕ್ಕೆ ವಿಸ್ತರಣೆ ಆಗುತ್ತದೆ ಎಂದರು.

ಜಿಲ್ಲೆಯಲ್ಲಿನ ರೈತರು ಯಾರೂ ಭೂಮಿ ಬೆಲೆ ಹೆಚ್ಚು ಮಾಡಿ ಎಂದು ಕೇಳಿಲ್ಲ. ನಾವು ಜಿಲ್ಲೆ ಹೆಸರು ಬದಲಾವಣೆ ಮಾಡಿ ಎಂದೂ ಕೇಳಿಲ್ಲ. ರೈತರು ಬೆಳೆದ ಉತ್ಪನ್ನಕ್ಕೆ ಬೆಲೆ ಕೊಡಿ ಎಂದು ಕೇಳಿದ್ದೇವೆ ಹೊರತು ಇಂತ ವಿಚಾರ ಕೇಳಿಲ್ಲ ಎಂದು ಹೇಳಿದರು.

ಪೂರ್ವನಿಯೋಜಿತ ಸಂಚು:

ಕನ್ನಡಪರ ಸಂಘಟನೆಗಳ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಇಡೀ ರಾಜ್ಯದಲ್ಲಿ ಹೊಸ ತಾಲೂಕು, ಜಿಲ್ಲೆ ರಚನೆ ಬಗ್ಗೆ ಹೋರಾಟ ನಡೆಯುತ್ತಿದ್ದರೂ ಆ ಕುರಿತು ಸರ್ಕಾರ ಗಮನ ನೀಡುತ್ತಿಲ್ಲ. ಅದರೆ, ರಾಜಕೀಯಕ್ಕೋಸ್ಕರ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗೋಸ್ಕರ ಜಿಲ್ಲೆ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಮತ ನೀಡಿದ ಮತದಾರರನ್ನು ಒಂದು ಮಾತನ್ನೂ ಕೇಳದೆ ಹಿಟ್ಲರ್ ರೀತಿ ವರ್ತನೆ ಮಾಡುತ್ತಿದ್ದಾರೆ. ಕನ್ನಡಪರ, ದಲಿತಪರ, ಪ್ರಗತಿಪರರ ಹೋರಾಟ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ನೀಡುತ್ತಿಲ್ಲ. ಇಲ್ಲಿನ ಮತದಾರರು ಮತ ನೀಡಿದ್ದಕ್ಕೆ ಆಸ್ತಿ ಮಾರಿಕೊಂಡು ಗುಳೆ ಹೋಗುವಂತೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ನಡೆ ಜನವಿರೋಧಿಯಾಗಿದ್ದು ಇದು ಜಿಲ್ಲೆಯ ಇಬ್ಬರು ಮೂವರು ಕಾಂಗ್ರೇಸ್ ನಾಯಕರ ಪೂರ್ವ ನಿಯೋಜಿತ ಸಂಚಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ಮುನಿರಾಜು, ಕನ್ನಡಪರ ಸಂಘಟನೆ ಮುಖಂಡರಾದ ನಿಲೇಶ್, ಶಿವುಗೌಡ, ಐಜೂರುಜಗದೀಶ್, ರಾಜು, ಭಾಸ್ಕರ್, ನಾರಾಯಣ್, ನಾಗರಾಜು, ಪ್ರಶಾಂತ್, ರಾಮೇಗೌಡ ಮುಂತಾದವರಿದ್ದರು.