ಅಧ್ಯಯನಕ್ಕೆ ಯಾವ ವಿಷಯವೂ ಕಷ್ಟವಲ್ಲ: ಸಿ. ಪ್ರದೀಪಕುಮಾರ

| Published : May 23 2024, 01:02 AM IST

ಸಾರಾಂಶ

ಹಾನಗಲ್ಲಿನಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರ ರಜಾ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳಿಗೆ ಶಾಲಾ ಪೂರ್ವ ಆಂಗ್ಲ ಭಾಷಾ, ವಿಜ್ಞಾನ, ಗಣಿತ ವಿಷಯದ ಉಚಿತ ಬೋಧನಾ ಶಿಬಿರ ಹಮ್ಮಿಕೊಂಡಿತ್ತು.

ಹಾನಗಲ್ಲ: ಗಣಿತ ಕಬ್ಬಿಣದ ಕಡಲೆ ಅಲ್ಲ, ಅದು ಹುರಿಗಡಲೆ. ಸರಿಯಾಗಿ ಅರಿತು ಅನುಸರಿಸಿದರೆ ಯಾವುದೇ ವಿಷಯ ಕಠಿಣವೂ ಅಲ್ಲ, ಅಧ್ಯಯನಕ್ಕೆ ಯಾವುದೂ ಕಷ್ಟವಲ್ಲ ಎಂದು ಹಳ್ಳಿಬೈಲ ಮೊರಾರ್ಜಿ ವಸತಿ ಶಾಲೆಯ ಗಣಿತ ಶಿಕ್ಷಕ, ಶಿಬಿರದ ಸಂಪನ್ಮೂಲ ವ್ಯಕ್ತಿ ಸಿ. ಪ್ರದೀಪಕುಮಾರ ತಿಳಿಸಿದರು.

ಹಾನಗಲ್ಲಿನಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರ ರಜಾ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳಿಗೆ ಶಾಲಾ ಪೂರ್ವ ಆಂಗ್ಲ ಭಾಷಾ, ವಿಜ್ಞಾನ, ಗಣಿತ ವಿಷಯದ ಉಚಿತ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಪರೀಕ್ಷೆಯೇ ಬದುಕಲ್ಲ. ಬದುಕಿಗಾಗಿ ಹಲವು ಪರೀಕ್ಷೆಗಳಿವೆ. ಸಾಧಕನಿಗೆ ಸರಿಯಾದ ಧ್ಯೇಯ, ಗುರಿ, ಪರಿಶ್ರಮಿಸುವ ಸಂಕಲ್ಪ ಇರಲಿ. ಎಲ್ಲರಲ್ಲೂ ಪ್ರತಿಭೆ ಇದೆ. ಅದು ಯಾವುದಕ್ಕಾಗಿ ಬಳಕೆಯಾಗುತ್ತಿದೆ ಎಂಬುದು ಮುಖ್ಯ. ಬುದ್ಧಿ ಅಪರಾಧಕ್ಕೆ ಬಳಕೆಯಾಗುವುದು ಬೇಡ. ಒಳ್ಳೆಯವರ ಸಹವಾಸ ಮಾಡಿ. ನಾಳಿನ ಎಲ್ಲ ಸವಾಲುಗಳನ್ನು ಎದುರಿಸಲು ಈಗಲೇ ಸಿದ್ಧರಾಗಿರಿ. ಶಾಲೆ ನಮ್ಮ ಬಾಳನ್ನು ಬೆಳಗುವ ದಿವ್ಯ ಮಂದಿರ. ಸಮಯ ಯಾರಿಗೂ ಕಾಯುವುದಿಲ್ಲ. ಸಮಯದ ಸದುಪಯೋಗವೇ ನಿಜವಾದ ಸಂಪತ್ತಾಗಬಲ್ಲದು ಎಂದರು.

ಮುಖ್ಯ ಅತಿಥಿಯಾಗಿ ಕನ್ನಡ ವಿಷಯದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ನಿರಂಜನ ಗುಡಿ ಮಾತನಾಡಿ, ಬದುಕಿಗೆ ಶಿಸ್ತು ಇದ್ದರೆ ಓದಿಗೂ ಶಿಸ್ತು ಇರುತ್ತದೆ. ಕಲಿಕೆ ಒಂದು ಸಂಭ್ರಮವಾಗಬೇಕು. ಪರೀಕ್ಷೆ ಹಬ್ಬವಾಗಬೇಕು. ಗುರಿ ಗುರು ಆಯ್ಕೆ ನಿಮ್ಮದು. ಅದರಲ್ಲಿ ಶ್ರದ್ಧೆಯಿರಬೇಕು. ಜ್ಞಾನ ಸಂಪಾದನೆಯ ಕಾಲದಲ್ಲಿ ದಾರಿ ತಪ್ಪಿ ಬೇಡವಾದದ್ದನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಸರಿಯಾದ ಯೋಜನೆ ಯೋಚನೆ ಇದ್ದರೆ ವಿದ್ಯಾರ್ಥಿ ಬದುಕನ್ನು ಸರಿಯಾಗಿ ಕಟ್ಟಿಕೊಳ್ಳಬಲ್ಲ. ಪರೀಕ್ಷಾ ಭಯ ಬೇಡ. ಪರೀಕ್ಷೆ ಬಂದಾಗ ಓದುವ, ಆ ವರೆಗೆ ಕಾಲ ಹರಣ ಮಾಡುವ ಮನೋಸ್ಥಿತಿಯಿಂದ ಹೊರಬನ್ನಿ. ಈಗ ಹೊಸ ಶೈಕ್ಷಣಿಕ ವರ್ಷ ಆರಂಭದ ಸನಿಹದಲ್ಲಿದ್ದೇವೆ. ಈಗಲೇ ಬರುವ ವರ್ಷದ ಅಧ್ಯಯನಕ್ಕೆ ಸಿದ್ಧತೆ ಮಾಡಿಕೊಂಡು, ಓದು ನಿಮ್ಮ ಗುರಿಯಾದರೆ ಪರೀಕ್ಷೆ ಅತ್ಯಂತ ಹಗುರವಾಗುತ್ತದೆ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಪುಸ್ತಕದಲ್ಲಿನ ಹಿರಿಯರ ಅನುಭವದ ಬರಹಗಳು ನಮ್ಮ ಮಸ್ತಕದಲ್ಲಿ ಚಿಂತನೆಗೆ ಅವಕಾಶ ಮಾಡಿಕೊಡಬೇಕು. ಬದುಕಿಗಾಗಿಯೇ ಕಲಿಕೆ. ಆದರೆ ಕಲಿಯುವಿಕೆ ಧ್ಯಾನಸ್ಥವಾಗಿರಬೇಕು. ಇಂದಿನ ಓದನ್ನು ನಾಳೆ ದೂಡುವ ಸೋಂಬೇರಿತನ ನಮ್ಮನ್ನು ಆಲಸ್ಯದ ಅಟ್ಟಹಾಸದ ಮೂಲಕ ಶೈಕ್ಷಣಿಕ ವೈಫಲ್ಯಕ್ಕೆ ಮುನ್ನುಡಿ ಬರೆಯುತ್ತದೆ. ಅದು ಬದುಕಿನ ವೈಫಲ್ಯವೂ ಹೌದು. ಅತ್ಯಂತ ಎಚ್ಚರಿಕೆಯಿಂದ ಶಾಲಾ ದಿನಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಗುರುವಿನ ಮಾರ್ಗದರ್ಶನ ಬರಿ ಶಾಲಾ ಪರೀಕ್ಷೆಗಲ್ಲ. ಅದು ಬದುಕಿನ ಪರೀಕ್ಷೆ ಪಾಸಾಗಲೂ ಸಹಕಾರಿ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ ಆಶಯ ನುಡಿ ನುಡಿದು, ಪಾಲಕ, ಶಿಕ್ಷಕರ ಪರಿಶ್ರಮಕ್ಕೆ ವಿದ್ಯಾರ್ಥಿ ಫಲ ನೀಡುವ ಗುರಿ ಹೊಂದಬೇಕು ಎಂದರು.

ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕ ನಾಗರಾಜ ವಡ್ಡರ, ಯುವ ನ್ಯಾಯವಾದಿ ಸಿದ್ದು ಇಂಗಳಗಿ, ಮಂಜುನಾಥ ಬಾರ್ಕಿ, ಗಿರೀಶ ಅಂಬಿಗೇರ ಇದ್ದರು.

ಉಚಿತ ಮಾರ್ಗದರ್ಶನ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸಿ. ಪ್ರದೀಪಕುಮಾರ ಹಾಗೂ ನಾಗರಾಜ ವಡ್ಡರ ಅವರನ್ನು ಗೌರವಿಸಲಾಯಿತು. ತರಬೇತಿ ಶಿಬಿರದ ವಿದ್ಯಾರ್ಥಿಗಳಾದ ಸಿಂಚನಾ ಅಂಬಿಗೇರ, ಅಭಿಷೇಕ, ವಿದ್ಯಾ ಕಟ್ಟಿ, ಭೀಮು ತಮ್ಮ ಅನುಭವ ಹಂಚಿಕೊಂಡರು.

ಪ್ರಾರ್ಥನಾ, ವರ್ಷಿಣಿ, ಮಂಗಳಾ ಪ್ರಾರ್ಥನೆ ಹಾಡಿದರು. ಲಾವಣ್ಯಾ ಕಲಾಲ ಸ್ವಾಗತಿಸಿದರು. ಗಿರೀಶ ಅಂಬಿಗೇರ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು.